ಹಿಮಾಲಯದ ಎತ್ತರದ ಪರ್ವತಗಳ ನಡುವೆ ನೆಲೆಸಿರುವ, ಪ್ರಕೃತಿಯ ಅದ್ಭುತ ಸೌಂದರ್ಯವನ್ನು ತನ್ನೊಳಗೆ ಅಡಗಿಸಿಕೊಂಡಿರುವ ಪುಟ್ಟ ಹಳ್ಳಿಯೇ ʻಚಿತ್ಕುಲ್ʼ. ಹಿಮಾಚಲ ಪ್ರದೇಶದ (Himachal Pradesh) ಕಿನ್ನೌರ್ (Kinnaur) ಜಿಲ್ಲೆಯಲ್ಲಿರುವ ಈ ಗ್ರಾಮವನ್ನು ಭಾರತದ ಕೊನೆಯ ವಾಸಯೋಗ್ಯ ಹಳ್ಳಿ ಎಂದು ಗುರುತಿಸಲಾಗುತ್ತದೆ. ಬಸ್ಪಾ ನದಿಯ ದಡದಲ್ಲಿ ನೆಲೆಗೊಂಡಿರುವ ಈ ತಾಣವು ಹಿಮದಿಂದ ಆವೃತವಾದ ಶಿಖರಗಳು, ಹಸಿರಿನಿಂದ ಕಂಗೊಳಿಸುವ ಕಣಿವೆಗಳು, ಸೇಬಿನ ತೋಟಗಳು ಹಾಗೂ ಮರದ ಸಾಂಪ್ರದಾಯಿಕ ಮನೆಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಪ್ರತಿ ವರ್ಷ ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಚಿತ್ಕುಲ್‌ಗೆ (Chitkul) ಆಗಮಿಸುತ್ತಾರೆ. `ಹಿಂದೂಸ್ತಾನ್ ಕಾ ಆಖ್ರಿ ಗಾಂವ್’ ಎಂಬ ಹೆಸರಿನಿಂದಲೂ ಪ್ರಸಿದ್ಧಿ ಪಡೆದಿರುವ ಈ ಸ್ಥಳವು ಪ್ರಕೃತಿ ಪ್ರಿಯರು, ಟ್ರೆಕ್ಕಿಂಗ್ ಮಾಡುವವರು, ಛಾಯಾಗ್ರಹಣದ ಆಸಕ್ತರು ಹಾಗೂ ನೆಮ್ಮದಿಯ ಪ್ರವಾಸವನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ನೀವು ಕೂಡ ಚಿತ್ಕುಲ್‌ಗೆ ತೆರಳಲು ಯೋಜಿಸುತ್ತಿದ್ದರೆ, ಯಾವ ಸಮಯದಲ್ಲಿ ಹೋಗಬೇಕು, ಹೇಗೆ ತಲುಪಬೇಕು, ಎಲ್ಲಿ ಉಳಿಯಬೇಕು ಮತ್ತು ಅಲ್ಲಿನ ಪ್ರಮುಖ ಆಕರ್ಷಣೆಗಳು ಯಾವುವು ಎಂಬ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.
ಚಿತ್ಕುಲ್ ಎಲ್ಲಿದೆ?
ಹಿಮಾಚಲ ಪ್ರದೇಶದ ಪ್ರಸಿದ್ಧ ʼಸಾಂಗ್ಲಾ ಕಣಿವೆಯʼ ಕೊನೆಯ ಭಾಗದಲ್ಲಿರುವ ಚಿತ್ಕುಲ್, ಬಾಸ್ಪಾ ನದಿಯ ದಡದಲ್ಲಿದೆ. ಸಾಂಗ್ಲಾದಿಂದ ಸುಮಾರು 24 ಕಿಲೋಮೀಟರ್ ಹಾಗೂ ಶಿಮ್ಲಾದಿಂದ ಸುಮಾರು 250 ಕಿಲೋಮೀಟರ್ ದೂರದಲ್ಲಿರುವ ಈ ಹಳ್ಳಿಗೆ ರಸ್ತೆ ಮಾರ್ಗದ ಮೂಲಕ ತಲುಪಬಹುದು. ಚಳಿಗಾಲದಲ್ಲಿ ಭಾರೀ ಹಿಮಪಾತವಾಗುವ ಕಾರಣ ಕೆಲವೊಮ್ಮೆ ರಸ್ತೆ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ.
