– ಮಂಗಳವಾರ ಸಿಎಂ ಸಿದ್ದರಾಮಯ್ಯ ದೆಹಲಿಗೆ
ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್ ಆಯ್ತಾ…. ಇಂತಹದ್ದೊಂದು ಪ್ರಶ್ನೆಗೆ ಕಾರಣ ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಾಯಕರು ಬುಲಾವ್ ನೀಡಿದ್ದು. ಮಂಗಳವಾರ (ಮೇ 26) ದೆಹಲಿಗೆ ಬರುವಂತೆ ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗೀ ಈ ವಿಚಾರದ ಬಗ್ಗೆ ಚರ್ಚೆ ಕುತೂಹಲ ಹೆಚ್ಚಿಸಿದೆ.
ದೆಹಲಿ ಭೇಟಿ ವೇಳೆ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಲಿದ್ಯಾ ಅಥಾವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ಆಗಲಿದ್ಯಾ ಎನ್ನುವ ಪ್ರಶ್ನೆ ಇದೆ. ಈ ನಡುವೆ ಇದ್ಯಾವುದು ಅಲ್ಲ ಅಂತಾ ರಾಜ್ಯಸಭೆ ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚೆ ನಡೆಲಿದ್ಯಾ ಎನ್ನುವ ಕುತೂಹಲವೂ ಹೆಚ್ಚಿದೆ.
ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಬಗ್ಗೆ ಹಲವು ತಿಂಗಳಿಂದ ಚರ್ಚೆ ನಡೆಯುತ್ತಿದೆ. ಇಂದು ನಾಳೆ ಎನ್ನುವಂತಿದ್ದ ಪರಿಸ್ಥಿತಿ ಈಗ ಬದಲಾದಂತೆ ಕಾಣ್ತಿದೆ. ಸಿಎಂ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ನಾಯಕರು ಬುಲಾವ್ ನೀಡಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ. ಹೀಗಾಗೀ ಹೈಕಮಾಂಡ್ ನಾಯಕರು ಯಾವ ವಿಚಾರದ ಬಗ್ಗೆ ಸಿಎಂ ಜೊತೆಗೆ ಚರ್ಚಿಸಲಿದ್ದಾರೆ ಎನ್ನುವ ಕುತೂಹಲ ಹೆಚ್ಚಿಸಿದೆ.
ಮೂಲಗಳ ಪ್ರಕಾರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಸಮ್ಮುಖದಲ್ಲಿ ಸಭೆ ನಡೆಯಲಿದೆ ಎನ್ನಲಾಗುತ್ತಿದೆ.
ಹಾಗಿದ್ರೆ ಸಭೆಯಲ್ಲಿ ಯಾವ ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ ಅಂತಾ ನೋಡುವುದಾದರೆ….
* ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
* 2.5 ವರ್ಷಕ್ಕೆ ಬದನಾಯಕತ್ವ ಲಾವಣೆ ಎನ್ನಲಾಗಿತ್ತು ಈಗ 3 ವರ್ಷ ತುಂಬುತ್ತಿದೆ, 5 ರಾಜ್ಯಗಳ ಚುನಾವಣೆ ಹಿನ್ನಲೆ ಮುಂದೂಡಲಾಗಿತ್ತು, ಈಗ ಇದರ ಬಗ್ಗೆ ಚರ್ಚೆ ಆಗಬಹುದು.
* ಸಚಿವ ಸಂಪುಟ ಪುನರ್ ರಚನೆಗೆ ಅವಕಾಶ ನೀಡಬಹುದು, ಈಗಾಗಲೇ ಹಿರಿಯ ಶಾಸಕರಿಂದ ಪುನರ್ ರಚನೆಗೆ ಒತ್ತಡ ಹೆಚ್ಚುತ್ತಿದೆ
* ಈ ನಡುವೆ ರಾಜ್ಯಸಭೆಗೆ ಚುನಾವಣೆ ಘೋಷಣೆಯಾಗಿದ್ದು ಅಭ್ಯರ್ಥಿಗಳ ಆಯ್ಕೆ ಮಾಡಬೇಕಿದೆ, ಮುಂದೆ ಪರಿಷತ್ ಗೂ ಚುನಾವಣೆ ಘೋಷಣೆ ಯಾಗಲಿದ್ದು ಈ ಬಗ್ಗೆಯೂ ಚರ್ಚೆ ನಡೆಯಬಹುದು ಎನ್ನಲಾಗುತ್ತಿದೆ
ಡಿಸಿಎಂ ಡಿಕೆಶಿಗೆ ಇಲ್ವಾ ಬುಲಾವ್?
ಈ ನಡುವೆ ಡಿ.ಕೆ ಶಿವಕುಮಾರ್ ಗೆ ಬುಲಾವ್ ನೀಡಿದೆ ಎನ್ನಲಾಗುತ್ತಿದೆ ಆದರೂ ಸಭೆಯಲ್ಲಿ ಭಾಗಿಯಾಗಲೂ ಅವರು ನಿರಾಕರಿಸಿದ್ದಾರೆ ಎನ್ನಲಾಗುತ್ತಿದೆ. ಹೈಕಮಾಂಡ್ ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಹಿನ್ನಲೆ ಕರೆದಿದೆ ಎಂದು ಡಿಸಿಎಂ ಮೂಲಗಳು ಹೇಳ್ತಿದ್ದು, ಕೆಪಿಸಿಸಿ ಅಧ್ಯಕ್ಷರು ಆಗಿರುವ ಹಿನ್ನಲೆ ಅವರಿಗೆ ಆಹ್ವಾನ ನೀಡಿದೆ ಎನ್ನಲಾಗಿದೆ.
ʻಪಬ್ಲಿಕ್ʼ ಜೊತೆಗೆ ಡಿಕೆಶಿ ಹೇಳಿದ್ದೇನು?
ಇನ್ನೂ ಹೈಕಮಾಂಡ್ ಬುಲಾವ್ ಬಗ್ಗೆ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನನಗೆ ಯಾವುದೇ ಕರೆ ಬಂದಿಲ್ಲ. ಸಿಎಂಗೆ ಕರೆಸಿದ್ದಾರೆ ಅನ್ನೋದೂ ಗೊತ್ತಿಲ್ಲ. ನನಗಂತೂ ಕರೆದಿಲ್ಲ, ಸಿಎಂನ ಕರೆದಿರೋದು ಗೊತ್ತಿಲ್ಲ. ಯಾವ ವಿಚಾರಕ್ಕೆ ಕರೆದಿದ್ದಾರೆ ಗೊತ್ತಿಲ್ಲ ಅಂತ ಹೇಳಿ ಜಾರಿಕೊಂಡಿದ್ದಾರೆ.
