ಶ್ರೀನಗರ: ಕುಲ್ಗಾಮ್ನ ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ದಾಳಿ ಮಾಡಿದ್ದ ಲಷ್ಕರ್-ಎ-ತೊಯ್ಬಾ ಉಗ್ರ (Lashkar Terrorist) ಸಂಘಟನೆಯ ಕಮಾಂಡರ್ ಲತೀಫ್ ಭಟ್ (Lateef Bhat) ಭದ್ರತಾ ಪಡೆಗಳ (Indian Army) ಗುಂಡಿಗೆ ಬಲಿಯಾಗಿದ್ದಾನೆ. ಈ ಹಿಂದೆ ಮೂರು ಬಾರಿ ನಡೆದಿದ್ದ ಎನ್ಕೌಂಟರ್ನಲ್ಲಿ ಈತ ಬಚಾವ್ ಆಗಿದ್ದ.
ಲತೀಫ್ ಭಟ್ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಉಗ್ರ ಸಂಘಟನೆಯ ಸದಸ್ಯ. ಈತ ಶೋಪಿಯಾನ್ನಲ್ಲಿ ಜುಲೈ 2026ರಲ್ಲಿ ನಡೆದ ಎನ್ಕೌಂಟರ್ ವೇಳೆ ಬಚಾವ್ ಆಗಿದ್ದ. ಈ ಎನ್ಕೌಂಟರ್ನಲ್ಲಿ ಈತನ ಜೊತೆಗಿದ್ದ ಜಕೀರ್ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ. ಇದನ್ನೂ ಓದಿ: ಭದ್ರತಾ ಪಡೆಗಳ ಎನ್ಕೌಂಟ್ಗೆ ಲಷ್ಕರ್ ಉಗ್ರ ಲತೀಫ್ ಭಟ್ ಬಲಿ
ನವೆಂಬರ್ 11 ರಂದು ಉಗ್ರ ಉಮರ್ ನಿಸಾರ್ ದಾರ್ ಹಾಗೂ ಲತೀಫ್ ಭಟ್ ಸೇರಿ ಕುಲ್ಗಾಮ್ನ ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದವು. ನ.16 ರಂದು ಈ ಇಬ್ಬರು ಅಡಗಿದ್ದ ಸ್ಥಳವನ್ನು ಸುತ್ತುವರೆದಿದ್ದ ಭದ್ರತಾ ಪಡೆಗಳು ಉಮರ್ ನಿಸಾರ್ ದಾರ್ನನ್ನು ಹತ್ಯೆ ಮಾಡಿದ್ದವು. ಈ ವೇಳೆ ಸಹ ಲತೀಫ್ ಭಟ್ ಬಚಾವ್ ಆಗಿದ್ದ. ಇದಾದ ಮರು ದಿನ ಸಹ ಭದ್ರತಾ ಪಡೆಗಳು ಲತೀಫ್ ಭಟ್ಗಾಗಿ ತೀವ್ರ ಶೋಧ ನಡೆಸಿದ್ದವು, ಆಗಲೂ ಆತ ಬಚಾವ್ ಆಗಿದ್ದ.
ಮೂರು ಬಾರಿ ಬಚಾವ್ ಆಗಿದ್ದ ಲತೀಫ್ ಭಟ್ ಇಂದು (ನ.18) ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಬೀದಿ ಹೆಣವಾಗಿದ್ದಾನೆ.
ಲತೀಫ್ ಭಟ್ ಯಾರು?
ದಕ್ಷಿಣ ಕಾಶ್ಮೀರದ ಕುಲ್ಗಾಮ್ ನಿವಾಸಿಯಾದ ಭಟ್, ಅಶ್ಮುಜಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 12 ನೇ ತರಗತಿಯವರೆಗೆ ಅಧ್ಯಯನ ಮಾಡಿದ್ದ. ನಂತರ ಕುಲ್ಗಾಮ್ನ ಸರ್ಕಾರಿ ಪದವಿ ಕಾಲೇಜಿಗೆ ಸೇರಿ, ಅರ್ಧದಲ್ಲೇ ಶಾಲೆಯನ್ನು ತೊರೆದು ಖ್ರೆವಾನ್ನಲ್ಲಿರುವ ಬೀಡಿಂಗ್-ಮೆಷಿನ್ ಘಟಕದಲ್ಲಿ ಬಡಗಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ. ನವೆಂಬರ್ 19, 2025 ರಂದು ಮನೆಯಿಂದ ಕಾಣೆಯಾಗಿದ್ದ. ಬಳಿಕ ಟಿಆರ್ಎಫ್ ಸಂಘಟನೆಗೆ ಸೇರಿರುವುದು ಗೊತ್ತಾಗಿತ್ತು.
ಇತ್ತೀಚೆಗೆ ಭಟ್ನ ಛಾಯಾಚಿತ್ರವನ್ನು ಹೊಂದಿರುವ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿತ್ತು. ಅವನ ಚಲನವಲನ ಮತ್ತು ಅವನ ಭೂಗತ ಜಾಲದ ಬಗ್ಗೆ ಮಾಹಿತಿ ನೀಡಿದವರಿಗೆ 15 ಲಕ್ಷ ರೂ. ಬಹುಮಾನವನ್ನು ಘೋಷಿಸಲಾಗಿತ್ತು.
ಲತೀಫ್ ಭಟ್, ಸ್ಥಳೀಯ ಬೆಂಬಲಿಗರ ಸಹಾಯದಿಂದ ದಕ್ಷಿಣ ಕಾಶ್ಮೀರದ ಅಡಗುತಾಣಗಳಲ್ಲಿ ಪಾಕಿಸ್ತಾನಿ(Pakistan) ಉಗ್ರರೊಂದಿಗೆ ಸೇರಿ ಕಾರ್ಯಾಚರಣೆ ನಡೆಸುತ್ತಿದ್ದ. ಜುಲೈ 22ರಂದು ಅನಂತನಾಗ್ನ ಲಾಲ್ ಚೌಕ್ ಪ್ರದೇಶದಲ್ಲಿ ನಡೆದ ಪೊಲೀಸ್ ಕಾನ್ಸ್ಟೇಬಲ್ ಹತ್ಯೆ ಮತ್ತು ಜುಲೈ 31ರಂದು ಕುಲ್ಗಾಮ್ನಲ್ಲಿ ನಡೆದ ವಲಸೆ ಕಾರ್ಮಿಕರ ಹತ್ಯೆ ಸೇರಿದಂತೆ 2026ರಲ್ಲಿ ನಡೆದ ಸರಣಿ ಭಯೋತ್ಪಾದಕ ದಾಳಿಗಳಲ್ಲಿ ಭಟ್ ಭಾಗಿಯಾಗಿದ್ದ. ಇದನ್ನೂ ಓದಿ: ಕುಲ್ಗಾಮ್ ಮಸೀದಿಯಲ್ಲಿ ಅಡಗಿರೋ ಲಷ್ಕರ್ ಉಗ್ರನಿಗೆ ಪೊಲೀಸರ ವಿಡಿಯೋ ಕಾಲ್ – ಶರಣಾಗುವಂತೆ ವಾರ್ನಿಂಗ್