ಚಿತ್ಕುಲ್‌ನ ಇತಿಹಾಸವೂ ಅಷ್ಟೇ ರೋಚಕವಾಗಿದೆ. ಚಿತ್ಕುಲ್ ಸಮುದ್ರ ಮಟ್ಟದಿಂದ ಸುಮಾರು 3,450 ಮೀಟರ್ (11,320 ಅಡಿ) ಎತ್ತರದಲ್ಲಿದೆ. ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಭಾರತ-ಟಿಬೆಟ್ ಗಡಿ ಆರಂಭವಾಗುತ್ತದೆ. ಶತಮಾನಗಳ ಹಿಂದೆ ಭಾರತ ಮತ್ತು ಟಿಬೆಟ್ ನಡುವಿನ ವ್ಯಾಪಾರ ಮಾರ್ಗದಲ್ಲಿ ಈ ಹಳ್ಳಿ ಪ್ರಮುಖ ತಂಗುದಾಣವಾಗಿತ್ತು. ಉಪ್ಪು, ಉಣ್ಣೆ ಹಾಗೂ ಇತರ ವಸ್ತುಗಳ ವ್ಯಾಪಾರಕ್ಕಾಗಿ ವ್ಯಾಪಾರಿಗಳು ಈ ಮಾರ್ಗವನ್ನು ಬಳಸುತ್ತಿದ್ದರು. ಗಡಿ ನಿಯಂತ್ರಣ ಬಿಗಿಯಾದ ಬಳಿಕ ಈ ವ್ಯಾಪಾರ ನಿಂತರೂ, ಅದರ ನೆನಪುಗಳು ಇಂದಿಗೂ ಸ್ಥಳೀಯರ ಜೀವನಶೈಲಿಯಲ್ಲಿ ಕಾಣಸಿಗುತ್ತವೆ.
ಈ ಹಳ್ಳಿಯ ಪ್ರಮುಖ ಆಕರ್ಷಣೆಯೆಂದರೆ ಅದರ ನೈಸರ್ಗಿಕ ಸೌಂದರ್ಯ. ಬಾಸ್ಪಾ ನದಿಯ ದಡದಲ್ಲಿ ನಿಂತು ಹಿಮಾಲಯದ ಶಿಖರಗಳನ್ನು ನೋಡುವ ಅನುಭವವನ್ನು ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲ. ವಸಂತ ಮತ್ತು ಬೇಸಿಗೆಯಲ್ಲಿ ಹಸಿರು ಹುಲ್ಲುಗಾವಲುಗಳು ಕಣ್ಣಿಗೆ ಹಬ್ಬವಾಗಿದ್ದರೆ, ಶರತ್ಕಾಲದಲ್ಲಿ ಮರಗಳ ಎಲೆಗಳು ಬಂಗಾರದ ಬಣ್ಣಕ್ಕೆ ತಿರುಗಿ ಇಡೀ ಕಣಿವೆಯನ್ನೇ ಚಿತ್ರಕಲೆಯಂತೆ ಅಲಂಕರಿಸುತ್ತವೆ. ಚಳಿಗಾಲದಲ್ಲಿ ಮಾತ್ರ ಇಡೀ ಹಳ್ಳಿ ಹಿಮದ ಹೊದಿಕೆಯಲ್ಲಿ ಮುಚ್ಚಿಕೊಂಡು ಕನಸಿನ ಲೋಕದಂತೆ ಕಾಣುತ್ತದೆ.
ಚಿತ್ಕುಲ್‌ನ ಸಾಂಪ್ರದಾಯಿಕ ಮರದ ಮನೆಗಳು ಮತ್ತು ಸ್ಥಳೀಯ ಕಿನ್ನೌರಿ ಶೈಲಿಯ ವಾಸ್ತುಶಿಲ್ಪವೂ ಪ್ರವಾಸಿಗರನ್ನು ಸೆಳೆಯುತ್ತದೆ. ಕಲ್ಲು ಮತ್ತು ಮರದ ಸಂಯೋಜನೆಯಲ್ಲಿ ನಿರ್ಮಿಸಿರುವ ಮನೆಗಳು ಹಿಮಾಚಲದ ಪರ್ವತ ಪ್ರದೇಶದ ಹವಾಮಾನಕ್ಕೆ ಅತ್ಯಂತ ಸೂಕ್ತವಾಗಿವೆ. ಇವು ಶತಮಾನಗಳ ಹಳೆಯ ವಾಸ್ತು ಸಂಪ್ರದಾಯವನ್ನು ಇಂದಿಗೂ ಜೀವಂತವಾಗಿರಿಸಿವೆ.
