ಹಾವೇರಿ: ಜಿಲ್ಲೆಯ ಅನ್ನದಾತರು ಬಿತ್ತನೆಗಾಗಿ ಸಿದ್ಧತೆ ಮಾಡಿಕೊಂಡಿದ್ದರೆ, ಇನ್ನೂ ಕೆಲವು ರೈತರು ಈಗಾಗಲೇ ಬಿತ್ತನೆ ಮಾಡಿದ್ದಾರೆ. ಮುಂಗಾರು ಮಳೆ (Monsoon Rain) ಕರ್ನಾಟಕಕ್ಕೆ ಎಂಟ್ರಿಯಾಗಿದ್ದು, ಮೊದಲ ದಿನವೇ ಹಾವೇರಿ (Haveri) ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರಿಸಿದೆ. ಕೆಲವು ಕಡೆಗಳಲ್ಲಿ ಮನೆಗೆ ನೀರು ನುಗ್ಗಿದ್ದು, ಪೊಲೀಸ್ ಠಾಣೆಯು ಸಹ ಜಲಾವೃತಗೊಂಡಿದೆ.
ಹಾವೇರಿ ಜಿಲ್ಲೆ ಹೇಳಿ ಕೇಳಿ ಕೃಷಿ ಪ್ರಧಾನ ಜಿಲ್ಲೆ. ಕೆಲವು ರೈತರು ಮುಂಗಾರು ಪೂರ್ವ ಮಳೆಗೆ ಬಿತ್ತನೆ ಮಾಡಿದ್ದಾರೆ. ಇನ್ನೂ ಕೆಲವು ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಕರ್ನಾಟಕಕ್ಕೆ ಮುಂಗಾರು ಮಳೆ ಎಂಟ್ರಿಯಾಗಿದ್ದು, ಹಾವೇರಿ ಜಿಲ್ಲೆಯ ಜನ ಮುಂಗಾರು ಮಳೆಗೆ ತತ್ತರಿಸಿ ಹೋಗಿದ್ದಾರೆ. ಹಾವೇರಿ ತಾಲೂಕಿನ ಅಗಡಿ ಗ್ರಾಮದ ಬಳಿ ಇರೋ ಹಳ್ಳ ತುಂಬಿ ಗ್ರಾಮದ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮದ ಬಸ್ ನಿಲ್ದಾಣದ ಬಳಿ ಇರೋ ಮೈಲಾರಲಿಂಗೇಶ್ವರ ದೇವರ ಕಟ್ಟೆ ಮತ್ತು ಕೆಲವು ಮನೆ ಮತ್ತು ಅಂಗಡಿಗಳಿಗೆ ನೀರು ನುಗ್ಗಿದೆ. ಅಗಡಿ, ಬೂದಗಟ್ಟಿ ಮತ್ತು ಯತ್ನಿನಹಳ್ಳಿ ಗ್ರಾಮಕ್ಕೆ ಧಾರಕಾರ ಮಳೆಯಾಗಿದ್ದು, ಗ್ರಾಮದ ರಸ್ತೆಗಳು ಕೆರೆಯಂತಾಗಿತ್ತು. ಒಂದು ಗಂಟೆಗಳ ಕಾಲ ಸುರಿದ ಮಳೆಗೆ ಬೈಕ್ ಮತ್ತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನೂ ಓದಿ: ಮಂಗಳೂರಲ್ಲಿ ಸಿಸಿಬಿ ಪೊಲೀಸ್ ಕಾರ್ಯಾಚರಣೆ; ಇಬ್ಬರು ಡ್ರಗ್ ಪೆಡ್ಲರ್‌ಗಳ ಬಂಧನ

ಹಾವೇರಿ ತಾಲೂಕು ಅಲ್ಲದೇ ರಾಣೇಬೆನ್ನೂರು ತಾಲೂಕಿನಲ್ಲೂ ಮುಂಗಾರು ಮಳೆ ಅರ್ಭಟ ಜೋರಾಗಿತ್ತು. ರಾಣೇಬೆನ್ನೂರು ನಗರದಲ್ಲಿರೋ ಗ್ರಾಮೀಣ ಪೊಲೀಸ್ ಠಾಣೆಗೆ ನೀರು ನುಗ್ಗಿದೆ. ಠಾಣೆಯ ಬಳಿ ಇರೋ ಚರಂಡಿ ನೀರು ಗ್ರಾಮೀಣ ಠಾಣೆಯ ಆವರಣ ಮತ್ತು ಠಾಣೆಯ ಒಳಗೆ ನುಗ್ಗಿದೆ. ಇದರಿಂದಾಗಿ ಪೊಲೀಸರು ಕೆಲಕಾಲ ಕಂಗಾಲಾಗಿದ್ದಾರೆ. ಮನೆ ಮತ್ತು ಪೊಲೀಸ್ ಠಾಣೆಗೆ ನುಗ್ಗಿದ ನೀರು ಹೊರಹಾಕಲು ಜನರು ಪರದಾಡಿದ್ದಾರೆ. ಅಲ್ಲದೇ ಗುತ್ತಲ ಹಾವೇರಿಯ ರಸ್ತೆಯ ಕೆಲಕಾಲ ನದಿಯಾಗಿ ಮಾರ್ಪಟ್ಟಿದ್ದವು. ಇದನ್ನೂ ಓದಿ: ರಸ್ತೆಬದಿ ಕಸ ಎಸೆದ ವೀಡಿಯೋ ವೈರಲ್ – ಗುಂಡು ಹಾರಿಸಿಕೊಂಡು ಗೋವಾದ ವಿದ್ಯಾರ್ಥಿ ಆತ್ಮಹತ್ಯೆ
