ನವದೆಹಲಿ: ಇತ್ತೀಚೆಗೆ ನಡೆದ 5. 000 ಕೋಟಿ ರೂ. ಮೌಲ್ಯದ ನಕಲಿ ಔಷಧ ಜಾಲ ಪ್ರಕರಣದ ತನಿಖೆ ವೇಳೆ ಅಚ್ಚರಿಯ ಸಂಗತಿ ಬೆಳಕಿಗೆ ಬಂದಿದೆ. ಪ್ರಕರಣ ಮುಚ್ಚಿಹಾಕಲು ಪೊಲೀಸರು ಆರೋಪಿಯಿಂದ ಕೋಟ್ಯಂತರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸಿಬಿಐ ತಿಳಿಸಿದೆ.
ಈ ಆರೋಪದ ಮೇಲೆ ದೆಹಲಿ ಪೊಲೀಸ್ ಕ್ರೈಂ ಬ್ರ‍್ಯಾಂಚ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್ ಸಿಂಗ್ ಮತ್ತು ರಾಜ್‌ಕುಮಾರ್ ಬಂಧಿಸಲಾಗಿದೆ.
ಈ ಇಬ್ಬರು ಆರೋಪಿಗಳು ಪುದುಚೇರಿ ಮೂಲದ ನಕಲಿ ಔಷಧ ಪ್ರಕರಣದ ಪ್ರಮುಖ ಆರೋಪಿ ಎನ್. ರಾಜಾ ಅಲಿಯಾಸ್ ವಳ್ಳಿಯಪ್ಪನ್ ಬಳಿ 3 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1.5 ಕೋಟಿ ರೂ. ಮುಂಗಡವಾಗಿ ನೀಡುವಂತೆ ಕೇಳಿಕೊಂಡಿದ್ದರು. ಸಿಬಿಐ ತನಿಖೆ ವೇಳೆ ಆರೋಪಿ ರಾಜಾ 1 ಕೋಟಿ ರೂ. ಹಣವನ್ನು ಪ್ರದೀಪ್ ಕುಮಾರ್ ಸಿಂಗ್‌ಗೆ ತಲುಪಿಸಿದ್ದಾನೆ. ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳು ಹಾಗೂ ಪ್ರಭಾವಿ ಸರ್ಕಾರಿ ಅಧಿಕಾರಿಗಳ ಮನವೊಲಿಸಿ ಕೇಸ್ ಮುಚ್ಚಿಸುತ್ತೇವೆ ಎಂದು ಹಣ ಪಡೆಯಲಾಗಿತ್ತು ಎಂದು ಸಿಬಿಐ ತಿಳಿಸಿದೆ.ಇದನ್ನೂ ಓದಿ: ನೆಹರೂ ದಾಖಲೆ ಮುರಿದ ಮೋದಿಗೆ ಸಚಿವ ಸಂಪುಟ ಗೌರವ – ಎದ್ದುನಿಂತು ಚಪ್ಪಾಳೆ
ಈ ಪ್ರಕರಣ ಸಂಬಂಧ ಸಿಬಿಐ ಜೂ.9 ರಂದು ಆರೋಪಿಗಳನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು, ಈ ಹಗರಣ ಸಂಬಂಧಿಸಿದಂತೆ ಇತರ ಅಧಿಕಾರಿಗಳ ಪಾತ್ರ, ಲಂಚದ ಹಣದ ಜಾಡು ಹಾಗೂ ಡಿಜಿಟಲ್ ಸಾಕ್ಷ್ಯಗಳ ಪರಿಶೀಲನೆಗಾಗಿ ಸಿಬಿಐ ಏಳು ದಿನಗಳ ಕಸ್ಟಡಿಗೆ ಮನವಿ ಮಾಡಿತ್ತು. ಆದರೆ ನ್ಯಾಯಾಲಯ ಒಂದು ದಿನದ ಪೊಲೀಸ್ ಕಸ್ಟಡಿಗೆ ಮಾತ್ರ ಅನುಮತಿ ನೀಡಿದೆ. ಇನ್ನೊಂದೆಡೆ, ತಮ್ಮ ವಿರುದ್ಧದ ಆರೋಪಗಳನ್ನು ಪ್ರದೀಪ್ ಕುಮಾರ್ ಸಿಂಗ್ ತಳ್ಳಿ ಹಾಕಿದ್ದಾರೆ. ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಯಾವುದೇ ಲಂಚದ ಬೇಡಿಕೆ ಇಟ್ಟಿಲ್ಲ ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಲಾಗಿದೆ.ಇದನ್ನೂ ಓದಿ: ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್ – ಟಿಎಂಸಿ ರಾಜ್ಯಸಭಾ ಸಂಸದೆ ಸುಷ್ಮಿತಾ ದೇವ್ ರಾಜೀನಾಮೆ
ದೇಶದ ಅತಿದೊಡ್ಡ ಔಷಧ ವಂಚನೆ ಪ್ರಕರಣಗಳಲ್ಲಿ ಒಂದೆಂದು ಪರಿಗಣಿಸಲಾಗಿರುವ ಪುದುಚೇರಿ ನಕಲಿ ಔಷಧ ಜಾಲ ಪ್ರಕರಣದ ತನಿಖೆ ಈಗ ಮತ್ತಷ್ಟು ತೀವ್ರಗೊಂಡಿದೆ. ಆರೋಪಿಗಳನ್ನು ರಕ್ಷಿಸಲು ಯತ್ನಿಸಿದವರು ಯಾರು? ಲಂಚದ ಜಾಲದಲ್ಲಿ ಇನ್ನೆಷ್ಟು ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸಿಬಿಐ ಮುಂದಾಗಿದೆ.