ಹಳ್ಳಿಯಲ್ಲಿರುವ ʻಮಾತಿ ದೇವಿ ದೇವಸ್ಥಾನʼ ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣವಾಗಿದೆ. ಕಿನ್ನೌರಿ ಶೈಲಿಯ ಸುಂದರ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟ ಈ ದೇವಸ್ಥಾನ ಸ್ಥಳೀಯರ ಆರಾಧ್ಯದೇವಿಯ ನೆಲೆ. ದೇವಸ್ಥಾನದ ಒಳಭಾಗಕ್ಕೆ ಎಲ್ಲರಿಗೂ ಪ್ರವೇಶವಿಲ್ಲದಿದ್ದರೂ, ಹೊರಭಾಗದ ವಾಸ್ತುಶಿಲ್ಪ ಮತ್ತು ಪರಿಸರವೇ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಚಿತ್ಕುಲ್‌ನಲ್ಲಿ ಸ್ಥಳೀಯ ಕಿನ್ನೌರಿ ಸಂಸ್ಕೃತಿ ಇಂದಿಗೂ ಜೀವಂತವಾಗಿದೆ. ಇಲ್ಲಿ ಜನರು ಸಂಪ್ರದಾಯಬದ್ಧ ಉಡುಪು ಧರಿಸುವುದರ ಜೊತೆಗೆ ಕೃಷಿ, ಸೇಬು ಮತ್ತು ಬಟಾಣಿ ಬೆಳೆ, ಕುರಿ ಸಾಕಣೆ ಮುಂತಾದ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಸ್ಥಳೀಯರ ಆತಿಥ್ಯ ಮತ್ತು ಸರಳ ಜೀವನಶೈಲಿ ಪ್ರವಾಸಿಗರ ಮನಸ್ಸನ್ನು ಗೆಲ್ಲುತ್ತದೆ.
ಚಿತ್ಕುಲ್‌ನ ಆಹಾರ ಸಂಸ್ಕೃತಿಯೂ ವಿಶೇಷವಾಗಿದೆ. ಕಿನ್ನೌರಿ ರೊಟ್ಟಿ, ರಾಜ್ಮಾ, ಸ್ಥಳೀಯ ತರಕಾರಿ, ತುಪ್ಪದ ತಿನಿಸುಗಳು ಹಾಗೂ ಪರ್ವತ ಪ್ರದೇಶದ ಸಾಂಪ್ರದಾಯಿಕ ಆಹಾರಗಳನ್ನು ಇಲ್ಲಿ ಸವಿಯಬಹುದು. ಚಳಿಗಾಲದ ವಾತಾವರಣದಲ್ಲಿ ಬಿಸಿ ಬಿಸಿ ಸ್ಥಳೀಯ ಆಹಾರ ಸೇವಿಸುವ ಅನುಭವ ಪ್ರವಾಸದ ಸೊಗಸನ್ನು ಇನ್ನಷ್ಟು ಹೆಚ್ಚಿಸುತ್ತದೆ.
ಸಾಂಗ್ಲಾ ಕಣಿವೆಯ ಪ್ರವಾಸಕ್ಕೆ ತೆರಳುವವರು ಸಾಮಾನ್ಯವಾಗಿ `ಸಾಂಗ್ಲಾ–ರಕ್ಛಮ್–ಚಿತ್ಕುಲ್’ ಮಾರ್ಗವನ್ನು ಅನುಸರಿಸುತ್ತಾರೆ. ಈ ರಸ್ತೆಯಲ್ಲಿ ಸಾಗುವಾಗ ಕಾಣುವ ಪ್ರತಿಯೊಂದು ತಿರುವೂ ಪ್ರಕೃತಿಯ ಅದ್ಭುತ ದೃಶ್ಯಗಳನ್ನು ನಿಮ್ಮ ಕಣ್ಮುಂದೆ ತೆರೆದಿಡುತ್ತದೆ. ಹಿಮಾಲಯದ ಹಿನ್ನೆಲೆ, ಬಸ್ಪಾ ನದಿಯ ಹರಿವು ಮತ್ತು ಪರ್ವತಗಳ ನಡುವೆ ಸಾಗುವ ರಸ್ತೆ ಪ್ರಯಾಣವನ್ನು ಮತ್ತಷ್ಟು ಸೊಗಸಾಗಿಸುತ್ತದೆ.
ಚಿತ್ಕುಲ್‌ಗೆ ಭೇಟಿ ನೀಡಲು ಯಾವ ಸಮಯ ಉತ್ತಮ?
ಪ್ರತಿಯೊಂದು ಋತುವಿನಲ್ಲೂ ಚಿತ್ಕುಲ್ ತನ್ನದೇ ಆದ ವಿಶೇಷ ಸೌಂದರ್ಯವನ್ನು ಹೊಂದಿರುತ್ತದೆ. ಆದ್ದರಿಂದ ನೀವು ಯಾವ ರೀತಿಯ ಅನುಭವ ಬಯಸುತ್ತೀರೋ ಅದಕ್ಕೆ ತಕ್ಕಂತೆ ಪ್ರವಾಸದ ಸಮಯವನ್ನು ಆಯ್ಕೆ ಮಾಡಬಹುದು.
ಮಾರ್ಚ್–ಏಪ್ರಿಲ್:
ಚಳಿಗಾಲ ಮುಗಿದು ವಸಂತ ಆರಂಭವಾಗುವ ಈ ಅವಧಿಯಲ್ಲಿ ಹಿಮ ನಿಧಾನವಾಗಿ ಕರಗಲಾರಂಭಿಸುತ್ತದೆ. ಪರ್ವತಗಳ ಮೇಲೆ ಇನ್ನೂ ಹಿಮದ ಹೊದಿಕೆ ಕಾಣಸಿಗುತ್ತದೆ. ಹೆಚ್ಚು ಜನಸಂದಣಿ ಇಲ್ಲದ ಕಾರಣ ಶಾಂತ ವಾತಾವರಣದಲ್ಲಿ ಪ್ರಕೃತಿಯನ್ನು ಸವಿಯಲು ಇದು ಉತ್ತಮ ಸಮಯ.
ಮೇ–ಜೂನ್:
ಚಿತ್ಕುಲ್‌ಗೆ ಭೇಟಿ ನೀಡಲು ಇದು ಅತ್ಯಂತ ಸೂಕ್ತ ಮತ್ತು ಜನಪ್ರಿಯ ಅವಧಿಯಾಗಿದೆ. ಹವಾಮಾನ ಆಹ್ಲಾದಕರವಾಗಿದ್ದು, ರಸ್ತೆ ಸಂಪರ್ಕವೂ ಉತ್ತಮವಾಗಿರುತ್ತದೆ. ಕುಟುಂಬ ಸಮೇತ ಪ್ರವಾಸಕ್ಕೆ ಈ ಸಮಯ ಹೆಚ್ಚು ಅನುಕೂಲಕರವಾಗಿದೆ.
ಜುಲೈ–ಸೆಪ್ಟೆಂಬರ್:
ಮಳೆಗಾಲದಲ್ಲಿ ಕಣಿವೆಗಳು ಹಚ್ಚಹಸಿರಿನಿಂದ ಕಂಗೊಳಿಸುತ್ತವೆ. ಆದರೆ ಭೂಕುಸಿತ ಹಾಗೂ ರಸ್ತೆ ಬಂದ್ ಆಗುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಯಾಣಿಸುವ ಮೊದಲು ಹವಾಮಾನ ಮತ್ತು ರಸ್ತೆ ಪರಿಸ್ಥಿತಿಯನ್ನು ಪರಿಶೀಲಿಸುವುದು ಸೂಕ್ತ.
ಅಕ್ಟೋಬರ್–ನವೆಂಬರ್:
ತಂಪಾದ ಹವಾಮಾನ, ಸ್ಪಷ್ಟವಾದ ನೀಲಿ ಆಕಾಶ ಹಾಗೂ ಬಣ್ಣ ಬದಲಿಸುವ ಮರಗಳು ಈ ಸಮಯದಲ್ಲಿ ಚಿತ್ಕುಲ್‌ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಛಾಯಾಗ್ರಹಣ ಮತ್ತು ನಕ್ಷತ್ರ ವೀಕ್ಷಣೆಗೆ ಇದು ಅತ್ಯುತ್ತಮ ಕಾಲ.
