ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ (Monsoon Rain) ಆರಂಭವಾಗಿದೆ. ಆದರೆ ಕೆಲವು ಜಿಲ್ಲೆಗಳಲ್ಲಿ ಮಳೆ ಇನ್ನೂ ಆರಂಭವಾಗಿಲ್ಲ. ಮಳೆ ಇನ್ನೂ ಆರಂಭವಾಗದೆ ಇರುವುದರಿಂದ ಜನರ ಜೀವನಾಡಿಯಾಗಿರುವ ಜಲಾಶಯಗಳು (Dam) ಬತ್ತಿ ಹೋಗಿವೆ.
ಮುಂಗಾರು ಮಳೆ ಆರಂಭವಾದರೂ ಕೆಲವು ಜಿಲ್ಲೆಗಳಲ್ಲಿ ಮಳೆ ಸುರಿಯದ ಕಾರಣ ಕೆಲ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಜಲಾಶಯಗಳು ಬತ್ತಿ ಹೋಗಿವೆ. ಮುಂದೆ ವರುಣ ಕೃಪೆ ತೋರದೆ ಇದ್ದರೆ ಹೇಗೆ ಎಂಬ ಕಳವಳ ರೈತರಲ್ಲಿ ಶುರುವಾಗಿದೆ. ಈ ಮಧ್ಯೆ ಈ ಬಾರಿ ಜೂನ್‌ನಲ್ಲಿ ರಾಜ್ಯದ ಉತ್ತರ ಕರ್ನಾಟಕದಲ್ಲಿ ಮಳೆ ಆಗಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

ಬತ್ತಿಹೋದ ಆಲಮಟ್ಟಿ ಜಲಾಶಯ:
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಜಲಾಶಯ ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಜನರ ಜೀವನಾಡಿ ಆಗಿದೆ. ಅವಳಿ ಜಿಲ್ಲೆಗಳ ಜನರು ಆಲಮಟ್ಟಿ ಜಲಾಶಯದ ಮೇಲೆ ಅವಲಂಬಿತರಾಗಿದ್ದಾರೆ. 123 ಟಿಎಂಸಿ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ ಸದ್ಯ ಬಳಕೆ ಇರೋದು ಕೇವಲ 4 ಟಿಎಂಸಿ ಮಾತ್ರ. ಹೀಗಾಗಿ ಅವಳಿ ಜಿಲ್ಲೆಯ ಜನರಲ್ಲಿ ಮುಂದೆ ಜೀವನ ಹೇಗಪ್ಪ ಅಂತಾ ಆತಂಕ ಶುರುವಾಗಿದೆ. ಆದಷ್ಟು ಬೇಗ ಮಳೆ ಆಗಲಿ ಎಂದು ಜನರು ದೇವರ ಮೊರೆ ಹೋಗುತ್ತಿದ್ದಾರೆ.
ಬಸವಸಾಗರ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತ:
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವಸಾಗರ ಜಲಾಶಯ ನಾಲ್ಕು ಜಿಲ್ಲೆಗಳ ಜೀವನಾಡಿಯಾಗಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಸಮರ್ಪಕ ಮಳೆಯಾಗದ ಕಾರಣ ಜಲಾಶಯದ ನೀರಿನ ಮಟ್ಟ ಕುಸಿತ ಕಂಡಿದೆ. 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ ಕೇವಲ 20 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. 20 ಟಿಎಂಸಿ ನೀರಿನಲ್ಲಿ ಕೇವಲ 6 ಟಿಎಂಸಿ ನೀರನ್ನು ಮಾತ್ರ ಬಳಕೆ ಮಾಡಲು ಸಾಧ್ಯವಿದೆ. ಉಳಿದ 14 ಟಿಎಂಸಿ ನೀರು ಡೆಡ್ ಸ್ಟೋರೇಜ್ ಆಗಿದೆ.

ಬಸವಸಾಗರ ಜಲಾಶಯದಿಂದ ಯಾದಗಿರಿ, ಕಲಬುರಗಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಅಲ್ಲದೇ ಸುಮಾರು 6 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಈ ಜಲಾಶಯದ ನೀರಿನ ಮೇಲೆ ಅವಲಂಬಿತವಾಗಿವೆ. ಈ ವರ್ಷ ಕೇವಲ 110 ಎಂಎಂ ಮಳೆಯಾಗಿದೆ. ಇದರ ಪರಿಣಾಮ ಬಿತ್ತನೆ ಕಾರ್ಯವೂ ಕುಂಠಿತಗೊಂಡಿದೆ.

ಬರಿದಾಗುತ್ತಿದೆ ಹೇಮಾವತಿ ಒಡಲು:
ಅದ್ಯಾಕೋ ಹಾಸನ ಜಿಲ್ಲೆಯ ಮೇಲೆ ವರುಣ ಇನ್ನೂ ಕೃಪೆ ತೋರಿದಂತೆ ಕಾಣುತ್ತಿಲ್ಲ. ಜೀವನಾಡಿ ಹೇಮಾವತಿ ಜಲಾಶಯದಲ್ಲೂ ಕೂಡ ನೀರಿನ ಮಟ್ಟ ಕುಸಿಯುತ್ತಿದೆ. ಹಾಸನ ತಾಲೂಕಿನ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ 37.103 ಟಿಎಂಸಿ ನೀರಿನ ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ 14,608 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 4.10 ಟಿಎಂಸಿ ನೀರು ಡೆಡ್ ಸ್ಟೊರೇಜ್ ಆಗಿರುವುದರಿಂದ ಬಳಸಲು ಸಾಧ್ಯವಿಲ್ಲ. ಹೀಗಾಗಿ ಕೇವಲ 10 ಟಿಎಂಸಿ ನೀರು ಮಾತ್ರ ಡ್ಯಾಂನಲ್ಲಿ ಬಳಕೆಗೆ ಲಭ್ಯವಿದೆ. ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿರುವುದರಿಂದ ಹಾಸನ ನಗರ ನಿವಾಸಿಗಳಿಗೆ ಕುಡಿಯುವ ನೀರು ಹಾಗೂ ಅನ್ನದಾತರಿಗೆ ಆತಂಕ ಎದುರಾಗಿದೆ.

ಹಾರಂಗಿ ಜಲಾಶಯದಲ್ಲಿ ಕುಸಿದ ನೀರಿನ ಮಟ್ಟ:
ಮಳೆಯ ಆಶ್ರಿತ ಪ್ರದೇಶ ಎಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಳೆಯ ಅಬ್ಬರ ಕ್ಷೀಣಗೊಂಡಿದೆ. ಕಳೆದ ಕೆಲವು ದಿನಗಳಿಂದ ಅಗೋಮ್ಮೆ ಈಗೊಮ್ಮೆ ಮಳೆಯಾಗುತ್ತಿದೆ. ಮಳೆ ಕೊರತೆ ಹಿನ್ನೆಲೆ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ತೀರ ಕೆಳಮಟ್ಟದಲ್ಲಿದೆ. ಮಳೆಯಿಲ್ಲದೇ ಹಾರಂಗಿ ಜಲಾಶಯಕ್ಕೆ ಒಳಹರಿವೂ ಕಡಿಮೆಯಾಗಿದೆ. ಡ್ಯಾಂಗೆ ಕಳೆದ ವರ್ಷ 1,491 ಕ್ಯೂಸೆಕ್ ನೀರು ಹರಿದು ಬರುತ್ತಿತ್ತು. ಈ ವೇಳೆಗೆ ಜಲಾಶಯ ಭರ್ತಿಗೆ ಕೇವಲ 7 ಅಡಿಗಳಷ್ಟೆ ಬಾಕಿ ಉಳಿದಿತ್ತು. ಆದರೆ ಈ ಬಾರಿ ಪರಿಸ್ಥಿತಿ ತೀರಾ ಭಿನ್ನವಾಗಿದೆ. ಜಲಾಶಯಕ್ಕೆ ಕೇವಲ 226 ಕ್ಯೂಸೆಕ್ ಒಳಹರಿವಿದ್ದು, ಜಲಾಶಯದಲ್ಲಿ ಕೇವಲ 2823.57 ಅಡಿ ನೀರು ಸಂಗ್ರಹವಿದೆ.
