ಲಂಡನ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UN Security Council) ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನಕ್ಕೆ ನಾಲ್ಕು ಯುರೋಪಿಯನ್ ರಾಷ್ಟ್ರಗಳು ಬೆಂಬಲ ನೀಡಿವೆ. ಇದರಿಂದ ಭಾರತ ಶೀಘ್ರದಲ್ಲೇ ಮುಂದಿನ ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಲಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನದ ಸಂದರ್ಭದಲ್ಲಿ ಭಾರತದ (India) ವಿದೇಶಾಂಗ ಸಚಿವರೊಂದಿಗೆ ನಡೆದ ಮೊದಲ ಸಭೆಯಲ್ಲಿ, ‘ವಿಸೆಗ್ರಾಡ್ ಗ್ರೂಪ್’ನ (V4) 4 ಸದಸ್ಯ ರಾಷ್ಟ್ರಗಳು ಬೆಂಬಲ ವ್ಯಕ್ತಪಡಿಸಿವೆ. ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ ಮತ್ತು ಜೆಕ್ ಗಣರಾಜ್ಯಗಳು ಭಾರತದ ಪ್ರಯತ್ನವನ್ನ ಒಟ್ಟಾಗಿ ಬೆಂಬಲಿಸಿವೆ ಎಂದು ಸ್ಲೋವಾಕಿಯಾದ ವಿದೇಶಾಂಗ ಸಚಿವ ಜುರಾಜ್ ಬ್ಲಾನಾರ್ ಹೇಳಿದರು.
#WATCH | After the first Visegrád Group (V4) + India Foreign Ministers’ Meeting, the Foreign Minister of Slovakia, Juraj Blanár, says, “We all agree, as V4 countries, that India, as part of the Global South, an upcoming superpower in the Indo-Pacific region, must be at the table… pic.twitter.com/GPjxQ3ecnY
— ANI (@ANI) September 21, 2026
ಗ್ಲೋಬಲ್ ಸೌತ್ (ಜಾಗತಿಕ ದಕ್ಷಿಣ) ಭಾಗವಾಗಿರುವ ಮತ್ತು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಂದಿನ ಸೂಪರ್ ಪವರ್ ಆಗಿರುವ ಭಾರತವು ವಿಶ್ವಸಂಸ್ಥೆಯ ಭದ್ರಯಾ ಮಂಡಳಿಯಲ್ಲಿ ಶಾಶ್ವತ ಸದಸ್ಯನಾಗಿ ಸ್ಥಾನ ಪಡೆಯಬೇಕು ಎನ್ನುವ ವಿಷಯವನ್ನ V4 ದೇಶಗಳಾದ ನಾವೆಲ್ಲರೂ ಒಪ್ಪುತ್ತೇವೆ ಎಂದು ಸಚಿವ ಜುರಾಜ್ ಬ್ಲಾನಾರ್ ಹೇಳಿದ್ದಾರೆ.
ಸಹಕಾರ ಬಲಪಡಿಸಲು ಭಾರತ ಮತ್ತು V4 ಒಪ್ಪಂದ
ಇನ್ನೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈ ಬಗ್ಗೆ ಮಾತನಾಡಿ, V4 ಮತ್ತು ಭಾರತದ ವಿದೇಶಾಂಗ ಸಚಿವರ ನಡುವಿನ ಈ ಮೊದಲ ಸಭೆ ʻಒಂದು ಹೊಸ ಐತಿಹಾಸಿಕ ಸಂದರ್ಭ ಎಂದು ಬಣ್ಣಿಸಿದರು.
ರಾಜಕೀಯ, ಆರ್ಥಿಕ, ತಂತ್ರಜ್ಞಾನ, ರಕ್ಷಣೆ ಮತ್ತು ಜನರ ನಡುವಿನ ಬಾಂಧವ್ಯ ಬಲಪಡಿಸಲು ಈ ದೇಶಗಳು ಒಪ್ಪಿಕೊಂಡಿವೆ ಎಂದರಲ್ಲದೇ, ತಮ್ಮ ವಿದೇಶಾಂಗ ಸಚಿವರ ವಾರ್ಷಿಕ ಸಭೆಗಳನ್ನ ನಡೆಸಲು ಹಾಗೂ ವಾರ್ಷಿಕ ವ್ಯಾಪಾರ ವೇದಿಕೆ ರಚಿಸಲು ಒಪ್ಪಿಕೊಂಡಿರುವುದಾಗಿಯೂ ತಿಳಿಸಿದರು.
ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ಹೆಚ್ಚಿನ ಸಹಕಾರವನ್ನು ಅನ್ವೇಷಿಸುವುದರ ಜೊತೆಗೆ, ಅಸ್ತಿತ್ವದಲ್ಲಿರುವ ರಕ್ಷಣಾ ಸಂಬಂಧಗಳನ್ನು ಬಲಪಡಿಸಲು ಭಾರತ ಮತ್ತು V4 ದೇಶಗಳು ಪ್ರಯತ್ನಿಸಲಿವೆ ಎಂದು ಜೈಶಂಕರ್ ಹೇಳಿದರು.
ತಂತ್ರಜ್ಞಾನ, ರಕ್ಷಣೆ ಮತ್ತು ಜಾಗತಿಕ ವಿಷಯಗಳ ಮೇಲೆ ಗಮನ
ಬಾಹ್ಯಾಕಾಶ, ಸಂಪರ್ಕ ವ್ಯವಸ್ಥೆ, ಸಂಶೋಧನೆ, ಶಿಕ್ಷಣ ಮತ್ತು ಸಾಂಸ್ಕೃತಿಕ ವಿನಿಮಯ ಕ್ಷೇತ್ರಗಳಲ್ಲಿನ ಸಹಕಾರದ ಕುರಿತಾಗಿಯೂ ಸಚಿವರು ಚರ್ಚಿಸಿದರು. ಇದೇ ವೇಳೆ ವಿ4 ದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಉಪಸ್ಥಿತಿಯನ್ನೂ ಪ್ರಸ್ತಾಪಿಸಿದರು. ಜೊತೆಗೆ ಉಕ್ರೇನ್ ಸಂಘರ್ಷ ಮತ್ತು ಗಲ್ಫ್ ಪ್ರದೇಶದ ಪರಿಸ್ಥಿತಿಯಂತಹ ಪ್ರಮುಖ ಅಂತಾರಾಷ್ಟ್ರೀಯ ಬೆಳವಣಿಗೆಗಳ ಕುರಿತಾಗಿಯೂ ಸಭೆಯಲ್ಲಿ ಚರ್ಚಿಸಲಾಯಿತು.