ಡಿಸೆಂಬರ್–ಫೆಬ್ರವರಿ:
ಈ ಅವಧಿಯಲ್ಲಿ ಇಡೀ ಚಿತ್ಕುಲ್ ಹಿಮದ ಹೊದಿಕೆಯಲ್ಲಿ ಮುಳುಗಿರುತ್ತದೆ. ಹಿಮಪಾತವನ್ನು ಸಮೀಪದಿಂದ ನೋಡುವ ಅವಕಾಶ ಸಿಗುತ್ತದೆ. ಆದರೆ ತೀವ್ರ ಚಳಿ, ರಸ್ತೆ ಬಂದ್ ಹಾಗೂ ಸೀಮಿತ ಸೌಲಭ್ಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಪ್ರವಾಸವನ್ನು ಯೋಜಿಸಬೇಕು.
ಚಿತ್ಕುಲ್‌ನಲ್ಲಿ ಏನೆಲ್ಲ ಮಾಡಬಹುದು?
ಚಿತ್ಕುಲ್‌ಗೆ ಬಂದರೆ ಬಸ್ಪಾ ನದಿಯ ದಡದಲ್ಲಿ ಕೆಲ ಹೊತ್ತು ಕುಳಿತು ಪ್ರಕೃತಿಯ ನಿಶ್ಶಬ್ದತೆಯನ್ನು ಆಸ್ವಾದಿಸಲೇಬೇಕು. ಹಳ್ಳಿಯ ಕಿರಿದಾದ ರಸ್ತೆಗಳ ಮೂಲಕ ನಿಧಾನವಾಗಿ ನಡೆದಾಡುತ್ತಾ ಮರದ ಸಾಂಪ್ರದಾಯಿಕ ಮನೆಗಳು ಹಾಗೂ ಸ್ಥಳೀಯ ಜೀವನಶೈಲಿಯನ್ನು ನೋಡಬಹುದು.
ಸಾಹಸ ಪ್ರಿಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರೆಕ್ಕಿಂಗ್ ಮಾಡಬಹುದು. ಛಾಯಾಗ್ರಾಹಕರಿಗೆ ಹಿಮಾಚ್ಛಾದಿತ ಪರ್ವತಗಳು, ಹಸಿರು ಕಣಿವೆಗಳು ಹಾಗೂ ನದಿಯ ದೃಶ್ಯಗಳು ಅದ್ಭುತ ಚಿತ್ರಗಳನ್ನು ಸೆರೆಹಿಡಿಯುವ ಅವಕಾಶ ನೀಡುತ್ತವೆ.
ಭಾರತ–ಟಿಬೆಟ್ ಗಡಿಯತ್ತ ಸಾಗುವ `ನಾಗಾಸ್ತಿ’ ಮಾರ್ಗವು ಮತ್ತೊಂದು ಪ್ರಮುಖ ಆಕರ್ಷಣೆ. ಭದ್ರತಾ ನಿಯಮಗಳನ್ನು ಪಾಲಿಸಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಆನಂದಿಸಬಹುದು.
ಚಿತ್ಕುಲ್‌ಗೆ ಭೇಟಿ ನೀಡಿದವರು `ಹಿಂದೂಸ್ತಾನ್ ಕಾ ಆಖ್ರಿ ಧಾಬಾ’ಗೆ ತೆರಳಿ ಸ್ಥಳೀಯ ಆಹಾರ ಸವಿಯುವುದನ್ನು ಮರೆಯುವುದಿಲ್ಲ. ಭಾರತದ ಕೊನೆಯ ಧಾಬಾ ಎಂಬ ಹೆಗ್ಗಳಿಕೆ ಪಡೆದಿರುವ ಈ ಸ್ಥಳದಲ್ಲಿ ಬಿಸಿ ಬಿಸಿ ಊಟದ ರುಚಿ ವಿಭಿನ್ನ ಅನುಭವ ನೀಡುತ್ತದೆ.
ಬೆಳಗಿನ ಜಾವ ಗ್ರಾಮದಲ್ಲಿ ನಡೆಯುವುದರಿಂದ ಪ್ರಕೃತಿಯ ನೈಜ ಸೌಂದರ್ಯವನ್ನು ಯಾವುದೇ ಗದ್ದಲವಿಲ್ಲದೆ ಸವಿಯಬಹುದು. ರಾತ್ರಿ ಮೋಡಗಳಿಲ್ಲದಿದ್ದರೆ ಸಾವಿರಾರು ನಕ್ಷತ್ರಗಳಿಂದ ಕಂಗೊಳಿಸುವ ಆಕಾಶವನ್ನು ನೋಡುವ ಅವಕಾಶವೂ ಸಿಗುತ್ತದೆ.
