Districts
ಲಿಂಗಾಯತ ಮಠಕ್ಕೆ ಮುಸ್ಲಿಂ ಸ್ವಾಮೀಜಿ ಪಟ್ಟಾಭಿಷೇಕ – ಪೀಠಾರೋಹಣದ ಜೊತೆ ಸರ್ವಧರ್ಮದ ಸಾಮೂಹಿಕ ವಿವಾಹ

ಗದಗ: ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದ ಮುಸ್ಲಿಂ ಯುವಕನಿಗೆ ಖಜೂರಿ ಮಠದ ಕೊರಣೇಶ್ವರ ಮುರುಘರಾಜೇಂದ್ರ ಶ್ರೀಗಳು ಲಿಂಗದೀಕ್ಷೆ ನೀಡಿ ತಮ್ಮ ಶಿಷ್ಯನಾಗಿಸಿಕೊಂಡಿದ್ದು ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಬುಧವಾರ ಈ ಮುಸ್ಲಿಂ ಸ್ವಾಮೀಜಿ ಅವರ ಅಧಿಕೃತ ಪೀಠಾರೋಹಣದ ಪಟ್ಟಾಭಿಷೇಕ ನಡೆಯಿತು.
ಒಂದು ವಾರದ ಹಿಂದಷ್ಟೇ ಮುರುಘರಾಜೇಂದ್ರ ಶ್ರೀಗಳು ಮುಸ್ಲಿಂ ಯುವಕ ದಿವಾನ್ ಶರೀಫ್ ಅವರಿಗೆ ಲಿಂಗ ದೀಕ್ಷೆ ನೀಡಿ, ಅಸೂಟಿ ಕೊರಣೇಶ್ವರ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡಿದ್ದರು. ಲಿಂಗಾಯತ ಮಠಕ್ಕೆ ಮುಸ್ಲಿಂ ವ್ಯಕ್ತಿ ಪೀಠಾಧಿಪತಿಯಾಗಿ ನೇಮಕ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದರ ನಡುವೆ ದಿವಾನ್ ಶರೀಫ್ ಸ್ವಾಮೀಜಿ ಅವರ ಅಧಿಕೃತ ಪೀಠಾರೋಹಣದ ಪಟ್ಟಾಭಿಷೇಕ ನಡೆಯಿತು. ಪೀಠಾರೋಹಣ ನಿಮಿತ್ಯ ಮಠದಲ್ಲಿ ಸರ್ವಧರ್ಮ ಸಾಮೂಹಿಕ ವಿವಾಹ ನೆರವೇರಿಸಲಾಯಿತು.
ಶ್ರೀಗಳ ಸಮ್ಮುಖದಲ್ಲಿ ಏಳು ಜೋಡಿ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸದ್ಯದ ದಿನಗಳಲ್ಲಿ ಬಡವರು ಮದುವೆ ಮಾಡುವುದೇ ತುಂಬಾನೆ ಕಷ್ಟವಾಗಿದೆ. ಇದನ್ನರಿತ ಸ್ವಾಮೀಜಿ, ಉಚಿತವಾಗಿ ಸರಳ ಮದುವೆ ಮಾಡುವ ಮೂಲಕ ಬಡವರ ಬಾರ ಇಳಿಸುವ ಜೊತೆಗೆ ಸಮಾಜಕ್ಕೆ ಹೊಸ ಸಂದೇಶ ಸಾರಲು ಮುಂದಾಗಿದ್ದಾರೆ. ಈ ಮಠ ಮುಂದೆಯೂ ಹೀಗೆ ಸರ್ವಧರ್ಮದ ಮಠವಾಗಲಿ ಎಂಬ ಉದೇಶಕ್ಕೆ ಈ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಮುರುಘರಾಜೇಂದ್ರ ಸ್ವಾಮೀಜಿ ಹೇಳಿದ್ದಾರೆ.
ಅವರು ಜಾತಿಯಲ್ಲಿ ಮುಸ್ಲಿಂ ಆದರೂ ಬಸವ ತತ್ವಕ್ಕೆ ಮಾರುಹೋಗಿ ಸ್ವಾಮೀಜಿ ಆಗಿದ್ದಾರೆ. ಈ ಮುಸ್ಲಿಂ ಸ್ವಾಮೀಜಿ ಮಠದ ಜಾತ್ರೆಯನ್ನಾಗಿ ಮಾಡಿದರು. ಅಸೂಟಿ ಗ್ರಾಮದ ಹೊರವಲಯದ ಕೋರಣೇಶ್ವರ ಶಾಂತಿಧಾಮದಲ್ಲಿ ಬೃಹತ್ ವೇದಿಕೆಯಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಜರುಗಿದವು. ಮಠದ ನೂತನ ಉತ್ತರಾಧಿಕಾರಿ ಮುಸ್ಲಿಂ ಸ್ವಾಮೀಜಿಗೆ ಅನೇಕ ಸಂಘ ಸಂಸ್ಥೆಗಳು, ಸ್ವಾಮಿಜಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಾಥ್ ನೀಡಿದರು. ಬಡವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಡಲಾಗ್ತಿರೋ ಪುಣ್ಯದ ಕೆಲಸಕ್ಕೆ ಎಲ್ಲರಿಂದಲೂ ಹಾರೈಕೆಗಳು ವ್ಯಕ್ತವಾಗಿವೆ.
ಜಾತಿಯತೆಯನ್ನು ಮೀರಿ ಸ್ವಾಮೀಜಿಗಳು ಮಾಡುತ್ತಿರುವ ಕಾರ್ಯವೂ ಸಮಾಜಕ್ಕೆ ಮಾದರಿಯಾಗಿದೆ ಎಂಬ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ಶಾಂತಿಧಾಮದ ವತಿಯಿಂದ ನವ ದಂಪತಿಗಳಿಗೆ ತಾಳಿ, ಕಾಲುಂಗುರ, ಬಟ್ಟೆಗಳನ್ನು ಉಚಿತವಾಗಿ ನೀಡಲಾಯಿತು. ಮುಸ್ಲಿಂ ಸ್ವಾಮೀಜಿಯ ಈ ಸಾಮಾಜಿಕ ಕಾರ್ಯಕ್ಕೆ ಸದ್ಯ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಧರ್ಮದ ಎಲ್ಲೆಯನ್ನು ಮೀರಿ ಬಸವ ತತ್ವದಡಿ ಲಿಂಗ ದೀಕ್ಷೆ ಪಡೆದಿರೋ ಸ್ವಾಮೀಜಿ ಅವರು ಮುಂದಿನ ದಿನಗಳಲ್ಲಿಯೂ ಸಮಾಜವನ್ನು ತಿದ್ದಿ, ತೀಡಿ ಮುನ್ನಡೆಸುವ ಶಕ್ತಿ ನೀಡಲಿ ಎಂಬುದು ಎಲ್ಲರ ಆಶಯವಾಗಿದೆ.
