-ಕಟ್ಟಡದ ಮೇಲಿಂದ ಬಿದ್ದಿದ್ದಾಗಿ ಬಿಂಬಿಸಿ ಆಸ್ಪತ್ರೆಗೆ ಸೇರಿಸಿದ್ದ ಆರೋಪಿ
ಬೆಳಗಾವಿ: ಪಾರ್ಟಿಯಲ್ಲಿ ಚಿಕನ್ ಪೀಸ್ ತಿನ್ನುವ ವಿಚಾರಕ್ಕೆ ಆರಂಭವಾದ ಕ್ಷುಲ್ಲಕ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆ ಮೂಡಲಗಿ (Mudalagi) ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಜರುಗಿದೆ.
ಮೃತ ವ್ಯಕ್ತಿ ಸೀತಾರಾಮ್ ಹಾಗೂ ಆರೋಪಿ ಅರುಣ್‌ಕುಮಾರ್ ಉತ್ತರ ಪ್ರದೇಶದ ಪಿಲಿಪತ್ ಜಿಲ್ಲೆಯ ಕಬೀರಗಂಜ್ ಗ್ರಾಮದ ನಿವಾಸಿಗಳಾಗಿದ್ದು, ಇಬ್ಬರೂ ಕೂಡ ಮೂಡಲಗಿ ಪಟ್ಟಣದ ಸ್ಟಿಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ 16ರ ಬಾಲಕಿ ಮೇಲೆ ಗ್ಯಾಂಗ್ ರೇಪ್ ಆರೋಪ – ಡ್ರೈವರ್, ಕಂಡಕ್ಟರ್ ಬಂಧನ
ನಿನ್ನೆ (ಆ.30) ರಾತ್ರಿ ಇಬ್ಬರೂ ಸೇರಿ ಚಿಕನ್ ಪಾರ್ಟಿ ಮಾಡುವಾಗ ನನಗೆ ಹೆಚ್ಚಿಗೆ ಚಿಕನ್ ಪೀಸ್ ಬೇಕು ಎಂಬ ವಿಚಾರಕ್ಕೆ ಗಲಾಟೆ ಆರಂಭವಾಗಿದೆ. ಜಗಳ ತಾರಕಕ್ಕೇರಿ ಆರೋಪಿ ಚಾಕುವಿನಿಂದ ಸೀತಾರಾಮ್ ಎದೆಗೆ ಇರಿದಿದ್ದಾನೆ. ಬಳಿಕ ಗಾಯಗೊಂಡ ಸೀತಾರಾಮ್‌ನನ್ನು ಗೋಕಾಕ್ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು, ಚಿಕಿತ್ಸೆ ಕೊಡಿಸಲು ಮುಂದಾಗಿದ್ದ. ಅಷ್ಟೇ ಅಲ್ಲದೆ, ಸೀತಾರಾಮ್ ಕಟ್ಟಡದ ಮೇಲಿಂದ ಬಿದ್ದಿದ್ದಾನೆ ಎಂದು ಬಿಂಬಿಸಲು ಕೂಡ ಯತ್ನಿಸಿದ್ದ.
ವಿಷಯ ತಿಳಿದು ಆಸ್ಪತ್ರೆಗೆ ಘಟಪ್ರಭಾ ಠಾಣೆ ಪೊಲೀಸರು ಭೇಟಿ ನೀಡಿ, ಆರೋಪಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ. ಇತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸೀತಾರಾಮ್ ಮೃತಪಟ್ಟಿದ್ದಾರೆ. ಈ ಕುರಿತು ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: KPSC ನೇಮಕಾತಿ ಹಗರಣ; ಶಾಂತ ಹೊಸಮನಿ ವಿರುದ್ಧ ಲುಕೌಟ್ ನೋಟಿಸ್
