ಬೆಂಗಳೂರು: ರಾಜರಾಜೇಶ್ವರಿನಗರದಲ್ಲಿ ಬಿಜೆಪಿ ನಾಯಕ ಹಾಗೂ ಉದ್ಯಮಿ ರವಿಪ್ರಕಾಶ್ ಅವರನ್ನ ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮೈದುಕುರ್ ಠಾಣೆ ಪೊಲೀಸರು (Mydukur Police) ಬಲವಂತವಾಗಿ ಕರೆದೊಯ್ದಿದ್ದು, ಇದು ಅಪಹರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆಗಸ್ಟ್ 30 ರಂದು ಬೆಳಗ್ಗೆ ಆರ್.ಆರ್.ನಗರದ ನಿವಾಸದಿಂದ ರವಿಪ್ರಕಾಶ್ ಅವರನ್ನು ಕರೆದೊಯ್ಯಲಾಗಿತ್ತು. ಆಂಧ್ರದ ಮೈದುಕುರ್ ಠಾಣೆಯಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದಲ್ಲಿ ರವಿಪ್ರಕಾಶ್ 5ನೇ ಆರೋಪಿಯಾಗಿದ್ದಾರೆ. ಆದರೆ, ಈ ಕೇಸ್‌ಗೂ ತಮಗೂ ಯಾವುದೇ ಸಂಬಂಧವಿಲ್ಲ. ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಅವರ ಪುತ್ರಿ ರೂಪಾಲಿ ಆರೋಪಿಸಿದ್ದಾರೆ. ಇದನ್ನೂ ಓದಿ: ಪಶುವೈದ್ಯರ ನೇಮಕಾತಿ ಹಗರಣ – KPSC ಪರೀಕ್ಷೆ ಬರೆಯಲು ಬೆಂಗಳೂರಿಗೆ ಹೋಗಿದ್ದ ಬಸವರಾಜ್ ಕನ್ನಾಳೆ ಇಂದು ಕೋಟ್ಯಾಧಿಪತಿ
ಈ ಘಟನೆಯ ಹಿಂದೆ ಮೈದುಕುರ್ ಕ್ಷೇತ್ರದ ಶಾಸಕ ಹಾಗೂ ಟಿಟಿಡಿ ಮಾಜಿ ಅಧ್ಯಕ್ಷ ಪುಟ್ಟ ಸುಧಾಕರ್ ಅವರ ಕೈವಾಡವಿದೆ ಎಂದು ಆರೋಪಿಸಲಾಗಿದೆ. ಆರ್.ಆರ್. ನಗರದಲ್ಲಿರುವ 14 ಎಕರೆ ಜಮೀನಿಗೆ ಸಂಬಂಧಿಸಿದಂತೆ ರವಿಪ್ರಕಾಶ್ ಮತ್ತು ಪುಟ್ಟ ಸುಧಾಕರ್ ನಡುವೆ ವೈಷಮ್ಯ ಹಾಗೂ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಕಳೆದ ತಿಂಗಳು ಜಮೀನಿಗೆ ಅಕ್ರಮವಾಗಿ ನುಗ್ಗಲು ಯತ್ನಿಸಿದ್ದ ಸುಧಾಕರ್, ಅಧಿಕಾರ ಬಳಸಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಶಾಸಕ ಪುಟ್ಟ ಸುಧಾಕರ್ ಸೇರಿದಂತೆ ಮೂವರ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್ ಪ್ರಕರಣ ದಾಖಲಾಗಿದೆ.
