ಬೆಳಗಾವಿ: ಒಂದೆಡೆ ಕಣ್ಣಾಮುಚ್ಚಾಲೆ ಆಡುತ್ತಿರುವ ಮಳೆ, ಮತ್ತೊಂದೆಡೆ ಕಬ್ಬಿನ ಗದ್ದೆಗಳನ್ನು ಆವರಿಸಿರುವ ‘ಗೊಣ್ಣೆ ಹುಳುಗಳ’ ಕಾಟ! ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರು(Sugarcane Farmers) ಈಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆಗಾಲ ವಿಳಂಬವಾಗುತ್ತಿರುವುದು ಮತ್ತು ಕೀಟಬಾಧೆ ಹೆಚ್ಚುತ್ತಿರುವುದು ರೈತರ ನಿದ್ದೆಗೆಡಿಸಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದ್ದು, ಬಹುತೇಕ ಕಡೆ ಗೊಣ್ಣೆ ಹುಳುಗಳ(White Grub Menace) ಹಾವಳಿ ವಿಪರೀತವಾಗಿದೆ. ಸೂಕ್ತ ಸಮಯದಲ್ಲಿ ಮಳೆಯಾಗದಿರುವುದು ಮತ್ತು ಬೇಸಿಗೆಯಲ್ಲಿ ಮಾಗಿ (ಆಳವಾದ) ಉಳುಮೆ ಮಾಡದೇ ಇರುವುದು ಈ ಹುಳುಗಳ ಸಂತತಿ ವೃದ್ಧಿಗೆ ಮುಖ್ಯ ಕಾರಣವಾಗಿದೆ.
ಹುಳುಗಳ ಕಾಟದಿಂದ ಶೇ. 10 ರಿಂದ ಶೇ. 20 ರಷ್ಟು ಕಬ್ಬಿನ ಇಳುವರಿ ಕುಸಿಯುವ ಭೀತಿ ಎದುರಾಗಿದೆ. ಹುಳುಗಳನ್ನು ನಿಯಂತ್ರಿಸಲು ರೈತರು ಕೀಟನಾಶಕಗಳಿಗಾಗಿ ಪ್ರತಿ ಎಕರೆಗೆ 2,000 ದಿಂದ 4,000 ರೂ.ವರೆಗೆ ಹೆಚ್ಚುವರಿ ವೆಚ್ಚ ಮಾಡುತ್ತಿದ್ದಾರೆ.

ಬೇಸಿಗೆಯಲ್ಲಿ ಆಳವಾದ ಮಾಗಿ ಉಳುಮೆ ಮಾಡುವುದರಿಂದ ಕೆಳಗಿನ ಮಣ್ಣು ಬಿಸಿಲಿಗೆ ಕಾಯ್ದು ಗೊಣ್ಣೆ ಹುಳುವಿನ ಕೋಶಗಳು ನಾಶವಾಗುತ್ತವೆ ಮತ್ತು ಪಕ್ಷಿಗಳು ಅವುಗಳನ್ನು ತಿನ್ನುತ್ತವೆ. ಅಲ್ಲದೆ, ಜೂನ್‌ನಲ್ಲಿ ಉತ್ತಮ ಮಳೆಯಾದರೆ ಇವು ಉಸಿರುಗಟ್ಟಿ ಸಾಯುತ್ತವೆ. ಇಲಾಖೆಯಿಂದ ‘ಭೂ ಮಾತಾ ಸಂರಕ್ಷಣಾ’ ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನೂ ಓದಿ: ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಹಿನ್ನಡೆ
ಬೆಳಗಾವಿಯ ಕಬ್ಬು ಬೆಳೆಗಾರರು ದೊಡ್ಡ ಮಟ್ಟದ ಆರ್ಥಿಕ ನಷ್ಟ ಅನುಭವಿಸುವ ಮುನ್ನ, ಕೃಷಿ ಇಲಾಖೆಯು ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಭೇಟಿ ನೀಡಿ, ಕೀಟ ನಿಯಂತ್ರಣಕ್ಕೆ ಸೂಕ್ತ ಪರಿಹಾರ ಮತ್ತು ಜೈವಿಕ ಮಾರ್ಗೋಪಾಯಗಳನ್ನು ಒದಗಿಸಬೇಕಿದೆ.
