ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯ ನಡೆಯುತ್ತಿದ್ದು, ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದಲ್ಲಿ, ಅರ್ಹ ಮತದಾರರು ಹೆಸರು ಸೇರ್ಪಡೆಗಾಗಿ ನಮೂನೆ-6 ಅನ್ನು ಸಲ್ಲಿಸುವಂತೆ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಮನವಿ ಮಾಡಿದರು.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026ಕ್ಕೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳ ಕುರಿತು ಜಿಬಿಎ ಕೇಂದ್ರ ಕಚೇರಿಯಲ್ಲಿ ಮಾನ್ಯತೆ ಹೊಂದಿರುವ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಮೂನೆ-6 ಹಾಗೂ ನಮೂನೆ-8:
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೂ ತಪ್ಪಾಗಿ ನಮೂನೆ-8 ಸಲ್ಲಿಸಿದ್ದಲ್ಲಿ, ಅರ್ಹ ಮತದಾರರು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ನಮೂನೆ-6 ಸಲ್ಲಿಸಬೇಕು. ಕರಡು ಮತದಾರರ ಪಟ್ಟಿಯಲ್ಲಿ ಈಗಾಗಲೇ ಹೆಸರು ಇದ್ದು, ಹೆಸರು, ವಿಳಾಸ ಸೇರಿದಂತೆ ಇತರೆ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದಲ್ಲಿ ನಮೂನೆ-8 ಸಲ್ಲಿಸಬೇಕು.
ಪ್ರಕರಣಗಳ ತ್ವರಿತ ವಿಚಾರಣೆ:
ಪ್ರಸ್ತುತ ಸುಮಾರು 13,40,663 ಪ್ರಕರಣಗಳ ವಿಚಾರಣೆ ಪೂರ್ಣಗೊಂಡಿದ್ದು, ಸುಮಾರು 2,56,935 ಪ್ರಕರಣಗಳು ಬಾಕಿ ಉಳಿದಿವೆ. ಒಟ್ಟು ಸುಮಾರು 24,07,218 ಪ್ರಕರಣಗಳ ಪೈಕಿ ಬಾಕಿ ಇರುವ ಪ್ರಕರಣಗಳ ವಿಚಾರಣೆ ಹಾಗೂ ಪರಿಶೀಲನಾ ಕಾರ್ಯವನ್ನು ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮತದಾರರ ಮೊಬೈಲ್ ಸಂಖ್ಯೆಗೆ ಸಂದೇಶ:
ನೋಟಿಸ್ ಸ್ವೀಕರಿಸದ ಪ್ರಕರಣಗಳಲ್ಲಿ BLOಗಳು ಸಂಬಂಧಪಟ್ಟ ಮತದಾರರನ್ನು ಹಲವು ಬಾರಿ ಸಂಪರ್ಕಿಸುತ್ತಿದ್ದಾರೆ. ದೂರವಾಣಿ ಮೂಲಕ ಸಂಪರ್ಕ ಸಾಧ್ಯವಾಗದಿದ್ದಲ್ಲಿ ಮನೆಗೆ ತೆರಳಿ ನೋಟಿಸ್ ನೀಡಲಾಗುತ್ತಿದೆ. ಮೊಬೈಲ್ ಸಂಖ್ಯೆ ಲಭ್ಯವಿರುವ ಮತದಾರರಿಗೆ SMS/WhatsApp ಮೂಲಕ ಮಾಹಿತಿ ನೀಡಿ, ಸಮೀಪದ ಸ್ಥಳಕ್ಕೆ ಬಂದು ವಿಚಾರಣೆ/ಪರಿಶೀಲನಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ತಿಳಿಸಲು ಸೂಚಿಸಲಾಯಿತು. ಸಂದೇಶದಲ್ಲಿ ಸಂಬಂಧಪಟ್ಟ BLO ಅವರ ಸಂಪರ್ಕ ಸಂಖ್ಯೆಯನ್ನು ನೀಡುವ ಸಾಧ್ಯತೆಯನ್ನೂ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಬಾಕಿ ಪ್ರಕರಣಗಳ ಪರಿಶೀಲನೆ:
ಬಾಕಿ ಪ್ರಕರಣಗಳ ನೈಜ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ BLOಗಳು ಹಾಗೂ ಸಂಬಂಧಪಟ್ಟ ADEO/ERO ಅಧಿಕಾರಿಗಳು ಬಾಕಿ ಪ್ರಕರಣಗಳ ಸಂಪೂರ್ಣ ಪರಿಶೀಲನೆ ನಡೆಸುವಂತೆ ಸೂಚಿಸಲಾಯಿತು.
