ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ದೇಶವೇ ಲಾಕ್‍ಡೌನ್ ಆಗಿದ್ದು, ಸರ್ಕಾರದ ಆದೇಶಕ್ಕೆ ಸ್ಪಂದಿಸಿ ಜನರು ಮನೆಯಲ್ಲಿ ಇದ್ದಾರೆ. ಆದರೆ ಹಸಿವಿನಿಂದ ಪರಿತಪಿಸುತ್ತಿದ್ದ ಬಡಾವಣೆ ಮಂದಿಗೆ ಕೌನ್ಸಿಲರ್ ನರಸಿಂಹ ಮೂರ್ತಿ ಸ್ಪಂದಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲದ ರಾಯನ್ ನಗರ ನಿವಾಸಿಗಳಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಕೌನ್ಸಿಲರ್ ನರಸಿಂಹ ಮೂರ್ತಿ ಅವರು ವಿತರಣೆ ಮಾಡಿದ್ದಾರೆ. ವಾರ್ಡಿನ ಪ್ರತಿ ಜನರಿಗೆ ದಿನ ಬಳಕೆಯ ದಿನಸಿ ಪದಾರ್ಥಗಳನ್ನು ಮನೆ ಮನೆಗೆ ತೆರಳಿ ವಿತರಣೆ ಮಾಡಿ ಸಹಾಯ ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ ತಲಾ 25 ಕೆ.ಜಿ ಅಕ್ಕಿ, ಮೂರು ತರಹದ ಬೇಳೆ, ಸಕ್ಕರೆ, ಉಪ್ಪು, ಅಡುಗೆ ಎಣ್ಣೆ ಇನ್ನಿತರ ಪದಾರ್ಥಗಳನ್ನು ವಿತರಣೆ ಮಾಡಲಾಗಿದೆ.
Advertisement
Advertisement
ಸುಮಾರು 4 ಟನ್ ಆಹಾರ ಸಾಮಗ್ರಿಗಳ ವಿತರಣೆ ಮಾಡಿದ ಸದಸ್ಯರಿಗೆ ವಾರ್ಡಿನ ಜನತೆ ಧನ್ಯವಾದ ತಿಳಿಸಿದ್ದಾರೆ. ಲಾಕ್‍ಡೌನ್‍ನಿಂದ ಹೊರಬರದೆ ಕಂಗಾಲಾಗಿದ್ದ ಜನರಿಗೆ ಸ್ಪಂದನೆ ದೊರೆತಿರುವುದು ಉತ್ತಮ ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಸಾಮಾಜಿಕ ಕಾರ್ಯಕ್ಕೆ ಮಹಿಳೆಯರು ಹೂವುಗಳನ್ನು ನರಸಿಂಹ ಮೂರ್ತಿ ಅವರ ಮೇಲೆ ಹಾಕಿ ದಿನಸಿ ಸ್ವೀಕರಿಸಿ ಧನ್ಯತೆ ಮೆರೆದಿದ್ದಾರೆ.
Advertisement
Advertisement
ಈ ವೇಳೆ ಮಾತನಾಡಿದ ಕೌನ್ಸಿಲರ್, ನಮ್ಮ ಬಡಾವಣೆಯ ಜನರು ಲಾಕ್‍ಡೌನ್‍ಗೆ ಸ್ಪಂದಿಸಿದ್ದಾರೆ. ಈ ಕೊರೊನಾ ವೈರಸ್ ತಡೆಗಟ್ಟಲು ಮನೆಯಿಂದ ಹೊರಗೆ ಬರದೆ ನಮ್ಮ ಕಾನೂನಿಗೆ ಗೌರವವನ್ನು ನೀಡಿದ್ದಾರೆ. ಆದರೆ ಆಹಾರಕ್ಕಾಗಿ ಎಲ್ಲರು ಪರಿತಪಿಸುತ್ತಿದ್ದರು, ಇದರಿಂದ ನನಗೆ ನೋವಾಯಿತು. ಹೀಗಾಗಿ ಪ್ರತಿನಿತ್ಯ ಕೂಲಿ ಕೆಲಸ ಮಾಡಿ ಜೀವನ ನಡೆಸುತಿದ್ದ ಎಲ್ಲಾ ಕುಟುಂಬಕ್ಕೆ ಆಹಾರ ಧಾನ್ಯಗಳನ್ನ ನೀಡಿದ್ದು, ನನಗೆ ಸಂತಸ ತಂದಿದೆ. ಮುಂದಿನ ಆದೇಶವರೆಗೂ ನಾವು ನಮ್ಮ ಗ್ರಾಮ, ನಮ್ಮ ರಾಜ್ಯ, ನಮ್ಮ ದೇಶಕ್ಕಾಗಿ ಸೇವೆ ಸಲ್ಲಿಸುವುದಾಗಿ ಕೌನ್ಸಿಲರ್ ನರಸಿಂಹಮೂರ್ತಿ ತಿಳಿಸಿದ್ದಾರೆ.