ನವದೆಹಲಿ: ನೀಟ್-2026 ಪರೀಕ್ಷೆಯಲ್ಲಿ(NEET Exam) ಲೋಪಗಳು ಆಗಿದ್ದನ್ನು ಒಪ್ಪಿಕೊಂಡಿದ್ದೇವೆ. ಆದರೆ, ತಪ್ಪುಗಳನ್ನು ಸರಿಪಡಿಸಿ ಮರುಪರೀಕ್ಷೆಯನ್ನು(Re-Exam) ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನಮ್ಮ ಕಡೆಯಿಂದ ಕೆಲವು ಲೋಪಗಳು ಆಗಿದ್ದವು. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಂತರ ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ ಎಂದು ಹೇಳಿದ್ದಾರೆ.
ಪರೀಕ್ಷೆ ರದ್ದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರು. ನೀಟ್ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳು ಆತಂಕ ಪಡಬೇಕಿಲ್ಲ. ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ. ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತವಾಗಿಡಲು ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಪ್ರಶ್ನೆಪತ್ರಿಕೆ ಲೀಕ್ ಪ್ರಕರಣಗಳ ಕುರಿತು ಮಾತನಾಡಿದ ಅವರು, ಪೇಪರ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಪರೀಕ್ಷಾ ಭದ್ರತೆಗೆ ಭಾರತೀಯ ವಾಯುಪಡೆ ಹಾಗೂ ಸಿಎಪಿಎಫ್ ಪಡೆಗಳನ್ನು ಬಳಸಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಬಾಗಿಲು ಮುಚ್ಚುವ ವಿಚಾರಕ್ಕೆ ಜಗಳ; ಚಲಿಸುತ್ತಿದ್ದ ರೈಲಿನಲ್ಲೇ ಚಾಕುವಿನಿಂದ ಇರಿದು ಯುವಕನ ಹತ್ಯೆ
ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭಯ ಹುಟ್ಟಿಸುವ ರಾಜಕೀಯ ಮಾಡಬಾರದು. ಯುವಕರನ್ನು ದಾರಿ ತಪ್ಪಿಸಬಾರದು ಎಂದಿದ್ದಾರೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಾಹಿತಿ ಪ್ರಕಾರ, ನೀಟ್-2026 ಮರುಪರೀಕ್ಷೆಯಲ್ಲಿ ದೇಶದಾದ್ಯಂತ 5,440 ಕೇಂದ್ರಗಳು ಹಾಗೂ ವಿದೇಶದ 14 ಕೇಂದ್ರಗಳಲ್ಲಿ 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಆಧಾರ್ ಆಧಾರಿತ ಬಯೋಮೆಟ್ರಿಕ್ ಪರಿಶೀಲನೆ, ಫೇಸ್ ಆಕ್ಸೆಸ್, ಸಿಸಿಟಿವಿ ನಿಗಾ, ಜಾಮರ್ ವ್ಯವಸ್ಥೆ ಹಾಗೂ ಎರಡು ಹಂತದ ತಪಾಸಣೆ ಸೇರಿದಂತೆ ಕಠಿಣ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗಿತ್ತು. ಪೇಪರ್ ಲೀಕ್ ಆರೋಪಗಳ ನಂತರ ನಡೆದ ಮರುಪರೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.ಇದನ್ನೂ ಓದಿ: ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಆಂಧ್ರಪ್ರದೇಶದಲ್ಲಿ ಉದ್ಘಾಟನೆ
