ನಾಡಿದ್ದು ಸ್ವಾತಂತ್ರ್ಯ ದಿನಾಚರಣೆ (Independence Day), ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಇದೆ ತಾತಾ. ಎಲ್ಲರೂ ದೊಡ್ಡ ದೊಡ್ಡ ವ್ಯಕ್ತಿಗಳ ಬಗ್ಗೆ ಬರಿತಾರೆ. ಹೋರಾಟ, ಮಧ್ಯರಾತ್ರಿ ಸ್ವಾತಂತ್ರ್ಯ ಅಂತೆಲ್ಲ ಬರಿತಾರಂತೆ. ನಾನೇನಾದ್ರೂ ಸ್ಪೆಷಲ್ ಆಗಿ ಬರೆಯಬೇಕಲ್ಲ ತಾತ.. ನಮ್ಮೂರಲ್ಲೂ ಸ್ವಾತಂತ್ರ್ಯ ಹೋರಾಟ ಆಗಿತ್ತಂತೆ. ಭಾರತದಲ್ಲೇ ಮೊದಲು ನಮ್ಮ ಹಳ್ಳಿಗೆ ಸ್ವಾತಂತ್ರ್ಯ ಬಂದಿದ್ದು ಅಂತ ಹೇಳ್ತಿದ್ಯಲ್ಲ. ಈಗ ಅದನ್ನೇ ಮತ್ತೊಮ್ಮೆ ಹೇಳು ತಾತ, ಶಾಲೆ ಬಿಟ್ಟು ಬಂದ ಚಿಂಟು ತಾತನ ಬಳಿ ಕೂತು ಒಂದೇ ಸಮನೇ ಪೀಡಿಸುತ್ತಿದ್ದ.
ಮೊಮ್ಮಗ ಚಿಂಟು ಹೇಳಿದ ಮಾತಿಗೆ ತಾತ ನಗುತ್ತಾ, ಸೇದುತ್ತಿದ್ದ ಬೀಡಿ ಎಸೆದು, ಕತೆ ಆರಂಭಿಸಿಯೇ ಬಿಟ್ಟರು. ಹೌದು ಮಗ, ನಮ್ಮ ಈಸೂರು ಮೊದಲು ಸ್ವಾತಂತ್ರ್ಯ ಘೋಷಿಸಿಕೊಂಡ ಊರು! ಬ್ರಿಟೀಷರಿಗೆ ಎದೆಕೊಟ್ಟು ಹೋರಾಡಿದ ಸಿಂಹಗಳ ನೆಲ ನಮ್ಮದು ಎಂದರು. ಅಜ್ಜನ ಮಾತು ಕೇಳುತ್ತಿದ್ದಂತೆ ಪುಟ್ಟ ಚಿಂಟುವಿನ ಮೈಯೆಲ್ಲ ರೋಮಾಂಚನವಾಗುತ್ತಿತ್ತು. ಇದರ ನಡುವೆ ಅಜ್ಜನ ಮಾತು ಮುಂದುವರಿದಿತ್ತು.
ಆಗಿನ ಮೈಸೂರು ಸಂಸ್ಥಾನದ ಸಾಮಾನ್ಯ ಹಳ್ಳಿಯಾಗಿದ್ದ ಶಿವಮೊಗ್ಗ (Shivamogga) ಜಿಲ್ಲೆಯ ಶಿಕಾರಿಪುರ ತಾಲೂಕಿನ ಈಸೂರು (Esuru) ಸ್ವಾತಂತ್ರಯ ಹೋರಾಟದಲ್ಲಿ ತನ್ನದೇ ಗುರುತು ಮೂಡಿಸಿದೆ. ಈ ಹಳ್ಳಿಗರು ಸಿಡಿದೇಳಲು ಪ್ರೇರಣೆ ಗಾಂಧೀಜಿ, ಆದರೆ ಇವರು ಆಯ್ದುಕೊಂಡ ಮಾರ್ಗ ಕ್ರಾಂತಿ. 1942ರಲ್ಲಿ ಗಾಂಧಿಜೀ ಕ್ವಿಟ್ ಇಂಡಿಯಾ ಚಳವಳಿ (Quit India Movement) ಆರಂಭಿಸಿದರು. ಅವರ ಈ ಧ್ವನಿ ದೇಶದ ಪ್ರತಿಯೊಂದು ಹಳ್ಳಿಗಳಿಗೂ ತಲುಪುತ್ತಿತ್ತು. ಗಾಂಧಿಯವರ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆ ಜನರಲ್ಲಿ ಅಡಗಿದ್ದ ಕ್ರಾಂತಿಯ ಕಿಚ್ಚಿಗೆ ತುಪ್ಪ ಸುರಿಯಿತು.

