ಬೆಂಗಳೂರು/ರಾಮನಗರ: ನಾನು ಎಷ್ಟೇ ದೊಡ್ಡ ಸ್ಥಾನದಲ್ಲಿದ್ದರೂ ಇಲ್ಲಿ ಮುಖ್ಯಮಂತ್ರಿ ಅಲ್ಲ, ನಿಮ್ಮ ಮನೆ ಮಗ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸಿಎಂ ಆದ ಬಳಿಕ ಮೊದಲ ಬಾರಿಗೆ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಅದ್ದೂರಿ ಸ್ವಾಗತ ಕೋರಿದರು.
ಕಗ್ಗಲಿಪುರಕ್ಕೆ ಆಗಮಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಕಾರ್ಯಕರ್ತರು ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ ಕೋರಿದರು. ಈ ವೇಳೆ ಮಾತನಾಡಿದ ಅವರು, ಪ್ರತಿ ಸಂದರ್ಭದಲ್ಲೂ ನೀವು ನನ್ನನ್ನು ಪ್ರೀತಿಯಿಂದ ಕಂಡಿದ್ದೀರಿ. ನನಗಾಗಿ ಹೋರಾಟ ಮಾಡಿದ್ದೀರಿ, ಪ್ರಾರ್ಥನೆ ಮಾಡಿದ್ದೀರಿ. ನಿಮಗೆಲ್ಲ ಶುಭವಾಗಲಿ. ನಿಮ್ಮ ಶಾಸಕ ಸೋಮಶೇಖರ್ ನನ್ನ ಜೊತೆ ಇದ್ದಾರೆ. ನಾನು ಕೂಡ ನಿಮ್ಮ ಜೊತೆ ಇದ್ದೇನೆ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಕಂಕಣಬದ್ಧನಾಗಿದ್ದೇನೆ ಎಂದು ಭರವಸೆ ನೀಡಿದರು.ಇದನ್ನೂ ಓದಿ: ಕೊಡಗಿನಲ್ಲಿ ಹೆಚ್ಚಿದ ಕಾಡಾನೆ-ಮಾನವ ಸಂಘರ್ಷ – ಕಾಫಿ ತೋಟಕ್ಕೆ ತೆರಳಲು ಕಾರ್ಮಿಕರು ಹಿಂದೇಟು!
ಹಾರೋಹಳ್ಳಿ ಸರ್ಕಲ್‌ನಲ್ಲಿ ಡಿ.ಕೆ. ಶಿವಕುಮಾರ್ ಅವರ ಬೃಹತ್ ಬ್ಯಾನರ್‌ಗಳು, ಕಟೌಟ್‌ಗಳು ಹಾಗೂ ಕಾಂಗ್ರೆಸ್ ಬಾವುಟಗಳಿಂದ ಪಟ್ಟಣ ಸಿಂಗಾರಗೊಂಡಿತ್ತು. ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಸಾವಿರಾರು ಕಾರ್ಯಕರ್ತರು ಮತ್ತು ಸಾರ್ವಜನಿಕರು ಜಮಾಯಿಸಿದ್ದರು.
ಹಾರೋಹಳ್ಳಿಯ ಕೋಟೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ರೋಡ್ ಶೋ ವೇಳೆ ಜನರು ಹೂಮಳೆ ಸುರಿಸಿ ಸಂಭ್ರಮಿಸಿದರು.

ಮುಖ್ಯಮಂತ್ರಿಯವರಿಗೆ ವಿಶೇಷ ಸ್ವಾಗತ ನೀಡಲು ಜನಪದ ಕಲಾತಂಡಗಳು ಸಜ್ಜಾಗಿದ್ದವು. ತಮಟೆ, ಡೊಳ್ಳು, ನಗಾರಿ, ಹುಲಿವೇಷ ಹಾಗೂ ಪೂಜಾ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾಪ್ರದರ್ಶನಗಳು ಗಮನ ಸೆಳೆದವು. ಮಹಿಳೆಯರು ಪೂರ್ಣಕುಂಭದೊಂದಿಗೆ ಮುಖ್ಯಮಂತ್ರಿ ಅವರನ್ನು ಸ್ವಾಗತಿಸಿದರು.
ಈ ವೇಳೆ ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಾಗೂ ಬೆಳ್ಳುಳ್ಳಿಯಿಂದ ತಯಾರಿಸಲಾದ ಬೃಹತ್ ಹಾರ ಎಲ್ಲರ ಗಮನ ಸೆಳೆಯಿತು. ಮುಖ್ಯಮಂತ್ರಿಗೆ ದೃಷ್ಟಿ ತಾಗದಿರಲಿ ಎಂಬ ಉದ್ದೇಶದಿಂದ ಸಿದ್ಧಪಡಿಸಲಾಗಿದ್ದ ಈ ವಿಶೇಷ ಹಾರವನ್ನು ಕ್ರೇನ್ ಮೂಲಕ ಅರ್ಪಿಸಲಾಯಿತು.

