Connect with us

ಹಣಕ್ಕಾಗಿ ಸ್ನೇಹಿತರ ಮಧ್ಯೆ ಕಿರಿಕ್- ಬಂದೂಕಿನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ

ಹಣಕ್ಕಾಗಿ ಸ್ನೇಹಿತರ ಮಧ್ಯೆ ಕಿರಿಕ್- ಬಂದೂಕಿನಿಂದ ಮನಸೋ ಇಚ್ಛೆ ಗುಂಡು ಹಾರಿಸಿದ

ಚಿಕ್ಕಮಗಳೂರು: ಜಮೀನು ವಿವಾದ ಹಾಗೂ ಹಣಕಾಸಿನ ಬಗ್ಗೆ ಸ್ನೇಹಿತರ ಮಧ್ಯೆ ಗಲಾಟೆ ನಡೆದಿದ್ದು, ಸ್ನೇಹಿತನ ಮನೆ ಮೇಲೆ ವ್ಯಕ್ತಿ ಮನಸೋ ಇಚ್ಛೆ ಗುಂಡು ಹಾರಿಸಿರುವ ಘಟನೆ ತಾಲೂಕಿನ ಮಲ್ಲಂದೂರು ಸಮೀಪದ ಯಡದಾಳು ಗ್ರಾಮದಲ್ಲಿ ನಡೆದಿದೆ.

ಎಡದಾಳು ಗ್ರಾಮದ ಚೇತನ್ ಹಾಗೂ ಕಿರಣ್ ಇಬ್ಬರೂ ಸ್ನೇಹಿತರು. ಇಬ್ಬರ ಮಧ್ಯೆ ಹಲವು ರೀತಿಯ ವ್ಯವಹಾರ ಇತ್ತು. ಇತ್ತೀಚೆಗೆ ಜಮೀನು ವಿಚಾರವಾಗಿ ವಾದ-ವಿವಾದವೂ ನಡೆದಿತ್ತು. ಇಬ್ಬರ ನಡುವೆ ಹಣಕಾಸಿನ ವ್ಯವಹಾರವೂ ಬಾಕಿ ಇತ್ತು. ಆದರೆ ಇತ್ತೀಚೆಗೆ ಗ್ರಾಮದಲ್ಲಿ ಕಿರಣ್ ಬಗ್ಗೆ ಚೇತನ್ ವೈಯಕ್ತಿಕವಾಗಿ ಕೆಟ್ಟದಾಗಿ ಮಾತನಾಡಿದ್ದಾನೆಂದು ಚೇತನ್ ಮನೆ ಮೇಲೆ ಕಿರಣ್ ಗುಂಡಿನ ದಾಳಿ ನಡೆಸಿದ್ದಾನೆ.

ಕಿರಣ್ ಮಾವ ನಾಗೇಶ್ ಗೌಡರ ಮನೆಯಲ್ಲಿ ಬಂದೂಕು ಇತ್ತು. ಗ್ರಾಮೀಣ ಭಾಗದಲ್ಲಿ ಜೀವ ಹಾಗೂ ಬೆಳೆಗಳ ರಕ್ಷಣೆಗೆ ಪೊಲೀಸ್ ಇಲಾಖೆಯೇ ನೀಡಿದ್ದ ಅನುಮತಿಯುಳ್ಳ ಗನ್ ಇತ್ತು. ಅದನ್ನೇ ತಂದ ಕಿರಣ್, ಚೇತನ್ ಮನೆ ಬಳಿ ಬಂದು ಕೂಗಾಡಿದ್ದಾನೆ. ಆಗ ಚೇತನ್ ತಾಯಿ ಕಿಟಕಿ ತೆಗೆದು ವಿಚಾರಿಸಿದಾಗ ಮನಸೋ ಇಚ್ಛೆ ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಚೇತನ್ ಮನೆಯವರಾಗಲಿ, ತಾಯಿಯಾಗಲಿ ಅಥವಾ ಚೇತನ್ ಕೂಡ ಮನೆಯಿಂದ ಹೊರಬಂದಿಲ್ಲ.

ಒಂದು ವೇಳೆ ಮನೆಯಿಂದ ಹೊರ ಬಂದಿದ್ದರೆ ಎಷ್ಟು ಜನ ಸಾಯುತ್ತಿದ್ದರೋ ಎಂಬ ಪ್ರಶ್ನೆ ಕಾಡತೊಡಗಿದ್ದು, ಸುಮಾರು ಮೂರ್ನಾಲ್ಕು ಗುಂಡು ಹಾರಿಸಿರುವುದರಿಂದ ಮನೆಯ ಬಾಗಿಲು, ಗೋಡೆ ಹಾಗೂ ಹೆಂಚಿಗೆ ಹೊಡೆದಿರುವ ಪಟ್ಟಿಯಲ್ಲೂ ಗುಂಡಿನ ಮಾರ್ಕ್ ಬಿದ್ದಿದೆ. ಈ ಕುರಿತು ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾನೂನುಬಾಹಿರವಾಗಿ ಬಂದೂಕು ಉಪಯೋಗಿಸಿದ್ದಕ್ಕೆ ಕಿರಣ್ ಮೇಲೆ ಹಾಗೂ ಬಂದೂಕು ಪರವಾನಗಿ ಪಡೆದಿದ್ದ ಅತನ ಮಾವ ನಾಗೇಶ್ ಗೌಡ ಮೇಲೆ ಎಫ್‍ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ಗುಂಡಿನ ದಾಳಿ ನಡೆಸಿದ ಕಿರಣ್ ಹಾಗೂ ಘಟನೆಯ ಬಳಿಕ ಆತನಿಗೆ ಉಳಿಯಲು ಸಹಕಾರ ಮಾಡಿದ ಆರೋಪದ ಮೇಲೆ ಮೂಡಿಗೆರೆ ತಾಲೂಕಿನ ಕಳಸ ಠಾಣಾ ವ್ಯಾಪ್ತಿಯ ಲೋಹಿತ್ ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ. ಘಟನೆ ಬಳಿಕ ತಲೆಮರೆಸಿಕೊಂಡಿರುವ ನಾಗೇಶ್ ಗೌಡ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

Advertisement
Advertisement