– ಸರ್ಕಾರ ತನಿಖೆ ನಡೆಸದಿದ್ದರೆ ಸಿಬಿಐಗೆ ಒಪ್ಪಿಸಲಿ
ಬೆಂಗಳೂರು: ಧರ್ಮಸ್ಥಳದ(Dharmasthala Conspiracy) ವಿರುದ್ಧ ನಡೆದಿದೆ ಎನ್ನಲಾದ ಷಡ್ಯಂತ್ರ ಪ್ರಕರಣದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ (Prakash Raj) ಅವರ ಪಾತ್ರದ ಬಗ್ಗೆ ಸಮಗ್ರ ತನಿಖೆಯಾಗಬೇಕು ಮತ್ತು ಪ್ರಕರಣದ ಎಸ್‌ಐಟಿ (SIT) ಮಧ್ಯಂತರ ವರದಿಯನ್ನು ಸರ್ಕಾರ ತಕ್ಷಣವೇ ಬಹಿರಂಗಪಡಿಸಬೇಕು ಎಂದು ಪುಣ್ಯಕ್ಷೇತ್ರ ಸಂರಕ್ಷಣಾ ಸಮಿತಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಜಂಟಿಯಾಗಿ ಮಾತನಾಡಿದ ಪ್ರಮುಖರಾದ ಚಕ್ರವರ್ತಿ ಸೂಲಿಬೆಲೆ (Chakravarti Sulibele), ವಸಂತ್ ಗಿಳಿಯಾರ್, ವಿಕಾಸ್ ಪುತ್ತೂರು ಧರ್ಮಸ್ಥಳದ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಆರಂಭದಲ್ಲಿ ಇದೊಂದು ಷಡ್ಯಂತ್ರ ಎಂದು ನಾವು ಧ್ವನಿ ಎತ್ತಿದಾಗ ನಮ್ಮ ಚಾರಿತ್ರ್ಯ ಹನನಕ್ಕೆ ಯತ್ನಿಸಲಾಯಿತು. ಈಗ ಚಿನ್ನಯ್ಯ ತನಗೆ ದುಡ್ಡಿನ ಆಮಿಷ ಒಡ್ಡಿದ್ದರಿಂದ ಹೀಗೆ ಮಾಡಿದೆ ಎಂದು ಕೋರ್ಟ್ ಮುಂದೆ ಹೇಳಿದ್ದಾನೆ. ಕೋಟ್ಯಂತರ ರೂಪಾಯಿ ತೆರಿಗೆ ಹಣವನ್ನು ಈ ತನಿಖೆಗೆ ವ್ಯಯಿಸಲಾಗಿದೆ. ಇದು ಕೇವಲ ಸರ್ಕಾರಕ್ಕೆ ಮಾಡಿದ ಮೋಸವಲ್ಲ, ರಾಜ್ಯದ 7 ಕೋಟಿ ಜನರಿಗೆ ಮಾಡಿದ ದ್ರೋಹ ಎಂದು ಆಕ್ರೋಶ ಹೊರಹಾಕಿದರು.
ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರ ಜೊತೆ ನಾನು ಮಾತನಾಡಿದ್ದೇನೆ. ಅವರು ಚಿನ್ನಯ್ಯನ ಜೊತೆ ಮಾತನಾಡದಂತೆ ನನಗೆ ಸೂಚಿಸಿದ್ದರು ಎಂದು ಪ್ರಕಾಶ್ ರಾಜ್ ಅವರೇ ಹೇಳಿದ್ದಾರೆ. ಸಾಕ್ಷಿಯಾಗಿದ್ದ ಚಿನ್ನಯ್ಯನ ಜೊತೆ ಮಾತನಾಡದಂತೆ ಹೇಳಲು ಹೇಗೆ ಸಾಧ್ಯ? ಪ್ರಕಾಶ್ ರಾಜ್ ಅವರ ಈ ಹೇಳಿಕೆಯಿಂದ ಹೊಸ ಅನುಮಾನ ವ್ಯಕ್ತವಾಗಿದೆ. ಎಸ್‌ಐಟಿ ಮಧ್ಯಂತರ ವರದಿಯಲ್ಲಿ ಪ್ರಕಾಶ್ ರಾಜ್ ಫೋನ್ ಕರೆಗಳ ವಿವರ ಉಲ್ಲೇಖವಾಗಿದೆಯೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಸೂಲಿಬೆಲೆ ಪ್ರಶ್ನಿಸಿದರು. ಇದನ್ನೂ ಓದಿ: Dharmasthala Case | ನಾನು ಚಿನ್ನಯ್ಯನ ಜೊತೆ ಮಾತನಾಡಿದ್ದು ನಿಜ: ಪ್ರಕಾಶ್ ರಾಜ್
ರಾಜ್ಯ ಸರ್ಕಾರಕ್ಕೆ ತಾಕತ್ತಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಸಲಿ, ಇಲ್ಲದಿದ್ದರೆ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಿ. ದೇವರ ಮೇಲೆ ನಂಬಿಕೆಯಿಡುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಕ್ಷಣವೇ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು. ಶೀಘ್ರದಲ್ಲೇ ಈ ಕುರಿತು ಬೃಹತ್ ‘ಜನಾಗ್ರಹ ಸಭೆ’ ನಡೆಸಲಿದ್ದೇವೆ. ಒಂದು ವೇಳೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ ಕೇಂದ್ರ ಸರ್ಕಾರಕ್ಕೆ ನಿಯೋಗ ಕೊಂಡೊಯ್ಯಲಾಗುವುದು ಎಂದು ಪುಣ್ಯ ಭೂಮಿ ಸಮಿತಿ ನಾಯಕರು ಎಚ್ಚರಿಸಿದ್ದಾರೆ.
ವಸಂತ್ ಗಿಳಿಯಾರ್ (Vasanth Giliyar) ಮಾತನಾಡಿ, ಪ್ರಕಾಶ್ ರಾಜ್ ಅವರ ದುಷ್ಕೃತ್ಯಕ್ಕೆ ಪ್ರೇರಣೆ ನೀಡಿರುವುದು ಅವರ ಹೇಳಿಕೆಗಳಿಂದಲೇ ಸಾಬೀತಾಗಿದೆ. ಈ ಪ್ರಕರಣ ಆರಂಭವಾದಾಗ ಅವರು ತಳ್ಳಿಹಾಕಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಎಸ್‌ಐಟಿ ರಚನೆಗೂ ಮುನ್ನವೇ ತನಿಖಾಧಿಕಾರಿ ಪ್ರಣವ್ ಮೊಹಂತಿ ಅವರಿಗೆ ಕರೆ ಮಾಡಿದ್ದಾಗಿ ಅವರೇ ಒಪ್ಪಿಕೊಂಡಿದ್ದಾರೆ. ಧರ್ಮಸ್ಥಳದ ಲಕ್ಷಾಂತರ ಭಕ್ತರ ನಂಬಿಕೆಗೆ ದ್ರೋಹ ಬಗೆದಿರುವ ಪ್ರಕಾಶ್ ರಾಜ್ ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನ ವರ್ತನೆಗಳ ಬಗ್ಗೆ ಮಾತನಾಡಿದ ಗಿಳಿಯಾರ್, ಚಿನ್ನಯ್ಯ ಗುಂಡಿ ಅಗೆಯುವಾಗಲೂ ಹೆಡ್‌ಫೋನ್ ಧರಿಸಿದ್ದ. ಅಂದರೆ ಆತನಿಗೆ ಹೆಡ್‌ಫೋನ್ ಮೂಲಕ ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗುತ್ತಿತ್ತು ಎಂಬುದು ಇದರಿಂದ ಸಾಬೀತಾಗುತ್ತದೆ. ಇದೇ ಕಾರಣಕ್ಕೆ ಆತ ಮಾಸ್ಕ್ ಧರಿಸಿದ್ದ ಎಂದರು. ಅಲ್ಲದೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮುಚ್ಚಿಟ್ಟಿರುವ ವರದಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊರಗೆ ತರುತ್ತಾರೆ ಎಂಬ ನಂಬಿಕೆ ನಮಗಿದೆ ಎಂದರು.
