Crime
ಮಾಸ್ಕ್ ತಯಾರಿಕಾ ಘಟಕದಲ್ಲಿ ಅಗ್ನಿ ಅವಘಡ- ಓರ್ವ ದುರ್ಮರಣ

– ಭಾರೀ ಅನಾಹುತದಿಂದ ಇಬ್ಬರು ಬಚಾವ್
ನವದೆಹಲಿ: ಮಾಸ್ಕ್ ತಯಾರಕಾ ಘಟಕದಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಓರ್ವ ದಾರುಣವಾಗಿ ಮೃತಪಟ್ಟ ಘಟನೆ ದೆಹಲಿಯ ಮಯಾಪುರಿ ಪ್ರದೇಶದಲ್ಲಿ ನಡೆದಿದೆ.
ಮೃತನನ್ನು ಜುಗಲ್ ಕಿಶೋರ್ ಎಂದು ಗುರುತಿಸಲಾಗಿದೆ. ಅಮನ್ ಅನ್ಸಾರಿ (18) ಹಾಗೂ ಫೆರೋಜ್ ಅನ್ಸಾರಿ(24) ರನ್ನು ರಕ್ಷಣೆ ಮಾಡಲಾಗಿದೆ. ಇಂದು ನಸುಕಿನ ಜಾವ 3.50ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.
ಘಟನೆ ನಡೆಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾರ್ಖಾನೆಯ ಗೋಡೆ ಹಾಗೂ ಬಾಗಿಲುಗಳನ್ನು ಒಡೆದು ಮೂವರನ್ನು ಭಾರೀ ಅವಘಡದಿಂದ ರಕ್ಷಿಸಲಾಗಿದೆ. ಇದರಲ್ಲಿ ಓರ್ವ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದನು. ಕೂಡಲೇ ಆತನನ್ನು ದೀನ್ ದಯಾಳ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದ್ರೂ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮಾಸ್ಕ್ ತಯಾರಿಕಾ ಕಾರ್ಖಾನೆ ಕಟ್ಟಡದ ಮೂರಬೇ ಮಹಡಿಯಲ್ಲಿದ್ದು, ಅಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯ ಮೆಷಿನ್ ಸೇರಿದಂತೆ ಕೆಲವೊಂದು ವಸ್ತುಗಳನ್ನು ಹೊರತೆಗೆಯಲಾಗಿದೆ.
