– ತಗ್ಗು ಪ್ರದೇಶಗಳಲ್ಲಿ ಮನೆಗಳಿಗೂ ನುಗ್ಗಿದ ನೀರು
ಬಳ್ಳಾರಿ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಮಳೆಗೆ ಹತ್ತಾರು ಅವಾಂತರ ಸೃಷ್ಟಿಯಾಗಿದೆ. ಬಳ್ಳಾರಿ ನಗರದ (Ballari City) ತಗ್ಗು ಪ್ರದೇಶದ ಕೆಲ ಮನೆಗಳಿಗೆ ನೀರು ನುಗ್ಗಿ ಇಡೀ ರಾತ್ರಿ ಜನ ಜಾಗರಣೆ ಮಾಡಿದ್ರೆ, ಹಲವು ಸರ್ಕಾರಿ ಕಚೇರಿಗಳ ಆವರಣ ಕೆರೆಯಂತಾಗಿ, ಪೊಲೀಸ್ ಸಿಬ್ಬಂದಿ ಪರದಾಡಿದ್ದಾರೆ. ಕೆಇಬಿಗೂ (KEB) ನೀರು ನುಗ್ಗಿದ್ದು, ಇಡೀ ಬಳ್ಳಾರಿ ನಗರದ ಜನ ಕತ್ತಲೆಯಲ್ಲಿ ರಾತ್ರಿ ಕಳೆಯುವಂತಾಯಿತು.
ಇನ್ನೂ ಮಳೆಯ (Rain) ಮತ್ತೊಂದು ದೊಡ್ಡ ಪರಿಣಾಮ ನಗರದ ವಿದ್ಯುತ್ ವ್ಯವಸ್ಥೆಯ ಮೇಲೆ ಬಿದ್ದಿದೆ. ಬಳ್ಳಾರಿ ನಗರದ ಬಹುತೇಕ ಭಾಗಕ್ಕೆ ವಿದ್ಯುತ್ ಪೂರೈಕೆ ಮಾಡುವ ಪ್ರಮುಖ ಕೆಇಬಿ ಕೇಂದ್ರವೇ ಮಳೆ ನೀರಿನಿಂದ ಜಲಾವೃತಗೊಂಡಿದೆ. ಕೇಂದ್ರದೊಳಗಿನ ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ನಿಯಂತ್ರಣ ಯಂತ್ರಗಳು ಸೇರಿದಂತೆ ಹಲವು ಉಪಕರಣಗಳ ಸುತ್ತ ನೀರು ಆವರಿಸಿಕೊಂಡಿದೆ. ಇದು ಅಧಿಕಾರಿಗಳ ಆತಂಕಕ್ಕೂ ಕಾರಣವಾಗಿದೆ.

ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹೊರಹಾಕುವ ಕಾರ್ಯಾಚರಣೆಗೆ ಮುಂದಾದರು. ಶನಿವಾರ ರಾತ್ರಿ 10 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಗೊಂಡಿದ್ದು ರಾತ್ರಿಯಿಡೀ ನೀರು ಹೊರ ಹಾಕಲು ಶ್ರಮಿಸಲಾಯಿತು. ಆದರೂ ಜಲಾವೃತ ಸಮಸ್ಯೆಯಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು.
ಪ್ರತಿವರ್ಷ ಮಳೆ ಬಂದಾಗ ಇದೇ ರೀತಿಯ ಸಮಸ್ಯೆ ಎದುರಾಗುತ್ತಿದ್ದರೂ ಶಾಶ್ವತ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಪದೇ ಪದೇ ವಿದ್ಯುತ್ ಕಡಿತದಿಂದ ಬೇಸತ್ತ ಜನ ಕೆಇಬಿ ಬಳಿ ಬಂದು ಅಧಿಕಾರಿಗಳಿಗೆ ಕ್ಲಾಸ್ ತಗೊಂಡು ಕೂಡಲೇ ವಿದ್ಯುತ್ ಕೊಡಿ ಎಂದು ವಾಗ್ವಾದ ನಡೆಸಿದ್ದಾರೆ.

ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು
ಮಳೆಯಿಂದ ನಗರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ರೇಣುಕಾನಗರ, ರಾಣಿಪೇಟೆ, ಮಿಲ್ಲರ್‌ಪೇಟೆ ಸೇರಿದಂತೆ ಹಲವು ಬಡಾವಣೆಗಳಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ನಿವಾಸಿಗಳು ರಾತ್ರಿಯಿಡೀ ಪರದಾಡುವಂತಾಯಿತು. ಮನೆಯೊಳಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ವಸ್ತುಗಳು ಹಾನಿಯಾಗಿದ್ದು, ನೀರು ಹೊರ ಹಾಕಲು ಕುಟುಂಬಸ್ಥರು ಹರಸಾಹಸ ಪಟ್ಟರು.
ಮಳೆಯ ಹೊಡೆತಕ್ಕೆ ಸರ್ಕಾರಿ ಕಚೇರಿಗಳೂ ಹೊರತಾಗಿಲ್ಲ. ನಗರದ ಹಳೆ ತಾಲೂಕು ಕಚೇರಿ ಆವರಣ ಸಂಪೂರ್ಣ ಜಲಾವೃತಗೊಂಡಿದ್ದು ಕೆರೆಯಂತಾದ ದೃಶ್ಯ ಕಂಡುಬಂದಿದೆ. ಇದೇ ಆವರಣದಲ್ಲಿ ಪೋಸ್ಟ್ ಆಫೀಸ್, ಸಬ್-ರಿಜಿಸ್ಟ್ರಾರ್ ಕಚೇರಿ ಸೇರಿದಂತೆ 7 ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಕಚೇರಿಗಳಿಗೆ ಆಗಮಿಸಿದ ಸಾರ್ವಜನಿಕರು ನೀರಿನ ಮಧ್ಯೆಯೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಬ್ರೂಸ್‌ಪೇಟೆ ಪೊಲೀಸ್ ಠಾಣೆ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ತೆರಳುವ ಸಿಬ್ಬಂದಿ ಮತ್ತು ಸಾರ್ವಜನಿಕರೂ ಸಾಕಷ್ಟು ತೊಂದರೆ ಅನುಭವಿಸಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದ್ದರೂ ಅಧಿಕಾರಿಗಳು ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ದುರಂತ.