ವಿಶೇಷವಾಗಿ ಮೊದಲ ಹಂತದ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು, ಮರುನಿಗದಿಪಡಿಸಿದ ವಿಚಾರಣೆಗೆ (Rescheduled Hearing) ಬಾಕಿ ಇರುವ ಪ್ರಕರಣಗಳು, ದಾಖಲೆಗಳಲ್ಲಿ ಸಣ್ಣಪುಟ್ಟ ಕೊರತೆ ಇರುವ ಪ್ರಕರಣಗಳು, ದಾಖಲೆಗಳು ಸಮರ್ಪಕವಾಗಿದ್ದರೂ ಬಾಕಿ ಎಂದು ತೋರಿಸುತ್ತಿರುವ ಪ್ರಕರಣಗಳು, ಇವುಗಳನ್ನು ಪ್ರತ್ಯೇಕವಾಗಿ ಪರಿಶೀಲಿಸಿ, ನೈಜ ಸ್ಥಿತಿಯನ್ನು ವರದಿಯಲ್ಲಿ ದಾಖಲಿಸುವಂತೆ ಸೂಚಿಸಿದರು.
ಬಾಕಿ ಪ್ರಕರಣಗಳ ವರದಿಯಲ್ಲಿ ಕಂಡುಬರುವ ಲೆಕ್ಕಾಚಾರದ ದೋಷಗಳನ್ನು ತಕ್ಷಣ ಸರಿಪಡಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು. ವಿಶೇಷವಾಗಿ ಮಹದೇವಪುರ ಸೇರಿದಂತೆ ಕೆಲವು ವಿಧಾನಸಭಾ ಕ್ಷೇತ್ರಗಳ ವರದಿಗಳಲ್ಲಿ ಕಂಡುಬಂದ ವ್ಯತ್ಯಾಸಗಳನ್ನು ಪರಿಶೀಲಿಸಿ, ಸರಿಯಾದ ಅಂಕಿ-ಅಂಶಗಳನ್ನು ಸಲ್ಲಿಸಬೇಕೆಂದು ಹೇಳಿದರು.
ಮೈಕ್ರೋ ಪ್ಲಾನ್ ಸಿದ್ಧಪಡಿಸಿ:
ಯಲಹಂಕ, ಚಂದ್ರಶೇಖರಪುರ ಹಾಗೂ ಹೊರವಲಯದ ಪ್ರದೇಶಗಳಲ್ಲಿ ಸಿಬ್ಬಂದಿ ಲಭ್ಯತೆ, ದೂರದ ಪ್ರದೇಶಗಳು ಹಾಗೂ ವಿಚಾರಣೆ ನಡೆಸುವ ಸಂದರ್ಭದಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಗುರುತಿಸಿ, ಅವುಗಳಿಗೆ ಮೈಕ್ರೋ ಪ್ಲಾನ್ ಮಾಡಬೇಕು.ಬಾಕಿ ಪ್ರಕರಣಗಳ ಪರಿಶೀಲನೆಯನ್ನು ಇಂದೇ ಪೂರ್ಣಗೊಳಿಸಿ, ನೈಜ ಬಾಕಿ ಪ್ರಕರಣಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಯಿತು. ಬಳಿಕ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿವರವಾದ ಪರಿಶೀಲನಾ ಸಭೆ ನಡೆಸಿ, ಮುಂದಿನ ಕಾರ್ಯಯೋಜನೆಯನ್ನು ರೂಪಿಸುವಂತೆ ನಿರ್ದೇಶನ ನೀಡಲಾಯಿತು.
ವಿಶೇಷ ಶಿಬಿರ ಆಯೋಜನೆ:
ಹೆಚ್ಚಿನ ಸಂಖ್ಯೆಯಲ್ಲಿ ವಿಚಾರಣೆಗಳು ಬಾಕಿ ಇರುವ ಪ್ರದೇಶಗಳನ್ನು ಗುರುತಿಸಿ, ಅಂತಹ ಪ್ರದೇಶಗಳಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ತ್ವರಿತವಾಗಿ ವಿಚಾರಣೆ ಕಾರ್ಯಗಳನ್ನು ಕೈಗೊಳ್ಳುವಂತೆ ಸೂಚಿಸಿದರು. ಈ ವೇಳೆ ಚುನಾವಣಾ ವಿಭಾಗದ ವಿಶೇಷ ಆಯುಕ್ತರಾದ ಶಿಲ್ಪಾ ನಾಗ್, ನಗರ ಪಾಲಿಕೆಗಳ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್, ಕೆ.ಎನ್. ರಮೇಶ್, ಚುನಾವಣಾ ವಿಭಾಗದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

