ಮೊಸರು ಎಂದರೆ ಸಾಮಾನ್ಯವಾಗಿ ಅನ್ನದ ಜೊತೆ ಸವಿಯುವುದು ನೆನಪಾಗುತ್ತದೆ. ಆದರೆ, ಇದೇ ಮೊಸರಿನಿಂದ ಕೇವಲ 5 ನಿಮಿಷಗಳಲ್ಲಿ ರುಚಿಕರವಾದ ದಹಿ ತಡ್ಕಾ ಅಥವಾ ಮೊಸರು ಒಗ್ಗರಣೆ ತಯಾರಿಸಬಹುದು. ತರಕಾರಿ ಇಲ್ಲದಾಗ ಅಥವಾ ದಿಢೀರ್ ಆಗಿ ಸೈಡ್ ಡಿಶ್ ಬೇಕಾದಾಗ ಈ ರೆಸಿಪಿ ತುಂಬಾ ಉಪಯುಕ್ತ.
ತುಪ್ಪ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಸಾಲೆಗಳ ಒಗ್ಗರಣೆಯ ಸುವಾಸನೆ ಮೊಸರಿನ ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ಬಿಸಿ ಬಿಸಿ ಅನ್ನ, ಚಪಾತಿ ಅಥವಾ ಪರಾಟ ಜೊತೆ ಈ ದಹಿ ತಡ್ಕಾ ಸವಿಯಲು ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಪದಾರ್ಥಗಳು
ಗಟ್ಟಿ ಮೊಸರು – 1 ದೊಡ್ಡ ಕಪ್
ತುಪ್ಪ ಅಥವಾ ಎಣ್ಣೆ – 1 ರಿಂದ 2 ಟೇಬಲ್ ಸ್ಪೂನ್
ಸಾಸಿವೆ – ½ ಟೀ ಸ್ಪೂನ್
ಜೀರಿಗೆ – ½ ಟೀ ಸ್ಪೂನ್
ಬೆಳ್ಳುಳ್ಳಿ – 4-5 ಎಸಳು (ಸಣ್ಣದಾಗಿ ಹೆಚ್ಚಿದ್ದು)
ಈರುಳ್ಳಿ – 1 (ಸಣ್ಣದಾಗಿ ಹೆಚ್ಚಿದ್ದು)
ಹಸಿಮೆಣಸಿನಕಾಯಿ – 1 (ಸಣ್ಣದಾಗಿ ಹೆಚ್ಚಿದ್ದು)
ಒಣಮೆಣಸಿನಕಾಯಿ – 1
ಕರಿಬೇವು – ಸ್ವಲ್ಪ
ಅರಿಶಿನ ಪುಡಿ – ¼ ಟೀ ಸ್ಪೂನ್
ಅಚ್ಚಖಾರದ ಪುಡಿ – 1 ಟೀ ಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಒಂದು ಬೌಲ್‌ನಲ್ಲಿ ಗಟ್ಟಿ ಮೊಸರು ತೆಗೆದುಕೊಂಡು ಗಂಟುಗಳಿಲ್ಲದಂತೆ ಚೆನ್ನಾಗಿ ವಿಸ್ಕ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
ಈಗ ಒಂದು ಪ್ಯಾನ್‌ನಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಚಟಪಟ ಎನ್ನಿಸಿ.
ನಂತರ ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ. ಈರುಳ್ಳಿ ತಿಳಿ ಹಳದಿ ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ.
ಈಗ ಉರಿಯನ್ನು ಕಡಿಮೆ ಮಾಡಿ ಅರಿಶಿನ ಪುಡಿ, ಅಚ್ಚಖಾರದ ಪುಡಿ ಮತ್ತು ಉಪ್ಪು ಸೇರಿಸಿ ಸುಮಾರು 10 ಸೆಕೆಂಡ್ ಕಲಸಿ.
ಇಲ್ಲಿ ಒಂದು ಮುಖ್ಯ ವಿಷಯ ನೆನಪಿನಲ್ಲಿಟ್ಟುಕೊಳ್ಳಿ. ಬಿಸಿ ಒಗ್ಗರಣೆಗೆ ನೇರವಾಗಿ ಮೊಸರು ಹಾಕಬಾರದು. ಹಾಗೆ ಮಾಡಿದರೆ ಮೊಸರು ಒಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಗ್ಯಾಸ್ ಆಫ್ ಮಾಡಿ ಅಥವಾ ಪ್ಯಾನ್ ಅನ್ನು ಕೆಳಗಿಳಿಸಿ ಒಗ್ಗರಣೆ ಸ್ವಲ್ಪ ತಣ್ಣಗಾಗಲು ಬಿಡಿ.
ಒಗ್ಗರಣೆ ಸ್ವಲ್ಪ ತಣ್ಣಗಾದ ನಂತರ ವಿಸ್ಕ್ ಮಾಡಿದ ಮೊಸರನ್ನು ಪ್ಯಾನ್‌ಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಕೊನೆಯದಾಗಿ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ರುಚಿಕರವಾದ ದಹಿ ತಡ್ಕಾ ಸವಿಯಲು ಸಿದ್ಧ.

