ನವದೆಹಲಿ: ಉತ್ತರ ಪ್ರದೇಶದ (Uttar Pradesh) 16 ವರ್ಷದ ಬಾಲಕಿಯ ಮೇಲೆ ಚಲಿಸುತ್ತಿದ್ದ ಸ್ಲೀಪರ್ ಬಸ್‌ನಲ್ಲಿ (Sleeper Bus) ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಸ್ ಚಾಲಕ (Bus Driver) ಹಾಗೂ ಕಂಡಕ್ಟರ್‌ರನ್ನು (Conductor) ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬಾಲಕಿಯನ್ನು ಸುಮಾರು 47 ಕಿಲೋಮೀಟರ್ ದೂರ ಕರೆದೊಯ್ದು ಬಳಿಕ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಆಗಸ್ಟ್ 4ರ ರಾತ್ರಿ ಕಾಶ್ಮೀರಿ ಗೇಟ್ ಪ್ರದೇಶದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಕುಲದೀಪ್ ಹಾಗೂ ಕಂಡಕ್ಟರ್ ಸಂದೀಪ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ʻಗೃಹಲಕ್ಷ್ಮೀʼಯರಿಗೆ ಶಾಕ್: ಸರ್ವೆ ಮುಗಿಯೋವರೆಗೂ ಅಕೌಂಟ್‌ಗೆ ಹಣ ಬರಲ್ಲ
ಸಂತ್ರಸ್ತೆ ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ನಿವಾಸಿಯಾಗಿದ್ದು, 11ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಗಸ್ಟ್ 4ರಂದು ಕುಟುಂಬದವರೊಂದಿಗೆ ಉಂಟಾದ ಮನಸ್ತಾಪದ ಹಿನ್ನೆಲೆಯಲ್ಲಿ ಬಾಲಕಿ ಯಾರಿಗೂ ತಿಳಿಸದೆ ಮನೆಯಿಂದ ಹೊರಟಿದ್ದಳು. ನೋಯ್ಡಾದಲ್ಲಿರುವ ತನ್ನ ಸಂಬಂಧಿಕರನ್ನು ಭೇಟಿಯಾಗಲು ಆಕೆ ತೆರಳುತ್ತಿದ್ದಳು. ಭಾರಿ ಮಳೆ ಹಾಗೂ ಕತ್ತಲಿನ ಕಾರಣದಿಂದಾಗಿ ದಾರಿ ತಪ್ಪಿದ ಬಾಲಕಿ ತಪ್ಪಾಗಿ ಪರಿಚೌಕ್‌ನಲ್ಲಿ ಇಳಿದಿದ್ದಳು. ಇದನ್ನೂ ಓದಿ: ಬೆಂಗಳೂರಲ್ಲಿ ಉದ್ಯಮಿ ಕಿಡ್ನ್ಯಾಪ್ ಆರೋಪ; ಆಂಧ್ರದ ಮೈದುಕುರ್ ಶಾಸಕರ ವಿರುದ್ಧ FIR
ಈ ವೇಳೆ ಖಾಲಿ ಸ್ಲೀಪರ್ ಬಸ್‌ವೊಂದು ಅಲ್ಲಿಂದ ಹಾದುಹೋಗುತ್ತಿತ್ತು. ಭಾರಿ ಮಳೆಯಲ್ಲಿ ಸಿಲುಕಿದ್ದ ಬಾಲಕಿ ಸಹಾಯಕ್ಕಾಗಿ ಬಸ್ ನಿಲ್ಲಿಸುವಂತೆ ಕೈ ಸನ್ನೆ ಮಾಡಿದ್ದಾಳೆ. ಚಾಲಕ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ, ಅದು ನೋಯ್ಡಾ ಸೆಕ್ಟರ್-63ಕ್ಕೆ ತೆರಳುತ್ತಿದೆ ಎಂದು ಹೇಳಿ ಆಕೆಯನ್ನು ಬಸ್‌ಗೆ ಹತ್ತಿಸಿಕೊಂಡಿದ್ದಾರೆ. ಬಸ್ ಚಲಿಸಲು ಆರಂಭಿಸಿದ ಕೆಲವೇ ಸಮಯದಲ್ಲಿ ಕಂಡಕ್ಟರ್ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಲು ಆರಂಭಿಸಿದ್ದಾನೆ ಎಂದು ಆರೋಪಿಸಲಾಗಿದೆ. ಬಳಿಕ ಚಾಲಕ ಮತ್ತು ಕಂಡಕ್ಟರ್ ಇಬ್ಬರೂ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದಾಗ ಆರೋಪಿಗಳು ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದನ್ನೂ ಓದಿ: ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ
ನಂತರ ಆರೋಪಿಗಳು ಬಾಲಕಿಯನ್ನು ತಡರಾತ್ರಿ ಕಾಶ್ಮೀರಿ ಗೇಟ್ ಬಸ್ ಟರ್ಮಿನಲ್ ಸಮೀಪದ ರಿಂಗ್ ರೋಡ್ ಬಳಿ ಇಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಭಯಭೀತಳಾದ ಬಾಲಕಿ ಕಾಶ್ಮೀರಿ ಗೇಟ್ ಪೊಲೀಸರನ್ನು ಸಂಪರ್ಕಿಸಿ ನಡೆದ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಂತರ ಪೊಲೀಸರು ಟಿಮಾರ್ಪುರದಲ್ಲಿರುವ ಬಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾಗಿದೆ ಎನ್ನಲಾದ ಸ್ಲೀಪರ್ ಬಸ್ ಅನ್ನೂ ವಶಪಡಿಸಿಕೊಂಡಿದ್ದು, ಅದನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಬಂಧಿತರಾಗಿದ್ದ 31 ಬಾಂಗ್ಲಾ ಪ್ರಜೆಗಳ ಗಡಿಪಾರು
ಪೊಲೀಸರ ಪ್ರಕಾರ, ಆರೋಪಿಗಳು ಈ ಬಸ್ ಅನ್ನು ಸೂರಜ್‌ಪುರದಲ್ಲಿರುವ ವರ್ಕ್ಶಾಪ್‌ಗೆ ದುರಸ್ತಿಗಾಗಿ ತೆಗೆದುಕೊಂಡು ಹೋಗಿದ್ದರು. ಯಾಂತ್ರಿಕ ದೋಷ ಸರಿಪಡಿಸಿದ ಬಳಿಕ ಖಾಲಿ ಬಸ್ ಅನ್ನು ಟಿಮಾರ್ಪುರಕ್ಕೆ ಕೊಂಡೊಯ್ಯುತ್ತಿದ್ದ ವೇಳೆ ಪರಿಚೌಕ್ ಬಳಿ ಬಾಲಕಿಯನ್ನು ಆರೋಪಿಗಳು ಕಂಡಿದ್ದರು. ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಕರ ಮಲಗುವ ಸ್ಥಳಗಳಿಗೆ ಪರದೆಗಳನ್ನು ಅಳವಡಿಸಲಾಗಿರುವುದರಿಂದ ಹೊರಗಿನಿಂದ ಒಳಗೆ ನಡೆಯುತ್ತಿದ್ದ ಘಟನೆಗಳು ಗೋಚರಿಸುವ ಸಾಧ್ಯತೆ ಕಡಿಮೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪರಿಚೌಕ್‌ನಿಂದ ಕಾಶ್ಮೀರಿ ಗೇಟ್‌ವರೆಗೆ ಬಸ್ ಸುಮಾರು 47 ಕಿಲೋಮೀಟರ್ ಸಂಚರಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದು, ಬಸ್‌ನಲ್ಲಿನ ಸಾಕ್ಷ್ಯಗಳು ಸೇರಿದಂತೆ ಹಲವು ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಇದನ್ನೂ ಓದಿ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಮನೆ – ಲಕ್ಷಾಂತರ ರೂ. ಮೌಲ್ಯದ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲು
