Connect with us

Bengaluru City

ಸಿಎಂ ಬಿಎಸ್‍ವೈ ವಿರುದ್ಧ ಹೈಕಮಾಂಡ್‍ಗೆ ಈಶ್ವರಪ್ಪ ದೂರು

Published

on

– ಪ್ರಧಾನಿ ಮೋದಿ, ಅಮಿತ್ ಶಾ, ರಾಜ್ಯಪಾಲರಿಗೆ ಪತ್ರ

ಬೆಂಗಳೂರು: ಬಿಜೆಪಿಯಲ್ಲಿ ನಿಧಾನವಾಗಿ ಸಿಎಂ ವಿರುದ್ಧ ಆಕ್ರೋಶ ಭುಗಿಲೇಳುತ್ತಿದೆಯೇ ಎಂಬ ಅನುಮಾನ ಇದೀಗ ಶುರುವಾಗಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಹೇಳಿಕೆ ನೀಡುತ್ತಿರುವಾಗಲೇ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೈಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಂದು ಮಧ್ಯಾಹ್ನ ರಾಜ್ಯಪಾಲರನ್ನು ಭೇಟಿ ಮಾಡಿ ಸಿಎಂ ಯಡಿಯೂರಪ್ಪ ವಿರುದ್ಧ ಈಶ್ವರಪ್ಪ ದೂರು ನೀಡಿದ್ದಾರೆ. ಈ ಮೂಲಕ ಬಿಎಸ್‍ವೈ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ರಾಜ್ಯ ಪಾಲರಿಗೆ ಮಾತ್ರವಲ್ಲದೆ ಹೈಕಮಾಂಡ್‍ಗೂ ಪತ್ರ ಬರೆದಿದ್ದು, ಗಮನಕ್ಕೆ ತಾರದೇ ನನ್ನ ಇಲಾಖೆಯಲ್ಲಿ ಸಿಎಂ ಯಡಿಯೂರಪ್ಪ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸಿಎಂ ವಿರುದ್ಧ ಲಿಖಿತ ರೂಪದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ಎರಡು ಪುಟಗಳ ಪತ್ರ ಬರೆದು ಅಸಮಧಾನ ತೋಡಿಕೊಂಡಿದ್ದಾರೆ.

ಪತ್ರದಲ್ಲಿ ಏನಿದೆ?
ಗಮನಕ್ಕೆ ತರದೇ ನನ್ನ ಇಲಾಖೆಯಲ್ಲಿ ಸಿಎಂ ಹಸ್ತಕ್ಷೇಪ ಮಾಡಿದ್ದು, ಇಲಾಖೆಯ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ. ಕೆಲ ಪ್ರಮುಖ ನಿರ್ಧಾರಗಳಲ್ಲಿ ಹಿರಿಯ ಸಚಿವರಾದ ನನ್ನನ್ನು ಪರಿಗಣಿಸಿಲ್ಲ. ಸಚಿವರ ಅಧಿಕಾರ ಮೊಟಕುಗೊಳಿಸಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಕೂಡಲೇ ಮಧ್ಯ ಪ್ರವೇಶ ಮಾಡಿ ಇದಕ್ಕೆ ಬ್ರೇಕ್ ಹಾಕಬೇಕು.

ಬೆಂಗಳೂರು ನಗರ ಜಿ.ಪಂ ಅಧ್ಯಕ್ಷ ಮರಿಸ್ವಾಮಿ, ಸಿಎಂ ಯಡಿಯೂರಪ್ಪರಿಗೆ ಬೀಗರೂ ಹೌದು. ಹಣಕಾಸು ಇಲಾಖೆಯ ಪತ್ರದಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷ ಮರಿಸ್ವಾಮಿ ಪ್ರತಿನಿಧಿಸುವ ದಾಸರಹಳ್ಳಿ ಜಿಲ್ಲಾ ಪಂಚಾಯತ್‍ಗೆ 65 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದನ್ನು ಸಚಿವರ ಗಮನಕ್ಕೆ ತರುವುದು ಎಂದು ಮರಿಸ್ವಾಮಿ ಸರ್ಕಾರದ ಆದೇಶ ಮಾಡಿಸಿಕೊಂಡಿದ್ದಾರೆ. ಮರಿಸ್ವಾಮಿ ತಮ್ಮ ಸಂಬಂಧಿ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂಬ ಕಾರಣಕ್ಕೆ ಇಷ್ಟು ದೊಡ್ಡ ಪ್ರಮಾಣದ ಹಣ ಅನುದಾನದ ರೂಪದಲ್ಲಿ ಬಿಡುಗಡೆಯಾಗಿದೆ.

