– `ಟ್ರಬಲ್ ಶೂಟರ್’ಗೆ ಹೈಕಮಾಂಡ್ ಬಹುಪರಾಕ್
ಬೆಂಗಳೂರು: ಕಾಂಗ್ರೆಸ್‌ನ ಟ್ರಬಲ್ ಶೂಟರ್ ಕನಸು ನನಸಾಗಿದೆ. ಸಂಕಷ್ಟದ ಸಮಯದಲ್ಲಿ ಪಕ್ಷದ ಬೆನ್ನಿಗೆ ನಿಂತಿದ್ದ ಪಕ್ಷದ ನಿಷ್ಠನಿಗೆ ವರಿಷ್ಠರು ಬಹುಪರಾಕ್ ಹೇಳಿದ್ದಾರೆ. ಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವಂತೆ ಮುಖ್ಯಮಂತ್ರಿ ಸ್ಥಾನವನ್ನೇ ಉಡುಗೊರೆಯಾಗಿ ನೀಡಿದ್ದಾರೆ.
ಕಾಂಗ್ರೆಸ್‌ಗೆ ಕಷ್ಟ ಕಾಲದಲ್ಲಿ ಕೈಹಿಡಿದ ಟ್ರಬಲ್ ಶೂಟರ್ ಆಸೆ ಕೊನೆಗೂ ಈಡೇರುತ್ತಿದೆ. ಶಾಸಕಾಂಗ ಪಕ್ಷದ ನಾಯಕನಾಗಿ ಡಿಕೆಶಿ (DK Shivakumar) ಆಯ್ಕೆಯಾಗಿದ್ದು, ಮುಖ್ಯಮಂತ್ರಿ ಆಗಲು ಕ್ಷಣಗಣನೆ ಶುರುವಾಗಿದೆ. ಬುಧವಾರ ಸಂಜೆ ಡಿಸಿಎಂ ಹುದ್ದೆಯಿಂದ ಬಡ್ತಿ ಪಡೆದ ಡಿಕೆಶಿ ರಾಜ್ಯದ ಮುಖ್ಯಮಂತ್ರಿ (CM) ಕುರ್ಚಿ ಏರಲು ಅಣಿ ಆಗಿದ್ದಾರೆ.
ಹೌದು, ಡಿ.ಕೆ ಶಿವಕುಮಾರ್ ಸಾಧನೆಯ ಹಿಂದೆ ಕಲ್ಲು ಮುಳ್ಳಿನ ಹಾದಿಯ ಪ್ರಯಾಣಗಳಿದೆ. ನಿದ್ದೆ ಇಲ್ಲದ ರಾತ್ರಿಗಳಿದೆ. ಪಕ್ಷ ಉಳಿಸಿಕೊಳ್ಳಲು ಮಾಡಿದ ಹೋರಾಟಗಳಿವೆ. ಈ ಶ್ರಮಕ್ಕೆ ಪ್ರತಿಫಲ ಎನ್ನುವಂತೆ ಈಗ ಹೈಕಮಾಂಡ್ ಕೂಲಿ ಕೊಟ್ಟಿದೆ.
ಅಂಜಿಕೆ ಅಳಕು ಇಲ್ಲದ ಗುಣ, ಹಿಂಜರಿಕೆ ಇಲ್ಲದೇ ಮುನ್ನುಗ್ಗುವ ಮನೋಬಲ. ಎಂಥಾ ಕಠಿಣ ಪರಿಸ್ಥಿತಿಯಲ್ಲೂ ಪಕ್ಷದ ಪರ ನಿಲ್ಲುವ ಕಮಿಟ್‌ಮೆಂಟ್ ಡಿಕೆಶಿಯನ್ನು ಮುಖ್ಯಮಂತ್ರಿ ಸ್ಥಾನದವರೆಗೂ ತಂದು ನಿಲ್ಲಿಸಿದೆ. ಮಂತ್ರಿ, ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರ ಅನುಭವ ಈಗ ಅವರ ಜೊತೆಗೆ ನಿಂತಿದೆ. ದಿನದಿಂದ ದಿನಕ್ಕೆ ರಾಜಕೀಯದಲ್ಲಿ ಮಾಗುತ್ತಾ ಇಂದು ಪಕ್ವಗೊಂಡ ಹಣ್ಣಾಗಿ ಅತಿದೊಡ್ಡ ಹುದ್ದೆಗೇರುತ್ತಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಜೀವನ ಆರಂಭಿಸಿದ ಡಿ.ಕೆ ಶಿವಕುಮಾರ್ ತಮ್ಮ ನೇರ ನಿಷ್ಠುರ ಮಾತುಗಳಿಂದಲೇ ಎದುರಾಳಿಗಳಿಗೆ ಸಿಂಹಸ್ವಪ್ನ. ಮಾಜಿ ಪ್ರಧಾನಿ ಹೆಚ್‌ಡಿ. ದೇವೇಗೌಡರ ಕುಟುಂಬವನ್ನು ಎದುರು ಹಾಕಿಕೊಂಡು ರಾಜಕೀಯದಲ್ಲಿ ನೆಲೆವೂರಿದ್ದು ಅಲ್ಲದೇ ಪ್ರಮುಖ ಒಕ್ಕಲಿಗ ನಾಯಕನಾಗಿ ಬೆಳೆದು ನಿಂತಿದ್ದಾರೆ. ಇನ್ನು, ರಾಷ್ಟç ಮಟ್ಟದ ರಾಜಕಾರಣದಲ್ಲೂ ಡಿಕೆಶಿ, ಹೈಕಮಾಂಡ್‌ಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದು ಈಗ ಇತಿಹಾಸ.

