– ಹೊಸ SIT ರಚಿಸಿ 3 ತಿಂಗಳಲ್ಲಿ ತನಿಖೆ ಪೂರ್ಣ ಗೊಳಿಸಲು ಆದೇಶ
ನವದೆಹಲಿ: ಧರ್ಮಸ್ಥಳದ (Dharmasthala) 17 ವರ್ಷದ ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ (Soujanya Case) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣವನ್ನು ಹೊಸದಾಗಿ ಮರುತನಿಖೆ ನಡೆಸುವಂತೆ ಸೂಚಿಸಿರುವ ನ್ಯಾಯಾಲಯ, ತನಿಖೆಗಾಗಿ ಹೊಸ ವಿಶೇಷ ತನಿಖಾ ತಂಡ (SIT) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸೌಜನ್ಯಾ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸಂಜಯ್ ಕುಮಾರ್ ನೇತೃತ್ವದ ದ್ವಿ ಸದಸ್ಯ ಪೀಠ, ಎಸ್ಐಟಿ ಮುಂದಿನ 3 ತಿಂಗಳ ಒಳಗಾಗಿ ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಸಂತೋಷ್ ರಾವ್ ಅವರನ್ನು ಜೂನ್ 16, 2023 ರಂದು ಸಿಬಿಐ ನ್ಯಾಯಾಲಯವು ಖುಲಾಸೆಗೊಳಿಸಿತು. ತನಿಖೆಯಲ್ಲಿ ಗಂಭೀರವಾಗಿ ಲೋಪಗಳಾಗಿದ್ದು, ನಿಜವಾದ ಆರೋಪಿಗಳನ್ನು ರಕ್ಷಿಸಲಾಗಿದೆ. ಪ್ರಕರಣದ ನೈಜ ಆರೋಪಿಗಳನ್ನು ಪತ್ತೆಹಚ್ಚಿ ನ್ಯಾಯ ಒದಗಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಪ್ರಕರಣದ ಹಿಂದಿನ ತನಿಖೆ ನಡೆಸಿದ್ದ ಸಿಬಿಐನ ತನಿಖೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಐಡಿ ತನಿಖೆಯಲ್ಲಿ ಸಂಗ್ರಹಿಸಲಾಗಿದ್ದ ಸಾಕ್ಷ್ಯಗಳನ್ನೇ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ ಹಾಗೂ ಸ್ವತಂತ್ರ ತನಿಖೆ ನಡೆದಿಲ್ಲ, ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಹೋಗದೇ ಹೇಗೆ ತನಿಖೆ ಮಾಡಲಾಯ್ತು ಎಂದು ಪ್ರಶ್ನಿಸಿತ್ತು.
ವಿಚಾರಣೆ ಸಮಯದಲ್ಲಿ ನ್ಯಾಯಲಯ ಹೊಸದಾಗಿ ತನಿಖೆ ನಡೆಸಲು ಆದೇಶಿಸಿದರೆ ಹೊಸ ವಿಶೇಷ ತನಿಖಾ ತಂಡವನ್ನು ರಚಿಸಲು ಸಿದ್ಧವಿದೆ ಎಂದು ರಾಜ್ಯ ಸರ್ಕಾರ ಹೇಳಿತ್ತು. ಇದರ ಅನ್ವಯ ಕೋರ್ಟ್ ಇಂದು ಆದೇಶ ನೀಡಿದ್ದು ಎಸ್ಐಟಿ ಹೊಸದಾಗಿ ತನಿಖೆ ಮಾಡಬೇಕು, ಎಸ್ಐಟಿಯಲ್ಲಿ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳನ್ನು ಸೇರಿಸಬಾರದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
2012ರ ಅಕ್ಟೋಬರ್ನಲ್ಲಿ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅವರ ಅತ್ಯಾಚಾರ ಹಾಗೂ ಕ್ರೂರ ಹತ್ಯೆ ನಡೆಯಿತು. ಈ ಪ್ರಕರಣದಲ್ಲಿ ಸಂತೋಷ್ ರಾವ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಸಿಬಿಐ ವಿಶೇಷ ನ್ಯಾಯಾಲಯವು 2023ರಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್ ಅವರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿತ್ತು.
2024 ರಲ್ಲಿ, ಕುಸುಮಾವತಿ ಹೊಸ ಸಿಬಿಐ ತನಿಖೆ ಕೋರಿ ಕರ್ನಾಟಕ ಹೈಕೋರ್ಟ್ ಮೊರೆ ಹೋದರು. ಆಗಸ್ಟ್ 20, 2024 ರಂದು, ಹೈಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸಿತು ಆದರೆ ಹೆಚ್ಚಿನ ತನಿಖೆಯ ಅಗತ್ಯತೆಯ ಬಗ್ಗೆ ಅವಲೋಕನಗಳನ್ನು ಮಾಡಿತು. ಈ ಆದೇಶದ ವಿರುದ್ಧ ಕುಸುಮವತಿ ಗೌಡ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

