ಲಕ್ನೋ: ಉತ್ತರ ಪ್ರದೇಶದಲ್ಲಿ ಬಿಜೆಪಿ (BJP) ಸತತ 3ನೇ ಬಾರಿಗೆ ಅಧಿಕಾರಕ್ಕೆ ಮರಳಲಿದೆ ಎಂದು ಸಿಎಂ ಯೋಗಿ ಆದಿತ್ಯನಾಥ್ (Yogi Adityanath) ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಖಾಸಗಿ ವಾಹಿನಿಯೊಂದರ ಕಾನ್ಕ್ಲೈವ್ನಲ್ಲಿ ಮಾತನಾಡಿದ ಅವರು, ನಿರ್ಣಾಯಕ ಗೆಲುವಿನ ಭವಿಷ್ಯ ನುಡಿದಿದ್ದಾರೆ. ಚುನಾವಣಾ ಫಲಿತಾಂಶದ ಬಗ್ಗೆ ಡೌಟೇ ಇಲ್ಲ. ಬಿಜೆಪಿ ತನ್ನ ಹಿಂದಿನ ಕಾರ್ಯಕ್ಷಮತೆಯನ್ನ ಮೀರಿಸಲು ಸಿದ್ಧವಾಗಿದೆ ಎಂದಿದ್ದಾರೆ.
ಮುಂಬರುವ ಚುನಾವಣೆಯಲ್ಲಿ (UP Elections) ಬಿಜೆಪಿ ಮತ್ತು ಎನ್ಡಿಎ ಮಿತ್ರ ಪಕ್ಷಗಳು 320ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ. 2027ರ ಚುನಾವಣೆ ಆ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ನೀವು ಪರಿಗಣಿಸಬಹುದು ಎಂದು ಹೇಳಿದ್ದಾರೆ.
ಇದೇ ವೇಳೆ ಸಮಾಜವಾದಿ ಪಕ್ಷ (Samajwadi Party) ಮತ್ತು ಕಾಂಗ್ರೆಸ್ (Congress) ಗುರಿಯಾಗಿಸಿ ಮಾತನಾಡಿದ ಸಿಎಂ, ರಾಜ್ಯದ ಭೂತಕಾಲ ಮತ್ತು ವರ್ತಮಾನದ ನಡುವಿನ ವ್ಯತ್ಯಾಸದ ಬಗ್ಗೆ ಬಿಜೆಪಿ ತನ್ನ ಪ್ರಚಾರ ಮಾಡುತ್ತದೆ. ಹಿಂದಿನ ಸರ್ಕಾರಗಳ ಅವಧಿಯಲ್ಲಿ (ಎಸ್ಪಿ ಮತ್ತು ಕಾಂಗ್ರೆಸ್ ಸರ್ಕಾರ) ನಡೆದ ಜಂಗಲ್ ರಾಜ್, ಗೂಂಡಾರಾಜ್, ಕರ್ಫ್ಯೂಗಳು ಮತ್ತು ಗಲಭೆಗಳನ್ನ ಪಕ್ಷವು ಎತ್ತಿ ತೋರಿಸುತ್ತದೆ. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಮತ್ತೊಮ್ಮೆ ಪೂರ್ಣ ಬಹುಮತ ಪಡೆಯಲಿದೆ. ಸತತ ಮೂರನೇ ಬಾರಿಗೆ ಸರ್ಕಾರವನ್ನ ರಚಿಸುವಲ್ಲಿ ಮತ್ತೊಮ್ಮೆ ಯಶಸ್ವಿಯಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಎಂದು ಹೇಳಿದ್ದಾರೆ.
ಕುಟುಂಬ, ಜಾತಿ ರಾಜಕೀಯ ರಾಜ್ಯವನ್ನ ಹಾಳು ಮಾಡಿದೆ
ಸಮಜವಾದಿ ಪಕ್ಷದ ವಿರುದ್ಧ ಹರಿಹಾಯ್ದ ಯೋಗಿ ಆದಿತ್ಯನಾಥ್, ವಿಪಕ್ಷ ಸರ್ಕಾರಗಳು ವಂಶಪಾರಂಪರ್ಯ ಮತ್ತು ಜಾತಿ ಆಧಾರಿತ ರಾಜಕೀಯದ ಮೂಲಕ ಉತ್ತರ ಪ್ರದೇಶವನ್ನ ಮತ್ತೆ ಹಿಡಿದಿಟ್ಟುಕೊಂಡಿವೆ. ಕುಟುಂಬ ಆಧಾರಿತ ಮತ್ತು ಜಾತಿ ಆಧಾರಿತ ರಾಜಕೀಯವು ಉತ್ತರ ಪ್ರದೇಶವನ್ನು ನಾಶಮಾಡಿದೆ. ಅಲ್ಲದೇ ಈ ರಾಜ್ಯವನ್ನು ಕತ್ತಲೆಯಲ್ಲಿ ಕೊಳೆಯುವಂತೆ ಮಾಡಿದೆ. ಕರ್ಫ್ಯೂಗಳು ಮತ್ತು ಗಲಭೆಗಳು ರಾಜ್ಯದಲ್ಲಿ ನಿರಂತರವಾಗಿ ಹೇರಲ್ಪಡುತ್ತಿದ್ದವು. ಸಮಾಜವಾದಿ ಪಕ್ಷದ ಸರ್ಕಾರದ ಅಡಿಯಲ್ಲಿ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಘನತೆ ಮತ್ತು ಸುರಕ್ಷತೆ ಎಂದಾದರೂ ಇತ್ತಾ? ಇರೋಕೆ ಸಾಧ್ಯವೇ ಇರಲಿಲ್ಲ… ಈಗ ಬಿಜೆಪಿ ಈ ಗುಂಡಾ ರಾಜ್ಯಕ್ಕೆ ಅಂತ್ಯ ಹಾಡುತ್ತಿದೆ. ಎಂದು ಎಚ್ಚರಿಸಿದರು.