ಮುಖ್ಯಮಂತ್ರಿಯವರ ಪ್ರವಾಸದ ಹಿನ್ನೆಲೆಯಲ್ಲಿ ಹಾರೋಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಬಾಂಬ್ ಸ್ಕ್ವಾಡ್ ಹಾಗೂ ಭದ್ರತಾ ಸಿಬ್ಬಂದಿ ಕಾರ್ಯಕ್ರಮದ ಸ್ಥಳಗಳಲ್ಲಿ ಪರಿಶೀಲನೆ ನಡೆಸಿದರು. ಇಂದು ದಿನಪೂರ್ತಿ ಕನಕಪುರ ಕ್ಷೇತ್ರದಲ್ಲಿ ಡಿಕೆಶಿ ಸಂಚರಿಸಲಿದ್ದಾರೆ. ಇಂದು ರಾತ್ರಿ 8 ಗಂಟೆಗೆ ಕನಕಪುರ ಪಟ್ಟಣದ ಚನ್ನಬಸಪ್ಪ ವೃತ್ತದಲ್ಲಿ ರಾತ್ರಿ 8 ಗಂಟೆಗೆ ಸಮಾರೋಪಗೊಳ್ಳಲಿದೆ.ಇದನ್ನೂ ಓದಿ: ಹಾಸನ ಶಕ್ತಿ ಸದನ ಕೇಂದ್ರದ ಗೇಟ್ ಹಾರಿ ಇಬ್ಬರು ಬಾಂಗ್ಲಾದೇಶಿ ಮಹಿಳೆಯರು ಪರಾರಿ
ಮೆಟ್ರೋ ಸಂಚಾರ:
ಕನಕಪುರಕ್ಕೆ ತೆರಳುವ ಮೊದಲು ಡಿಕೆ ಶಿವಕುಮಾರ್ ಮೆಟ್ರೋದಲ್ಲಿ ಸಂಚರಿಸಿದ್ದರು. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಡಿಕೆಶಿ, ಇಂದು ನನ್ನೂರು ಕನಕಪುರಕ್ಕೆ ಹೋಗುವಾಗ, ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು. ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ, ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಕರ್ನಾಟಕದ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ ಮನವರಿಕೆಯಾಯಿತು ಎಂದು ಹೇಳಿದರು.
ಇಂದು ನನ್ನೂರು ಕನಕಪುರಕ್ಕೆ ಹೋಗುವಾಗ, ನಮ್ಮ ಮೆಟ್ರೋದಲ್ಲಿ ಸಾರ್ವಜನಿಕರೊಂದಿಗೆ ಪ್ರಯಾಣಿಸುವ ಅವಕಾಶ ಸಿಕ್ಕಿತು.
ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ಬೆಂಗಳೂರಿನ ನಾಗರಿಕರ ಮುಖದಲ್ಲಿನ ನೆಮ್ಮದಿಯನ್ನು ಕಂಡಾಗ, ಸುರಕ್ಷಿತ, ಜನಸ್ನೇಹಿ ಹಾಗೂ ಕೈಗೆಟುಕುವ ಸಾರ್ವಜನಿಕ ಸಾರಿಗೆ ನಮ್ಮ ಕರ್ನಾಟಕದ ಜನತೆಗೆ ಎಷ್ಟು ಮುಖ್ಯ ಎಂಬುದು ಮತ್ತೊಮ್ಮೆ… pic.twitter.com/1mLcXrVobA
— DK Shivakumar (@DKShivakumar) June 7, 2026
ಬೆಂಗಳೂರು ನಮ್ಮೆಲ್ಲರ ಹೆಮ್ಮೆ. ಪ್ರತಿಯೊಬ್ಬ ನಾಗರಿಕನ ದೈನಂದಿನ ಬದುಕನ್ನು ಸುಗಮಗೊಳಿಸಿ, ಇಡೀ ನಗರವನ್ನು ಬೆಸೆಯುವಂತಹ ದೂರದೃಷ್ಟಿಯುಳ್ಳ ಯೋಜನೆಗಳಲ್ಲೇ ನಮ್ಮ ಬೆಂಗಳೂರಿನ ಭವಿಷ್ಯ ಅಡಗಿದೆ. ಈ ನಿಟ್ಟಿನಲ್ಲಿ ನಮ್ಮ ಮೆಟ್ರೋ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
