CinemaKarnatakaLatestLeading NewsMain PostSandalwood

‘ಜುಜುಬಿ ಕರಗ’ ಪದ ಮ್ಯೂಟ್ ಮಾಡಲು ಧನಂಜಯ್ ಹಾಗೂ ಹೆಡ್ ಬುಷ್ ತಂಡ ಒಪ್ಪಿಗೆ

ಹೆಡ್ ಬುಷ್ (Head Bush) ಸಿನಿಮಾಗೆ ಸಂಬಂಧ ಪಟ್ಟಂತೆ ಎರಡೆರಡು ವಿವಾದಗಳು ಚಿತ್ರತಂಡಕ್ಕೆ ಮಗ್ಗಲುಮುಳ್ಳಾಗಿ ಕಾಡುತ್ತಿವೆ. ವೀರಗಾಸೆ ಕಲಾವಿದರಿಗೆ ಅವಮಾನ ಮಾಡಲಾಗಿದೆ ಎನ್ನುವುದು ಒಂದು ವಿವಾದವಾದರೆ, ‘ಜುಜುಬಿ ಕರಗ’ (Karaga) ಎನ್ನುವ ಪದವನ್ನು ಬಳಸಲಾಗಿದ್ದು ಮತ್ತೊಂದು ವಿವಾದಕ್ಕೆ ಕಾರಣವಾಗಿತ್ತು. ನಿನ್ನೆಯಷ್ಟೇ ವೀರಗಾಸೆಗೆ ಸಂಬಂಧಿಸಿದಂತೆ ಚಿತ್ರತಂಡ ಕ್ಷಮೆ ಕೇಳಿತ್ತು. ಈಗ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ತಂಡ ಒಪ್ಪಿಕೊಂಡಿದೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ಧರ್ಮರಾಯ ಸ್ವಾಮಿ ದೇವಸ್ಥಾನದ ಹಿರಿಯರು, ಚಿತ್ರತಂಡದ ಸದಸ್ಯರು ಮತ್ತು ವಾಣಿಜ್ಯ ಮಂಡಳಿಯ ಅಧ್ಯಕ್ಷ ಭಾ.ಮಾ ಹರೀಶ್, ಕಾರ್ಯದರ್ಶಿ ಸುಂದರರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಂಧಾನ ಸಭೆಯಲ್ಲಿ ಜುಜುಬಿ ಕರಗ ಎನ್ನುವ ಪದವನ್ನು ಮ್ಯೂಟ್ ಮಾಡುವುದಾಗಿ ಚಿತ್ರತಂಡ ಒಪ್ಪಿಕೊಳ್ಳುವ ಮೂಲಕ ಈ ವಿವಾದಕ್ಕೂ ಸುಖಾಂತ್ಯ ಹಾಡಲಾಗಿದೆ. ಇದನ್ನೂ ಓದಿ: ಹಿಂದುತ್ವದಲ್ಲೇ ಬ್ರಾಹ್ಮಣತ್ವವಿದೆ; ಪಬ್ಲಿಸಿಟಿಗೋಸ್ಕರ ನಟ ಚೇತನ್ ವಿವಾದಿತ ಹೇಳಿಕೆ – ಪೇಜಾವರ ಶ್ರೀ

ವಿವಾದಕ್ಕೆ (Controversy) ಸಂಬಂಧ ಪಟ್ಟಂತೆ ಧನಂಜಯ್ (Dhananjay) ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಬೆಂಬಲ ವ್ಯಕ್ತವಾಗುತ್ತಿದ್ದು, ‘ನಿಮ್ಮೊಂದಿಗೆ ನಾವಿದ್ದೇವೆ’ ಎನ್ನುವ ಹ್ಯಾಷ್ ಟ್ಯಾಗ್ ಕೂಡ ಟ್ರೆಂಡ್ ಆಗಿದೆ. ಕೇವಲ ಅಭಿಮಾನಿಗಳು ಮಾತ್ರವಲ್ಲ, ಸಿನಿಮಾ ರಂಗದ ಅನೇಕರು ಧನಂಜಯ್ ಪರ ಧ್ವನಿ ಎತ್ತಿದ್ದಾರೆ.

ಈ ವಿವಾದದ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿರುವ ನಟ ಚೇತನ್, ‘ನಾನು ಸಿನಿಮಾ ಅನ್ನು ವೀಕ್ಷಿಸಿದೆ. ಕೆಲವು ವಿಭಾಗಗಳಿಗೆ ಆಕ್ಷೇಪಾರ್ಹ ಎಂದು ಕರೆಯಬಹುದಾದ ಚಲನಚಿತ್ರದ ದೃಶ್ಯಗಳನ್ನು ಕತ್ತರಿಸುವಂತೆ ಒತ್ತಾಯಿಸಲಾಗಿದೆ. ಪ್ರಸ್ತುತ ಬೇಡಿಕೆಗಳು ಸೃಜನಶೀಲ ಸ್ವಾತಂತ್ರ್ಯಗಳಿಗೆ ವಿರುದ್ಧವಾಗಿವೆ. ಸೆನ್ಸಾರ್ ಮಂಡಳಿಯ ಅನುಮತಿ ಪಡೆದ ನಂತರ ಚಿತ್ರ ಮತ್ತು ಚಿತ್ರಣಕ್ಕೆ ಸ್ವಾತಂತ್ರ್ಯ ನೀಡಬೇಕು. ಭಿನ್ನಾಭಿಪ್ರಾಯವು ಪ್ರಜಾಸತ್ತಾತ್ಮಕವಾಗಿದೆ, ಹೊರತು ಬೆದರಿಕೆಗಳಲ್ಲ’ ಎಂದು ಬರೆದುಕೊಂಡಿದ್ದಾರೆ.

Live Tv

Leave a Reply

Your email address will not be published. Required fields are marked *

Back to top button