ಚಿತ್ಕುಲ್‌ಗೆ ಹೋಗುವುದು ಹೇಗೆ?
ಚಿತ್ಕುಲ್‌ಗೆ ರಸ್ತೆ ಮಾರ್ಗವೇ ಪ್ರಮುಖ ಸಂಪರ್ಕವಾಗಿದೆ. ಶಿಮ್ಲಾದಿಂದ ನಾರ್ಕಂಡಾ, ರಾಂಪುರ, ರೆಕಾಂಗ್ ಪಿಯೋ, ಸಾಂಗ್ಲಾ ಹಾಗೂ ರಕ್ಛಮ್ ಮೂಲಕ ಚಿತ್ಕುಲ್ ತಲುಪಬಹುದು.
ಸಾಂಗ್ಲಾದಿಂದ ಸುಮಾರು 24 ಕಿಲೋಮೀಟರ್ ಮತ್ತು ರಕ್ಛಮ್‌ನಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಈ ಹಳ್ಳಿಗೆ ಟ್ಯಾಕ್ಸಿ ಅಥವಾ ಖಾಸಗಿ ವಾಹನದಲ್ಲಿ ಸುಲಭವಾಗಿ ತಲುಪಬಹುದು.
ಸ್ವಂತ ವಾಹನದಲ್ಲಿ ಪ್ರಯಾಣಿಸುವವರು ಪರ್ವತ ರಸ್ತೆಗಳ ತೀವ್ರ ತಿರುವುಗಳು ಹಾಗೂ ಕಿರಿದಾದ ಮಾರ್ಗಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಮಳೆಗಾಲ ಮತ್ತು ಚಳಿಗಾಲದಲ್ಲಿ ರಸ್ತೆ ಪರಿಸ್ಥಿತಿ ಬದಲಾಗುವ ಸಾಧ್ಯತೆ ಇರುವುದರಿಂದ ಮುಂಚಿತ ಮಾಹಿತಿ ಪಡೆದುಕೊಳ್ಳುವುದು ಉತ್ತಮ.
ವಿಶೇಷವಾಗಿ ಟ್ರಾಂಡಾ ಧಾಂಕ್ ಮಾರ್ಗದಲ್ಲಿ ಹಗಲಿನ ವೇಳೆಯಲ್ಲೇ ಸಂಚರಿಸುವುದು ಸುರಕ್ಷಿತ. ರಾತ್ರಿ ವೇಳೆ ಈ ಪ್ರದೇಶದಲ್ಲಿ ವಾಹನ ಚಲಾಯಿಸುವುದನ್ನು ಸಾಧ್ಯವಾದಷ್ಟು ತಪ್ಪಿಸಬೇಕು.
ಚಿತ್ಕುಲ್‌ನಲ್ಲಿ ಎಲ್ಲಿ ಉಳಿಯಬಹುದು?
ಚಿತ್ಕುಲ್‌ನಲ್ಲಿ ಐಷಾರಾಮಿ ರೆಸಾರ್ಟ್‌ಗಳಿಗಿಂತ ಪ್ರಕೃತಿಯ ಮಡಿಲಿನಲ್ಲಿರುವ ಹೋಮ್‌ಸ್ಟೇಗಳು ಹಾಗೂ ಸಣ್ಣ ಹೋಟೆಲ್‌ಗಳೇ ಹೆಚ್ಚು ಜನಪ್ರಿಯವಾಗಿವೆ. ಸ್ಥಳೀಯ ಕುಟುಂಬಗಳು ನಡೆಸುವ ಹೋಮ್‌ಸ್ಟೇಗಳಲ್ಲಿ ಉಳಿದರೆ ಕಿನ್ನೌರಿ ಸಂಸ್ಕೃತಿ, ಆಹಾರ ಹಾಗೂ ಆತಿಥ್ಯವನ್ನು ಹತ್ತಿರದಿಂದ ಅನುಭವಿಸಬಹುದು. ನದಿ ತೀರದ ಕಾಟೇಜ್‌ಗಳು, ಪರ್ವತ ನೋಟವಿರುವ ಕೊಠಡಿಗಳು ಹಾಗೂ ಮರದ ಮನೆಗಳಲ್ಲಿ ತಂಗುವ ಅನುಭವ ಪ್ರವಾಸವನ್ನು ಮತ್ತಷ್ಟು ಸ್ಮರಣೀಯವಾಗಿಸುತ್ತದೆ.
