– ಸಿದ್ದರಾಮಯ್ಯರನ್ನು ಮಾಜಿ ಎಂದು ಹೇಳೋಕು ನನಗೆ ಕಷ್ಟ
ಬೆಂಗಳೂರು: ಯಾರ ಹತ್ರನೂ ಕೆಟ್ಟವನು ಅನ್ನಿಸಿಕೊಳ್ಳದೆ ನಾನು ಕೊನೆಯುಸಿರು ಎಳೆಯಬೇಕು. ನನಗೆ ಯಾವ ಆಸೆಯೂ ಇಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ (D.K Suresh) ಹೇಳಿದರು.
ʻಪಬ್ಲಿಕ್ ಟಿವಿʼ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದರು. ಈ ವೇಳೆ, ರಾಜಕೀಯದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ. ಮನೆಯಲ್ಲಿ ಒಬ್ಬರು ರಾಜಕೀಯದಲ್ಲಿ ಇದ್ದಾರಲ್ಲ ಸಾಕು. ಅವರ ಜೊತೆಯಲ್ಲೇ ಇದ್ದು ಕೆಲಸ ಮಾಡ್ಬೇಕು. ಅದಕ್ಕೆ ಅಧಿಕಾರದಲ್ಲಿ ಇರಲೇ ಬೇಕು ಎಂದೇನೂ ಇಲ್ಲ ಎಂದರು. ಇದನ್ನೂ ಓದಿ: ಪರಿಷತ್ ಚುನಾವಣೆಗೆ ʻಆಪರೇಷನ್ ಹಸ್ತʼದ ಭೀತಿ – ರೆಸಾರ್ಟ್‌ಗೆ ಜೆಡಿಎಸ್ ಶಾಸಕರು ಶಿಫ್ಟ್?
ಸಂಸದರಾಗಿದ್ದಾಗ ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರಿಗಳ ಮೇಲೆ ಕಠಿಣವಾಗಿ ನಡೆದುಕೊಳ್ಳುವುದು ಅನಿವಾರ್ಯವಾಗಿತ್ತು. ಸಾರ್ವಜನಿಕ ಕೆಲಸಗಳು ಸುಗಮವಾಗಿ ನಡೆಯಬೇಕೆಂದರೆ ಅಂತಹ ನಿಲುವುಗಳನ್ನು ತೆಗೆದುಕೊಳ್ಳಲೇಬೇಕಿತ್ತು ಎಂದರು. ಈ ಮೂಲಕ ಅವರು ಸಂಸದರಾಗಿದ್ದಾಗ ನಡೆಸಿದ ಆಡಳಿತವನ್ನು ನೆನೆದರು.
ನಾನು ಲೋಕಸಭೆ ಚುನಾವಣೆಯಲ್ಲಿ ಸೋಲುತ್ತೇನೆ ಎಂದುಕೊಂಡಿರಲಿಲ್ಲ. ಹೊಸಬರು ಬಂದರು ಎಂದು ನನಗೆ ಸೋಲಾಯ್ತು. ಹಾಗಂತ ನನಗೆ ಬೇಸರ ಇಲ್ಲ. ಜನ ಕೆಲಸದ ಬಗ್ಗೆ ಅಲ್ಲ, ಆ ಕ್ಷಣದ ವಿಚಾರಕ್ಕೆ ಮಾತ್ರ ಮಹತ್ವ ಕೊಟ್ಟರು ಎಂದು ಬೇಸರ ಆಯ್ತು. ಜನರಲ್ಲಿ ಕೆಲಸಗಳು ಉಳಿದಿವೆ. ಜನ ಅವರಿಗೂ ಒಂದು ಅವಕಾಶ ಕೊಟ್ಟಿರಬಹುದು. ನನ್ನಲ್ಲಿ ಏನು ತಪ್ಪು ಹುಡುಕಿದ್ರು? ಅವರು ನಮಗಿಂತ ವಿದ್ಯಾವಂತರಿದ್ದಾರೆ. ಇನ್ನೂ ಹೆಚ್ಚಿನ ಸೇವೆ ಮಾಡುವ ಅವಕಾಶ ಅವರಿಗೆ ಸಿಗಲಿ.
