Connect with us

Corona

ಲಾಕ್‍ಡೌನ್ ಎಫೆಕ್ಟ್- ಶಿಮೂಲ್‌ನಲ್ಲಿ ಹಾಲು ಉತ್ಪಾದನೆ ಹೆಚ್ಚಳ

Published

on

ಶಿವಮೊಗ್ಗ: ಮಹಾಮಾರಿ ಕೊರೊನಾ ಎಲ್ಲಾ ಉತ್ಪಾದನಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿದೆ. ಆದರೆ ಲಾಕ್‍ಡೌನ್ ಎಫೆಕ್ಟ್‌ನಿಂದಾಗಿ ಹಾಲು ಉತ್ಪಾದನೆಯಲ್ಲಿ ಗಣನೀಯ ಹೆಚ್ಚಳ ಉಂಟಾಗಿದೆ. ಹಳ್ಳಿಯಿಂದ ಉದ್ಯೋಗಕ್ಕಾಗಿ ದೂರದೂರಿಗೆ ಹೋಗಿದ್ದವರು ವಾಪಸ್ ಬಂದು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಹಾಲು ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.

ಶಿವಮೊಗ್ಗದಲ್ಲಿ ಈ ಲಾಕ್‍ಡೌನ್ ಅವಧಿಯಲ್ಲಿ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಹಾಲು ಉತ್ಪಾದನೆ ಹೆಚ್ಚಳ ಕಂಡಿದೆ. ಲಾಕ್‍ಡೌನ್‍ಗೂ ಮುನ್ನ ಶಿಮುಲ್‍ಗೆ ಪ್ರತಿದಿನ 4.5 ಲಕ್ಷ ಲೀಟರ್ ಹಾಲು ಬರುತ್ತಿತ್ತು. ಆದರೆ ಲಾಕ್‍ಡೌನ್ ಆದ ಬಳಿಕ ಪ್ರತಿದಿನ 6.4 ಲಕ್ಷ ಲೀಟರ್ ಹಾಲು ಬರುತ್ತಿದೆ. ಒಂದು ಕಡೆ ಮುಂಗಾರು ಮಳೆ ಆರಂಭವಾಗಿದ್ದು, ಹಸುಗಳು ಹೆಚ್ಚು ಹಾಲು ಕೊಡುವ ಸಮಯ. ಅದರಲ್ಲೂ ಬೇರೆ ಬೇರೆ ರಾಜ್ಯಗಳಿಗೆ ಕೆಲಸಕ್ಕೆ ವಲಸೆ ಹೋಗಿದ್ದವರು ವಾಪಸ್ ತಮ್ಮ ತಮ್ಮ ಗ್ರಾಮಗಳಿಗೆ ಬಂದಿದ್ದಾರೆ. ಇವರೆಲ್ಲರೂ ತಮ್ಮ ಕುಟುಂಬದವರ ಜೊತೆ ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.

ಹಳ್ಳಿಗೆ ವಾಪಸ್ಸಾದ ಯುವಕರು ಉದ್ಯೋಗ ಇಲ್ಲದಿದ್ದರಿಂದ ತಮ್ಮ ಮನೆಯಲ್ಲಿರುವ ಹಸುಗಳಿಗೆ ಹೆಚ್ಚಿನ ಮೇವನ್ನು ತಂದು ಹಾಕಲಾರಂಭಿಸಿದ್ದಾರೆ. ಪರಿಣಾಮ ಹಸುಗಳು ನೀಡುವ ಹಾಲಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಒಂದು ಕಡೆ ಹಾಲಿನ ಉತ್ಪಾದನೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ರೆ ಮಾರಾಟದ ಪ್ರಮಾಣ ಕುಸಿದಿದೆ. ಹೀಗಾಗಿ ಶಿಮುಲ್‍ಗೆ ಹೊಸ ಸಮಸ್ಯೆ ಎದುರಾಗಿದೆ.

ಅಂದಹಾಗೆ ಪ್ರಸ್ತುತ ಶಿಮುಲ್‍ಗೆ ಹಾಲು ಉತ್ಪಾದಕರಿಂದ 6.43 ಲಕ್ಷ ಲೀಟರ್ ಹಾಲು ಬರುತ್ತಿದೆ. ಆದರೆ ಶಿಮೂಲ್ ನಿಂದ ಮಾರಾಟ ಆಗುತ್ತಿರುವುದು ಮಾತ್ರ ಕೇವಲ 2.30 ಲಕ್ಷ ಲೀಟರ್. ಉಳಿದ 4.10 ಲಕ್ಷ ಲೀಟರ್ ಅಧಿಕ ಉತ್ಪಾದನೆಯಾಗುತ್ತಿದೆ. ಒಂದು ಲಕ್ಷ ಲೀಟರ್ ಹಾಲನ್ನು ಇತರೆ ಮದರ್ ಡೈರಿಗಳಿಗೆ ನೀಡಲಾಗುತ್ತಿದೆ. ಬಾಕಿ ಉಳಿದ 3.10 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿ ಹಾಗೂ ಇತರೆ ಉತ್ಪನ್ನಗಳ ಉತ್ಪಾದನೆಗೆ ಬಳಸಿಕೊಳ್ಳಲಾಗುತ್ತಿದೆ.

ಲಾಕ್‍ಡೌನ್ ಮತ್ತು ಸೋಂಕಿನ ಹಿನ್ನೆಲೆಯಲ್ಲಿ ಸಭೆ-ಸಮಾರಂಭಗಳು ಕೂಡ ನಡೆಯುತ್ತಿಲ್ಲ. ಹೀಗಾಗಿ ಶಿಮುಲ್‍ನ ಹಾಲು ಮಾರಾಟ ಕುಸಿದಿದೆ. ಅದರಲ್ಲೂ ಹಾಲು ಖರೀದಿ ದರದಲ್ಲಿಯೂ ಏರಿಕೆ ಮಾಡಲಾಗಿದ್ದು, ಈ ಕಾರಣದಿಂದಾಗಿ ಹೆಚ್ಚು ಹೆಚ್ಚು ಹಾಲು ಉತ್ಪಾದಿಸಿ ರೈತರು ಡೈರಿಗೆ ಕಳಿಸುತ್ತಿದ್ದು, ಇದು ಹಾಲು ಉತ್ಪಾದನೆಗೆ ಪ್ರಮುಖ ಕಾರಣವಾಗಿದೆ.