ಡಿಕೆ ಹೋರಾಟದ ಹಾದಿ:
* 2002ರಲ್ಲಿ ಮಹಾರಾಷ್ಟ್ರದ ವಿಲಾಸ್ ರಾವ್ ದೇಶಮುಖ್ ಸರ್ಕಾರಕ್ಕೆ ಆಪತ್ತು.
* ಅಂದು ಕಾಂಗ್ರೆಸ್ ಸರ್ಕಾರದ ನೆರವಿಗೆ ಧಾವಿಸಿದ್ದು ಡಿಕೆ ಶಿವಕುಮಾರ್.
* ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕರಿಗೆ ಬೆಂಗಳೂರಿನಲ್ಲಿ 10 ದಿನ ಆತಿಥ್ಯ.
* 2017ರಲ್ಲಿ ರಾಜ್ಯಸಭೆಗೆ ಅಹ್ಮದ್ ಪಟೇಲ್ ಸ್ಪರ್ಧಿಸಿದಾಗಲೂ ಸವಾಲು.
* ಗುಜರಾತ್ ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್ನಲ್ಲಿ ಇರಿಸಿದ್ದು ಇದೇ ಡಿಕೆಶಿ.
* ಆ ಮೂಲಕ ಕಾಂಗ್ರೆಸ್ ಪಕ್ಷದ ಬಲ ಕಾಪಾಡುವ ತಂತ್ರದಲ್ಲಿ ಡಿಕೆ ಯಶಸ್ವಿ.
* 2018ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ.
* ದೋಸ್ತಿ ಸರ್ಕಾರ ರಚನೆಯಲ್ಲೂ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ.
* 2024ರಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಹಿಮಾಚಲ ಪ್ರದೇಶದಲ್ಲಿ ಭಿನ್ನಮತ.
* ಕಾಂಗ್ರೆಸ್‌ನ 6 ಶಾಸಕರು ಅಡ್ಡಮತದಾನಕ್ಕೆ ಮುಂದಾಗಿದ್ದಾಗ ಮಧ್ಯಪ್ರವೇಶ.
* ಹಿಮಾಚಲ ಪ್ರದೇಶದ ಕಾಂಗ್ರೆಸ್‌ನಲ್ಲಿ ಭಿನ್ನಮತ ಶಮನಗೊಳಿಸಿದ್ದು ಡಿಕೆಶಿ.
ಇಷ್ಟೆಲ್ಲ ಕಸರತ್ತುಗಳ ಮೂಲಕ ರಾಜಕೀಯ ಪಟ್ಟು ಪ್ರದರ್ಶಿಸಿದ ಡಿಕೆ ಶಿವಕುಮಾರ್, ಈಗ ಬರೀ ನಾಯಕನಾಗಷ್ಟೇ ಉಳಿದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿದ ಅನೇಕ ಹೋರಾಟಗಳ ಮುಂಚೂಣಿಯನ್ನೂ ವಹಿಸಿದ್ದರು. ಕಾಂಗ್ರೆಸ್‌ನ ಹೋರಾಟಗಳಿಗೆ ಸದಾ ಹೆಗಲು ಕೊಟ್ಟು ದುಡಿದಿದ ಡಿಕೆಶಿಗೆ ಪಕ್ಷ ಈಗ ಕೂಲಿ ಕೊಟ್ಟಿದೆ. ಆ ಮೂಲಕ ಡಿ.ಕೆ ಅವರ ಕನಸು ನನಸು ಮಾಡಿದೆ.
