ಮುಂಬೈ: ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮುಂಬೈನಲ್ಲಿ(Mumbai) ನಡೆದಿದೆ. ಯುವಕನನ್ನು ಚಲಿಸುತ್ತಿದ್ದ ರೈಲಿನಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ.
21 ವರ್ಷದ ಮಯಾಂಕ್ ಲೋಹರ್ ಕೊಲೆಯಾದ ಯುವಕ. ಆತ ಚರ್ಚ್ ಗೇಟ್ – ನಲಾಸೋಪಾರಾ ಫಾಸ್ಟ್ ಲೋಕಲ್ ರೈಲಿನ(Mumbai Local Train) ಪ್ರಥಮ ದರ್ಜೆ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಗೋರೆಗಾಂವ್ ಮತ್ತು ಕಂಡಿವಲಿ ನಿಲ್ದಾಣಗಳ ನಡುವೆ ಈ ಘಟನೆ ನಡೆದಿದೆ. ಭಾರೀ ಮಳೆಯ ಕಾರಣ ರೈಲಿನ ಬಾಗಿಲು ಮುಚ್ಚುವ ವಿಚಾರಕ್ಕೆ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ಶುರುವಾಗಿದೆ. ಜಗಳ ವಿಕೋಪಕ್ಕೆ ತಿರುಗಿ ಕೆಲ ಪ್ರಯಾಣಿಕರು ಆರೋಪಿ ರೋಷನ್ ಸುವರ್ಣ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಬ್ಯಾಗ್‌ನಲ್ಲಿದ್ದ ಚಾಕು ತೆಗೆದು ಮಯಾಂಕ್ ಮೇಲೆ ದಾಳಿ ನಡೆಸಿದ್ದಾನೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಮಯಾಂಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಆರೋಪಿ ರೈಲಿನಿಂದ ಪರಾರಿಯಾಗಿದ್ದಾನೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಚಾಕು ಹಿಡಿದುಕೊಂಡು ಆರೋಪಿ ರೈಲಿನೊಳಗೆ ಓಡಾಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಪ್ರಯಾಣಿಕರು ಭಯದಿಂದ ದೂರ ಸರಿದಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.ಇದನ್ನೂ ಓದಿ: ಕೊಲೆಗಾರ್ತಿ ಬರ್ತ್‌ಡೇ ಸೆಲಬ್ರೇಷನ್‌ಗೆ ಫೈವ್‌ಸ್ಟಾರ್ ಹೋಟೆಲ್‌ನಲ್ಲಿ 70 ರೂಮ್ ಬುಕ್ ಮಾಡಿದ್ದ ಕೇತನ್ ತಂದೆ
ಮಾಹಿತಿ ತಿಳಿದ ತಕ್ಷಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಂತರ ಕುರ್ಲಾ ಪ್ರದೇಶದಲ್ಲಿ ಆರೋಪಿ ರೋಷನ್ ಸುವರ್ಣನನ್ನು ಬಂಧಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮಗನ ಸಾವಿನಿಂದ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ನನ್ನ ಮಗ ಯಾರ ಜತೆಗೂ ಜಗಳ ಮಾಡುತ್ತಿರಲಿಲ್ಲ. ಅವನಿಗೆ ನ್ಯಾಯ ಸಿಗಬೇಕು ಎಂದು ಮೃತನ ತಾಯಿ ಕಣ್ಣೀರು ಹಾಕಿದ್ದಾರೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕು. ಇಂದು ಶಿಕ್ಷೆಯಾಗದಿದ್ದರೆ ನಾಳೆ ಮತ್ತೊಬ್ಬರ ಜೀವ ಹೋಗಬಹುದು ಎಂದು ಮೃತನ ಸಹೋದರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ದೇವನಹಳ್ಳಿ ಭೂಸ್ವಾಧೀನ: ಎಕರೆಗೆ 2.70 ಕೋಟಿ ಪರಿಹಾರಕ್ಕೆ ಶಿಫಾರಸು