ಮುಂದಿನ ಚುನಾವಣೆ ಬಗ್ಗೆ ಯೋಚನೆ ಮಾಡಿಲ್ಲ. ನನ್ನ ಅಣ್ಣ ಸಿಎಂ ಆಗಬೇಕು ಎಂಬ ಆಸೆ ಇತ್ತು. ಅದು ಆಗಿದೆ. ಅವರು ಒಳ್ಳೆಯ ಆಡಳಿತ ನೀಡಬೇಕು. ನನಗೆ ಯಾವ ಆಸೆಯೂ ಇಲ್ಲ. ಹೀಗೆ ಇದ್ದಂತೆ. ಯಾರ ಹತ್ರನೂ ಕೆಟ್ಟವನು ಎನಿಸಿಕೊಳ್ಳದೇ ಕೊನೆಯುಸಿರು ಎಳೆಯಬೇಕು. ನಾನು ಇರುವ ವರೆಗೂ ಪ್ರಾಮಾಣಿಕನಾಗಿ ಕೆಲಸ ಮಾಡ್ತೀನಿ. ನನಗೆ ಅದು ಆಗ್ಬೇಕು ಇದಾಗ್ಬೇಕು ಅಂತ ಆಸೆ ಇಲ್ಲ. ಭಗವಂತ ಎಲ್ಲಾ ಕೊಟ್ಟಿದ್ದಾನೆ ಸಂತೃಪ್ತಿ ಇದೆ. ನನಗೆ ನೋವು ಅಂತ ಯಾವುದು ಇಲ್ಲ ಎಂದರು.
ಡಿ.ಕೆ ಶಿವಕುಮಾರ್ ಶ್ರೀಮಂತ ಸಿಎಂ ಆಗಿರಬಹುದು. ಜೀವನದ ಎಲ್ಲಾ ಆಯಾಮಗಳನ್ನು ಅವರು ನೋಡಿದ್ದಾರೆ. ಎಲ್ಲಾ ಹಂತಗಳಲ್ಲೂ ಕೆಲಸ ಮಾಡಿದ್ದಾರೆ. ಮುಂದಿನ 2 ವರ್ಷ ಉತ್ತಮ ಆಡಳಿತ ನೀಡುತ್ತಾರೆ. ಕರ್ನಾಟಕ ಭಾರತದಲ್ಲಿ ಉತ್ತಮ ಹೆಸರು ಮಾಡುತ್ತದೆ. ನಮ್ಮ ಗುರಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತರುವುದೇ ಆಗಿದೆ ಎಂದರು.
ಸಿದ್ದರಾಮಯ್ಯ ಅವರು ಹೈಕಮಾಂಡ್ ನಿರ್ಧಾರದಂತೆ ಅವಕಾಶ ಮಾಡಿಕೊಟ್ಟಿದ್ದಾರೆ. ಅವರ ನಾಯಕತ್ವದಲ್ಲೇ ಕೆಲಸ ಮಾಡುತ್ತೇವೆ. ನನಗೆ ಸಿದ್ದರಾಮಯ್ಯರನ್ನು ಮಾಜಿ ಎಂದು ಹೇಳೋಕು ಕಷ್ಟ. ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ. ಶಿವಕುಮಾರ್ (D.K Shivakumar) ನಡುವೆ ಭಿನ್ನಾಭಿಪ್ರಾಯ ಇರಲಿಲ್ಲ. ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರಗಳಿಗೆ ಎಲ್ಲರೂ ಬದ್ಧರಾಗಿದ್ದರು. ಯಾವ ಮನಸ್ತಾಪಗಳಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸತ್ತವರ ಹೆಸರಲ್ಲೂ ಹಣ ಹೋಗ್ತಿದೆ, ಅಂಗಡಿಗೂ ವಿದ್ಯುತ್ ಬಳಕೆ ಆಗ್ತಿದೆ: ಗ್ಯಾರಂಟಿ ಪರಿಷ್ಕರಣೆ ಬಗ್ಗೆ ಸಿಎಂ ರಿಯಾಕ್ಷನ್