ಜಿ.ಪಂ.ಗಳಿಗೆ 2019-20ರಲ್ಲಿ 1 ಅಥವಾ 2 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಆದರೆ ಇದೀಗ ರಾಜ್ಯದ ಯಾವುದೇ ಜಿಲ್ಲಾ ಪಂಚಾಯತ್‍ಗೂ ಬಿಡುಗಡೆಯಾಗದ ದೊಡ್ಡ ಪ್ರಮಾಣದ ಅನುದಾನದ ಕೇವಲ ಇದೊಂದೇ ಜಿಲ್ಲಾ ಪಂಚಾಯತ್‍ಗೆ ಬಿಡುಗಡೆಯಾಗಿದೆ. ಹೀಗೆ ಸಾಲು ಸಾಲು ವಿಚಾರಗಳಲ್ಲಿ ಸಿಎಂ ಯಡಿಯೂರಪ್ಪ ನಮ್ಮ ಇಲಾಖೆಯ ಕೆಲಸ, ಕಾರ್ಯಗಳಲ್ಲಿ ಮೂಗು ತೂರಿಸುತ್ತಿದ್ದಾರೆ.

2020-21ರ ವರ್ಷದಲ್ಲಿ ಘೋಷಿತ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನೆಗಳಿಗೆ ಅನುದಾನ ಕೊಟ್ಟಿಲ್ಲ. ಕಳೆದೊಂದು ವರ್ಷದಲ್ಲಿ ವಿಶೇಷ ಅನುದಾನದ ಹೆಸರಲ್ಲಿ 1,439 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈ ಹಣ ಬಜೆಟ್ ನಲ್ಲಿ ಘೋಷಣೆ ಮಾಡಿರಲಿಲ್ಲ. ಕಳೆದ ಫೆಬ್ರವರಿಯಲ್ಲಿ ಆರ್ಥಿಕ ಇಲಾಖೆಯು 81 ಶಾಸಕರ ಕ್ಷೇತ್ರಗಳಿಗೆ 775 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಈ ಹಣವೂ ಬಜೆಟ್‍ನಲ್ಲಿ ಘೋಷಣೆ ಮಾಡಿರಲಿಲ್ಲ.

ಬಜೆಟ್ ನಲ್ಲಿ ಘೋಷಣೆ ಮಾಡದೇ ಅನುದಾನ ನೀಡಲಾಗಿದ್ದು, ಇದರಿಂದ ಬಜೆಟ್ ಯೋಜನೆಗಳಿಗೆ ತೊಡಕಾಗುತ್ತದೆ. ಶಾಸಕರ ಕ್ಷೇತ್ರಗಳಿಗೆ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಅನುದಾನ ಕೊಡಬೇಕಿತ್ತು. ಆದರೆ ಆರ್ಥಿಕ ಇಲಾಖೆ ನೇರವಾಗಿ ಅನುದಾನ ಕೊಟ್ಟಿರುವುದು ಸರಿಯಲ್ಲ. ಕೇವಲ 5 ಲಕ್ಷಕ್ಕೂ ಕಡಿಮೆ ಮೊತ್ತದ ರಸ್ತೆ ಕಾಮಗಾರಿಗಳಿಗೂ ಮನವಿ ಸ್ವೀಕರಿಸಲಾಗಿದೆ. ಇಷ್ಟು ಕಮ್ಮಿ ಮೊತ್ತದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣ ಸಾಧ್ಯವೇ? ಗ್ರಾಮೀಣಾಭಿವೃದ್ಧಿ ಇಲಾಖೆಗೆ ಒಟ್ಟು 3995.56 ಕೋಟಿ ರೂ. ಮೀಸಲಿರಿಸಲಾಗಿದೆ. ಈ ಪೈಕಿ 1600.42 ಕೋಟಿ ರೂ. ಮಾತ್ರ ಬಿಡುಗಡೆ ಆಗಿದೆ. ಉಳಿದ ಹಣ ವಿಶೇಷ ಅನುದಾನದ ರೂಪದಲ್ಲಿ ಶಾಸಕರ ಕ್ಷೇತ್ರಗಳಿಗೆ ಬಿಡುಗಡೆ ಮಾಡಲಾಗಿದೆ. ನನ್ನ ಇಲಾಖೆಯಲ್ಲಿ ಆರ್ಥಿಕ ಇಲಾಖೆ ಹಸ್ತಕ್ಷೇಪದಿಂದ ನನಗೆ ಮುಜುಗರವಾಗಿದೆ. ಈ ರೀತಿಯ ಆಡಳಿತ ವ್ಯವಸ್ಥೆ ಸರಿಯಾದುದಲ್ಲ. ಈ ಥರದ ಆಡಳಿತ ಶೈಲಿ ಬದಲಾಯಿಸಿಕೊಡಿ.

Click to comment

Leave a Reply

Your email address will not be published. Required fields are marked *