ಹೈದರಾಬಾದ್: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕೇಂದ್ರ ಸಚಿವ ಬಂಡಿ ಸಂಜಯ್ ಕುಮಾರ್ (Bandi Sanjay Kumar) ಅವರ ಪುತ್ರ ಭಗೀರಥ (25) ಪೊಲೀಸರಿಗೆ ಶರಣಾಗಿದ್ದಾನೆ.
ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ. ಆತನ ಜಾಮೀನು ಅರ್ಜಿಯನ್ನು ತೆಲಂಗಾಣ ಹೈಕೋರ್ಟ್ (Telangana High Court) ಶನಿವಾರ (ಮೇ 16) ವಜಾ ಮಾಡಿತ್ತು. ಹೀಗಾಗಿ ತಲೆಮರೆಸಿಕೊಂಡಿದ್ದ ಆರೋಪಿ ವಿರುದ್ಧ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದರು. ಇದು ಕೇಂದ್ರ ಸಚಿವರಿಗೆ ಭಾರೀ ಮುಜುಗರ ಉಂಟು ಮಾಡಿತ್ತು. ಅದರ ಬೆನ್ನಲ್ಲೇ ಆರೋಪಿ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ರಾಬರ್ಟ್ ವಾದ್ರಾಗೆ ನಿರೀಕ್ಷಣಾ ಜಾಮೀನು ಮಂಜೂರು
ಈ ಕುರಿತು ಹೇಳಿಕೆ ನೀಡಿರುವ ಸಚಿವ ಬಂಡಿ ಸಂಜಯ್ ಕುಮಾರ್, ಕಾನೂನು ಮತ್ತು ನ್ಯಾಯಾಂಗದ ಮೇಲಿನ ಗೌರವದಿಂದ ನನ್ನ ಪುತ್ರನಿಗೆ ಪೊಲೀಸರ ಮುಂದೆ ಶರಣಾಗುವಂತೆ ಸೂಚಿಸಿದ್ದೆ. ಅದರಂತೆ ನನ್ನ ಪುತ್ರ ಶರಣಾಗಿದ್ದಾನೆ. ಆತ ನಿರ್ದೋಷಿ, ಆದರೆ ಕಾನೂನಿನ ಮುಂದೆ ಎಲ್ಲರೂ ಒಂದೇ. ಅದ್ದರಿಂದ ವಿಚಾರಣೆಗೆ ಸಹಕರಿಸುವಂತೆ ಸೂಚಿಸಿದ್ದೇನೆ ಎಂದಿದ್ದಾರೆ.
ಏನಿದು ಪ್ರಕರಣ?
ಭಗೀರಥ್ ನನ್ನ ಜೊತೆ ಸ್ನೇಹ ಬೆಳೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು 17 ವರ್ಷದ ಅಪ್ರಾಪ್ತೆಯೊಬ್ಬಳು ಇತ್ತೀಚೆಗೆ ದೂರು ದಾಖಲಿಸಿದ್ದಳು. ಈ ಸಂಬಂಧ ಪೋಕ್ಸೋ (POCSO) ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲೂ ಇನ್ಮುಂದೆ ವಾರಕ್ಕೆರಡು ದಿನ ವರ್ಚುವಲ್ ವಿಚಾರಣೆ