ಚಿತ್ಕುಲ್‌ಗೆ ತೆರಳುವ ಮುನ್ನ ಈ ಸಲಹೆಗಳು ನೆನಪಿರಲಿ:
ಗಡಿ ಪ್ರದೇಶದ ಸಮೀಪ ಇರುವುದರಿಂದ ಮೊಬೈಲ್ ನೆಟ್‌ವರ್ಕ್ ಎಲ್ಲೆಡೆ ಲಭ್ಯವಿರದೇ ಇರಬಹುದು. ಆದ್ದರಿಂದ ಅಗತ್ಯ ಮಾಹಿತಿಯನ್ನು ಮುಂಚಿತವಾಗಿಯೇ ಡೌನ್‌ಲೋಡ್ ಮಾಡಿಕೊಂಡಿರುವುದು ಒಳಿತು.
ಎಟಿಎಂ ಸೌಲಭ್ಯಗಳು ಕಡಿಮೆ ಇರುವುದರಿಂದ ಸಾಕಷ್ಟು ನಗದು ಜೊತೆಗೆ ಇಟ್ಟುಕೊಳ್ಳಿ. ಆಫ್‌ಲೈನ್ ಮ್ಯಾಪ್ ಬಳಸುವುದರಿಂದ ಮಾರ್ಗ ಕಂಡುಹಿಡಿಯಲು ಅನುಕೂಲವಾಗುತ್ತದೆ. ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತೆಗೆದುಕೊಂಡು ಹೋಗಿ. ಕೆಲವು ಸ್ಥಳಗಳಲ್ಲಿ ಭದ್ರತಾ ತಪಾಸಣೆ ನಡೆಯುವ ಸಾಧ್ಯತೆ ಇರುತ್ತದೆ. ಚಳಿಗಾಲದಲ್ಲಿ ಉಷ್ಣ ಬಟ್ಟೆಗಳು, ಉತ್ತಮ ಗುಣಮಟ್ಟದ ಶೂಗಳು ಹಾಗೂ ಅಗತ್ಯ ಔಷಧಿಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳಿ.
ಜೀವನದಲ್ಲಿ ಒಮ್ಮೆಯಾದರೂ ಚಿತ್ಕುಲ್‌ಗೆ ಭೇಟಿ ನೀಡಲೇಬೇಕು:
ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯ ಕ್ಷಣಗಳನ್ನು ಕಳೆಯಲು, ಹಿಮಾಲಯದ ವೈಭವವನ್ನು ಕಣ್ತುಂಬಿಕೊಳ್ಳಲು ಮತ್ತು ನಗರ ಜೀವನದ ಒತ್ತಡದಿಂದ ದೂರ ಕೆಲವು ದಿನಗಳನ್ನು ಕಳೆಯಲು ಬಯಸುವವರಿಗೆ ಚಿತ್ಕುಲ್ ಅತ್ಯುತ್ತಮ ತಾಣವಾಗಿದೆ.
ಇಲ್ಲಿನ ತಂಪಾದ ಗಾಳಿ, ಬಸ್ಪಾ ನದಿಯ ಸಂಗೀತ, ಹಿಮದಿಂದ ಆವೃತವಾದ ಪರ್ವತಗಳು, ಮರದ ಸಾಂಪ್ರದಾಯಿಕ ಮನೆಗಳು ಮತ್ತು ನಕ್ಷತ್ರಗಳಿಂದ ಮಿನುಗುವ ರಾತ್ರಿಗಳು ಪ್ರವಾಸವನ್ನು ಜೀವಮಾನವಿಡೀ ನೆನಪಿನಲ್ಲಿರುವ ಅನುಭವವನ್ನಾಗಿ ಮಾಡುತ್ತವೆ. ಒಮ್ಮೆ ಚಿತ್ಕುಲ್‌ಗೆ ಭೇಟಿ ನೀಡಿದರೆ, ಹಿಮಾಲಯದ ಈ ಪುಟ್ಟ ಸ್ವರ್ಗ ನಿಮ್ಮ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುತ್ತದೆ.

