– ರಾಜೀನಾಮೆ ಬೆನ್ನಲ್ಲೇ ಅಸ್ಸಾಂ ಸಿಎಂ ಭೇಟಿಯಾದ ಸುಷ್ಮಿತಾ
ಕೋಲ್ಕತ್ತಾ: ಮಮತಾ ಬ್ಯಾನರ್ಜಿ (Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ನಲ್ಲಿನ (Trinamool Congress) ಬಂಡಾಯ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ದೀದಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದ್ದು, ಟಿಎಂಸಿಯ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ (Sushmita Dev) ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್ ಅವರಿಗೆ ಸುಷ್ಮಿತಾ ದೇವ್ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿದ ಕೂಡಲೇ ಅವರು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರನ್ನ ಭೇಟಿಯಾಗಿರುವುದು ಸುಷ್ಮಿತಾ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎನ್ನುವ ವದಂತಿ ಹಬ್ಬಲು ಕಾರಣವಾಗಿದೆ. ಇದನ್ನೂ ಓದಿ: ನಕಲಿ ಸಹಿ ಹಗರಣ; ದೀದಿ ಮನೆ ಮೇಲೆ ಸಿಐಡಿ ದಾಳಿ
ರಾಜೀನಾಮೆ ಪತ್ರದಲ್ಲಿ ಏನಿದೆ?
ಉಪರಾಷ್ಟ್ರಪತಿಗಳಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಅವರು, ನಾನು ರಾಜ್ಯಸಭೆಯ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯವಿಟ್ಟು ನನ್ನ ರಾಜೀನಾಮೆ ಪತ್ರ ಅಂಗೀಕರಿಸಿ. ನನ್ನ ರಾಜ್ಯಸಭಾ ಅವಧಿಯಲ್ಲಿ ಎಲ್ಲಾ ರೀತಿಯ ಸಹಾಯ ಮತ್ತು ಸಹಕಾರವನ್ನು ನೀಡಿದ ಉಪಸಭಾಪತಿಗಳು ಹಾಗೂ ರಾಜ್ಯಸಭಾ ಸಚಿವಾಲಯದ ಎಲ್ಲಾ ಅಧಿಕಾರಿಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಅಸ್ಸಾಂನ ಸಿಲ್ಚಾರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಸಂಸದೆಯಾಗಿದ್ದ ಸುಸ್ಮಿತಾ ದೇವ್, 2019ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು. ಬಳಿಕ 2021ರಲ್ಲಿ ಟಿಎಂಸಿ ಸೇರಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ಗುರುತಿಸಿಕೊಂಡಿದ್ದರು. ಆ ಬಳಿಕ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿತ್ತು. ಆದರೆ ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ.
#WATCH | Delhi | Sushmita Dev confirms quitting TMC, says, “I have left Trinamool Congress. It is a long story why I left TMC. I don’t want to be in a situation where I am in two boats at the same time. I will not comment on Mamata Didi.” pic.twitter.com/8eVs56R2zk
— ANI (@ANI) June 10, 2026
ಒಡೆದು ಹೋಳಾಯಿತು ತೃಣಮೂಲ ಕಾಂಗ್ರೆಸ್: ಇತ್ತೀಚಿಗೆ ನಡೆದಿದ್ದ ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೀನಾಯ ಸೋಲು ಕಂಡಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಎರಡು ಹೋಳಾಗಿದೆ. ಈ ಹಿನ್ನೆಲೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಟಿಎಂಸಿ ಮುಖ್ಯಸ್ಥೆ ಹೆಣಗಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಒಂದೇ ವಾರದಲ್ಲಿ ಟಿಎಂಸಿಯ ಇಬ್ಬರು ರಾಜ್ಯಸಭಾ ಸದಸ್ಯರು ರಾಜೀನಾಮೆ ನೀಡಿರುವುದು ದೀದಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇದಕ್ಕೂ ಮುನ್ನ ಮೇಲ್ಮನೆಯಲ್ಲಿ 13 ವರ್ಷಗಳ ಕಾಲ ಪಕ್ಷದ ಮುಖ್ಯ ಸಚೇತಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ನಾಯಕ ಸುಖೇಂದು ಶೇಖರ್ ರಾಯ್ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ ಪಶ್ಚಿಮ ಬಂಗಾಳದಲ್ಲಿ ವ್ಯಾಪಕವಾಗಿ ಹರಡಿರುವ ಭ್ರಷ್ಟಾಚಾರ, ಮಹಿಳೆಯರ ಸುರಕ್ಷತೆ, ಶಿಕ್ಷಣ, ಆರೋಗ್ಯ, ಉದ್ಯೋಗ, ಕೈಗಾರಿಕೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪಕ್ಷದ ವೈಫಲ್ಯವೇ ಟಿಎಂಸಿಯ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ ಎಂದು ಆರೋಪಿಸಿದ್ದರು.
ಈ ಇಬ್ಬರು ಪ್ರಮುಖ ನಾಯಕರ ರಾಜೀನಾಮೆಯ ಬಳಿಕ ರಾಜ್ಯಸಭೆಯಲ್ಲಿ ಟಿಎಂಸಿಯ ಸಂಖ್ಯಾಬಲ 11ಕ್ಕೆ ಕುಸಿದಿದೆ. ಟಿಎಂಸಿಯ ಶಾಸಕಾಂಗ ಪಕ್ಷದಲ್ಲಿನ ಭಿನ್ನಮತ ಸ್ಫೋಟಗೊಂಡು ಬಂಡಾಯ ನಾಯಕ ಋತುಬ್ರತಾ ಬ್ಯಾನರ್ಜಿಯವರಿಗೆ ಸುಮಾರು 58 ಶಾಸಕರು ಬೆಂಬಲ ನೀಡಿ ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಪಕ್ಷದಲ್ಲಿ ಸಂಸದರ ರಾಜೀನಾಮೆ ಪರ್ವ ಆರಂಭವಾಗಿರುವುದು ಮಮತಾ ಬ್ಯಾನರ್ಜಿಯವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ಇದನ್ನೂ ಓದಿ: ಅಮಿತ್ ಶಾ ಕರೆದಿದ್ದಕ್ಕೆ ದೆಹಲಿಗೆ ಬಂದಿದ್ದೀರಾ? – ಯೂಸುಫ್ ಪಠಾಣ್ ವಿರುದ್ಧ ಮಹುವಾ ಕೆಂಡಾಮಂಡಲ
