ಮಂಡ್ಯ: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ಸ್ ಹೈವೇಯಲ್ಲಿ(Expressway) ರೈತರಿಗೆ ಮುಕ್ತ ಸಂಚಾರ ನೀಡಬೇಕು. (Bangalore/Mysore Toll) ಟೋಲ್ ನಲ್ಲಿ ಹಣ ಸಂಗ್ರಹ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಡೆಸಿದ ಹೋರಾಟಕ್ಕೆ(Farmer Protest) ಕೊನೆಗೂ ಜಯ ಸಿಕ್ಕಿದಂತಾಗಿದೆ.
ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ಸ್ ಹೈವೇನಲ್ಲಿ ಓಡಾಡುವ ಪ್ರತಿಯೊಂದು ವಾಹನಗಳಿಗೂ ಪ್ರಾಧಿಕಾರ ಸುಂಕ ವಸೂಲು ಮಾಡುತ್ತಿತ್ತು. ಇದರಿಂದಾಗಿ ಸ್ಥಳೀಯ ರೈತರಿಗೆ ತುಂಬಾ ಅನಾನುಕೂಲವಾಗುತ್ತಿತ್ತು. ಈ ಬಗ್ಗೆ ರೈತರು ಎಷ್ಟು ಬಾರಿ ಮನವಿ ಮಾಡಿದರು ಪ್ರಯೋಜನವಾಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಕರ್ನಾಟಕ ರೈತ ಸಂಘ ಹಾಗೂ ವಿವಿಧ ಸಂಘಟನೆಗಳು ರೈತರೊಡಗೂಡಿ ಇಂದು ಗಣಂಗೂರು ಬಳಿಯ ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದವು.
ರೈತರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಪ್ರಶ್ನಿಸಿದ ಸಂಘಟನೆಗಳು ನ್ಯಾಯ ಸಿಗುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟವನ್ನು ತೀವ್ರಗೊಳಿಸಿದ್ದವು. ಪ್ರತಿಭಟನೆ ನಡೆಸುತ್ತಿದ್ದರೂ ಟೋಲ್ ಸಿಬ್ಬಂದಿಗಳು ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ ಹೋರಾಟಗಾರರು ಟೋಲ್‌ಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಟೋಲ್‌ನ ಅಧಿಕಾರಿ ರೈತರ ಜೊತೆ ಮಾತನಾಡಲು ಕನ್ನಡ ಬರುವುದಿಲ್ಲ ಎಂದು ಹೇಳಿದಾಗ ಹೋರಾಟಗಾರರು ರೊಚ್ಚಿಗೆದ್ದು ಆಕ್ರೋಶಭರಿತರಾದರು. ತಕ್ಷಣ ಬೇರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಹೋರಾಟಗಾರರ ಬೇಡಿಕೆಯನ್ನು ಆಲಿಸಿದರು. ಕೊನೆಗೂ ಹೋರಾಟಗಾರರಿಗೆ ಮಣಿದ ಅಧಿಕಾರಿಗಳು ಟೋಲ್‌ನ ಎರಡೂ ಬದಿಗಳಲ್ಲೂ ರೈತರ ವಾಹನಗಳಿಗೆ ಮುಕ್ತ ಅವಕಾಶದ ಭರವಸೆ ನೀಡಿದರು.ಇದನ್ನೂ ಓದಿ: ಸಿನಿಮಾ ಡೈರೆಕ್ಟರ್ ಆಗಬೇಕು ಅಂತ ಕನಸು ಕಂಡಿದ್ದ ಯುವಕ ಆತ್ಮಹತ್ಯೆ
30 ಕಿ.ಮೀ ವ್ಯಾಪ್ತಿಯ ರೈತರಿಗೆ ಮುಕ್ತ ಅವಕಾಶ ನೀಡಲಾಯ್ತು. ಕೃಷಿ ಮತ್ತು ರೈತರ ಉತ್ಪನ್ನ ಸರಬರಾಜು ವಾಹನಗಳಿಗೂ ಟೋಲ್ ಫ್ರೀ ಸೇರಿದಂತೆ ಇತರೆ ಬೇಡಿಕೆಗಳನ್ನು ತಿಂಗಳೊಳಗೆ ಈಡೇರಿಸುವುದಾಗಿ ಭರವಸೆ ನೀಡಲಾಯಿತು. ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂಪಡೆದರು.ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಗೆ ಬೇಕಾದಷ್ಟು ಕೆಲಸ ಇದೆ, ಆ ಕಡೆ ಗಮನ ಕೊಡಲಿ: ಸಿ.ಟಿ ರವಿ
