ಅಮರಾವತಿ: ಗಣೇಶ ಚತುರ್ಥಿ ಅಂಗವಾಗಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದ ವೇಳೆ ಕುದಿಯುತ್ತಿದ್ದ ಸಾಂಬಾರ್ ತುಂಬಿದ್ದ ದೊಡ್ಡ ಪಾತ್ರೆಗೆ ಆಕಸ್ಮಿಕವಾಗಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಆಂಧ್ರಪ್ರದೇಶದ (Andhra Pradesh) ವಿಜಯವಾಡದಲ್ಲಿ (Vijayawada) ನಡೆದಿದೆ.
ಮೃತ ಮಹಿಳೆಯನ್ನು ಸುಜಾತಾ (46) ಎಂದು ಗುರುತಿಸಲಾಗಿದೆ. ಗಣೇಶೋತ್ಸವ ಆಚರಣೆಯ ಅಂಗವಾಗಿ ನಡೆದ ಅನ್ನದಾನ ಕಾರ್ಯಕ್ರಮದಲ್ಲಿ ಆಹಾರ ತಯಾರಿಕೆಯ ವ್ಯವಸ್ಥೆಗಳಲ್ಲಿ ಸುಜಾತಾ ಸಹಕರಿಸುತ್ತಿದ್ದರು ಎಂದು ಪೊಲೀಸರು ಹಾಗೂ ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕೊಡೋದಕ್ಕೆ ಹಣ ಇಲ್ಲ, ಸಿಎಂ ಪುಗ್ಸಟ್ಟೆ ಘೋಷಣೆ ಮಾಡ್ಕೊಂಡು ಹೊರಟಿದ್ದಾರೆ: ವಿಜಯೇಂದ್ರ ಕಿಡಿ
ಭಾನುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸುಜಾತಾ ಸಾಂಬಾರ್ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕುದಿಯುತ್ತಿದ್ದ ಸಾಂಬಾರ್ ತುಂಬಿದ್ದ ದೊಡ್ಡ ಪಾತ್ರೆಯೊಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಸುಜಾತಾ ಅವರ ದೇಹಕ್ಕೆ ಗಂಭೀರ ಸುಟ್ಟ ಗಾಯಗಳಾಗಿವೆ. ತಕ್ಷಣವೇ ಆಯೋಜಕರು ಸುಜಾತರನ್ನು ಆಸ್ಪತ್ರೆಗೆ ಕರೆದೊಯ್ದು ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಸುಜಾತಾ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ವಂದೇ ಮಾತರಂ ವಿವಾದ: ಕೇಂದ್ರಕ್ಕೆ 2 ವಾರಗಳಲ್ಲಿ ಉತ್ತರ ನೀಡಲು ಸುಪ್ರೀಂ ಕೋರ್ಟ್ ಸೂಚನೆ
ಸುಜಾತಾ ಸಾಂಬರ್ ಪಾತ್ರೆಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಸುಜಾತಾ ಪಾತ್ರೆಗೆ ಹೇಗೆ ಬಿದ್ದರು ಹಾಗೂ ಘಟನೆಗೆ ಕಾರಣವಾದ ಪರಿಸ್ಥಿತಿಗಳೇನು ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಗಣೇಶೋತ್ಸವದ ಸಂಭ್ರಮದ ನಡುವೆ ನಡೆದ ಈ ದುರಂತ ಸ್ಥಳೀಯರಲ್ಲಿ ಆಘಾತ ಮೂಡಿಸಿದೆ. ಸುಜಾತಾ ಅವರ ಸಾವಿನಿಂದ ಕುಟುಂಬಸ್ಥರು ಹಾಗೂ ಸಂಬಂಧಿಕರು ದುಃಖದಲ್ಲಿ ಮುಳುಗಿದ್ದಾರೆ. ಇದನ್ನೂ ಓದಿ: ವಂದೇ ಮಾತರಂ ಅರ್ಧಕ್ಕೆ ಕಡಿತ – ಆದೇಶ ಮರುಪರಿಶೀಲನೆಗೆ ಸೂಚಿಸಿ, ಸರ್ಕಾರಕ್ಕೆ ಗೆಹ್ಲೋಟ್ ಪತ್ರ