ಈಸೂರು ಸಿಂಹಗಳ ಘರ್ಜನೆ!
ಅಂದು ಸೆಪ್ಟೆಂಬರ್ 28 ಈಸೂರಿನ ವೀರಭದ್ರ ದೇವಸ್ಥಾನದ ಮೇಲೆ ತ್ರಿವರ್ಣ ಧ್ವಜವನ್ನು ಈಸೂರು ಹೋರಾಟಗಾರರು ಹಾರಿಸಿದರು. ಬ್ರಿಟೀಷ್ ಸರ್ಕಾರದ ಅಧಿಕಾರಿಗಳಾಗಿದ್ದ ಶಾನುಭೋಗರು, ಪಟೇಲರಿಂದ ಕಡತಗಳನ್ನು ಕಸಿದುಕೊಂಡು, ಅಲ್ಲಿನ ಆಡಳಿತವನ್ನು ತಮ್ಮ ಹತೋಟಿಗೆ ತಂದುಕೊಂಡರು. ಜಯಪ್ಪ ಹಾಗೂ ಮಲ್ಲಪ್ಪನವರು ಅಲ್ಲಿನ ಆಡಳಿತದ ಚುಕ್ಕಾಣಿ ಹಿಡಿದರು. ಎಲ್ಲರೂ ಖಾದಿ ಟೋಪಿ ಧರಿಸತೊಡಗಿದರು. ನಮ್ಮದು ಸ್ವಾತಂತ್ರ್ಯ ಗ್ರಾಮ ಎಂದು ಘೋಷಿಸದಿಕೊಂಡರು.
ಈಸೂರು ಸಿಂಹಗಳ ಘರ್ಜನೆ ಮೈಸೂರು ಸರ್ಕಾರದ ಅಮಲ್ದಾರ್ ಚನ್ನಕೃಷ್ಣಪ್ಪ ಮತ್ತು ಸಬ್ ಇನ್ಸೆಪೆಕ್ಟರ್ ಕೆಂಚೆಗೌಡ ಅವರ ಕಿವಿಗೆ ಅಪ್ಪಳಿಸಿತು. ಕೂಡಲೇ ಗ್ರಾಮಕ್ಕೆ ಅಧಿಕಾರಿಗಳನ್ನು ಕಳಿಸಲಾಯಿತು. ಅಲ್ಲಿಗೆ ಬಂದ ಅಧಿಕಾರಿಗಳಿಗೆ ಖಾದಿ ಟೋಪಿ ಕೊಟ್ಟು ಧರಿಸಲು ಹಳ್ಳಿಯ ಜನ ಆದೇಶಿಸಿದರು. ಆದರೆ ಅಧಿಕಾರಿಗಳು ಗ್ರಾಮಸ್ಥರು ಹಾರಿಸಿದ್ದ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದರು. ಗುಂಡು ಹಾರಿಸಿದರು, ಇದರಿಂದ ಊರಿನ ಹಿರಿಯರು ಸಾವನ್ನಪ್ಪಿದ್ದರು. ಇದು ಗ್ರಾಮದ ಯುವಕರನ್ನು ರೊಚ್ಚಿಗೆಬ್ಬಿಸಿತು. ಅವರ ಸಿಟ್ಟು ಇಬ್ಬರು ಅಧಿಕಾರಿಗಳನ್ನು ಬಲಿಪಡೆಯಿತು.
ಇಡೀ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟೀಷ್ ಸರ್ಕಾರ ಗ್ರಾಮಕ್ಕೆ ಮಿಲಿಟರಿ ಪಡೆಯನ್ನು ಕಳಿಸಿ ಹತೋಟಿಗೆ ತರಲು ಪ್ರಯತ್ನಿಸಿತು. ಈ ಸುದ್ದಿ ತಿಳಿದು ಇಡೀ ಊರಿಗೆ ಊರೇ ತಲೆ ಮರಿಸಿಕೊಂಡಿತು. ಈಸೂರು ಗ್ರಾಮದ ಮನೆ ಮನೆಗೆ ಬೀಗ ಹಾಕಿಕೊಂಡು ಇಡೀ ಊರು ಸ್ಮಶಾನದಂತಾಗಿತ್ತು. ಈ ವೇಳೆ ಸೇನಾ ಪಡೆ ಅತ್ಯಂತ ಹೇಯವಾಗಿ ವರ್ತಿಸಿತಲ್ಲದೆ ಗ್ರಾಮವನ್ನು ಲೂಟಿ ಮಾಡಿತು. ಅಲ್ಲದೇ 24 ಜನರನ್ನು ಬಂಧಿಸಿ ಶಿವಮೊಗ್ಗ ಜೈಲಿನಲ್ಲಿ ಇಟ್ಟರು. ಅದರಲ್ಲಿ ಹನ್ನೊಂದು ಜನರಿಗೆ ಮರಣದಂಡನೆಯನ್ನು ಉಳಿದ ಹದಿಮೂರು ಜನರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದರು.

ಇದರಲ್ಲಿ ಪಾರ್ವತಮ್ಮ, ಸಿದ್ಧಮ್ಮ, ಹಾಲಮ್ಮ ಎಂಬ ಮಹಿಳೆಯರೂ ಇದ್ದರೂ. ಈ ಪ್ರಕರಣವನ್ನು ಪುನರ್ ಪರಿಶೀಲಿಸಿ 1943 ಜನವರಿ 9 ರಂದು ಹೈಕೋರ್ಟ್ ತೀರ್ಪು ನೀಡಿತು. ಅದರಲ್ಲಿ ಐವರಿಗೆ ಮರಣ ದಂಡನೆಯನ್ನು ವಿಧಿಸಲಾಯಿತು. ಗುರಪ್ಪ. ಮಲ್ಲಪ್ಪ, ಸೂರ್ಯನಾರಾಯಣಾಚಾರ್, ಹಾಲಪ್ಪ, ಶಂಕರಪ್ಪ ಇವರನ್ನು ಅಪರಾಧಿಗಳೆಮದು ಘೋಷಿಸಿತು. ಮಾರ್ಚ್ 8, 9,10 ರಂದು ಅವರನ್ನು ಗಲ್ಲಿಗೇರಿಸಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದರು. ಹೀಗೆ ಪುರುಷರ ಜೊತೆ ಮಹಿಳೆಯರೂ ಸಹ ಹೋರಾಡಿ ಅಮರರಾದರು.
ಏಸೂರು ಕೊಟ್ಟರು ಈಸೂರು ಕೊಡೆವು ಎಂದ ಹೋರಾಟಕ್ಕೆ ನಿಂತ ಈ ಪುಟ್ಟ ಗ್ರಾಮದ ಧೈರ್ಯ ಈಗ ಸ್ವಾತಂತ್ರ್ಯ ಹೋರಾಟದ ಪುಟದಲ್ಲಿ ಎಂದಿಗೂ ಅಚ್ಚಳಿಯದೆ ಉಳಿದಿದೆ. ಇಂದಿಗೂ ಈ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟದ ಎಲ್ಲಾ ಇತಿಹಾಸದ ಕುರುಹುಗಳು ಜೀವಂತವಾಗಿವೆ.
ಹೀಗೆ ನೂರಾರು ಸ್ವಾತಂತ್ರ್ಯ ಹೋರಾಟಗಾರರು ಗ್ರಾಮದಲ್ಲಿ ತಮ್ಮ ಜೀವನ ಮುಡುಪಾಗಿಟ್ಟು ಜನರಲ್ಲಿ ದೇಶ ಭಕ್ತಿಯ ಕಿಚ್ಚನ್ನು ಹೊತ್ತಿಸಿದರು. ಈಸೂರು ದಂಗೆ ಮೂಲಕ ಬ್ರಿಟಿಷರ ಹುಟ್ಟುಡಗಿಸಿದರು. ಇಂತಹ ವೀರ ಯೋಧರ ಗ್ರಾಮದ ಸ್ವಾತಂತ್ರ್ಯ ಹೋರಾಟದ ಕೆಲ ಅಚ್ಚರಿ ಸಂಗತಿಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಾರೆ.
ಈಸೂರು ಹೋರಾಟದಲ್ಲಿ ಅಮರರಾದವರು
ಕೆ.ಗುರಪ್ಪ ಬಿನ್ ಈಶ್ವರಪ್ಪ ಕುಮಾರ್ ಅವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಜಿನಹಳ್ಳಿ ಮಲ್ಲಪ್ಪ ಇವರನ್ನು 8-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಸೂರ್ಯನಾರಯಣಾಚಾರ್ ಬಿನ್ ಪಂಪಪ್ಪಚಾರ್ ಇವರನ್ನು 09-03-1943 ರಲ್ಲಿ ಗಲ್ಲಿಗೇರಿಸಲಾಯಿತು.
ಇವರಲ್ಲಿ ಬಡಕಳ್ಳಿ ಹಾಲಪ್ಪ ಬಿನ್ ಬಸಪ್ಪ ಹಾಗೂ ಅಂಗಡಿ ಹಾಲಪ್ಪ ಎಂಬವರು ತಲೆಮರೆಸಿಕೊಂಡಿದ್ದರು. ಅವರ ಬದಲು ಬಿ.ಹಾಲಪ್ಪ ಅವರನ್ನು 9-03-1943 ರಲ್ಲಿ ಗಲ್ಲಿಗೇರಿಸಲಾಯಿತು. ಗೌಡ್ರ ಶಂಕ್ರಪ್ಪ ಬಿನ್ ಹೊಳಿಯಪ್ಪ 10-03-43 ರಲ್ಲಿ ಇವರನ್ನು ಅಪರಾಧಿಗಳು ಎಂದು ಗಲ್ಲಿಗೇರಿಸಲಾಯಿತು. ಇನ್ನೂ 23 ಜನರಿಗೆ ಜೀವಾವಧಿ ಶಿಕ್ಷೆಯನ್ನು ಘೋಷಿಸಲಾಯಿತು.
ಇದನ್ನೆಲ್ಲ ಹೇಳುತ್ತಿದ್ದ ತಾತನ ಕಣ್ಣಲ್ಲಿ ಕಂಬನಿ ಹಾಗೆ ಜಾರುತ್ತಿತ್ತು.. ಇನ್ನೊಂದೆಡೆ ಏನೂ ಅರಿಯದ ಪುಟ್ಟ ಚಿಂಟುವೂ ಭಾವುಕನಾಗಿ.. ಒದ್ದೆ ಕಣ್ಣಲ್ಲಿ ಇದನ್ನೆಲ್ಲ ಪ್ರಬಂದಕ್ಕಾಗಿ ದಾಖಲಿಸುತ್ತಿದ್ದ..!

