Friday, 22nd March 2019

Recent News

ದೋಸ್ತಿ ಸರ್ಕಾರಕ್ಕೆ ಮತ್ತೊಂದು ಶಾಕ್- ಕಾಂಗ್ರೆಸ್ ಅತೃಪ್ತರ ಸಂಖ್ಯೆ ಏರಿಕೆ

ಬೆಂಗಳೂರು: ಕಾಂಗ್ರೆಸ್‍ನ ಮತ್ತೊಬ್ಬ ಶಾಸಕರು ಅತೃಪ್ತರ ಪಟ್ಟಿಗೆ ಸೇರಿದ್ದು, ಅತೃಪ್ತರ ಶಾಸಕರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಮೈತ್ರಿ ಸರ್ಕಾರ ನಾಯಕರ ನಿದ್ದೆಗೆಡಸಿದೆ.

ಹಿರೇಕೆರೂರು ಶಾಸಕ ಬಿಸಿ ಪಾಟೀಲ್ ಅವರು ನಿನ್ನೆ ರಾತ್ರಿಯೇ ಮುಂಬೈನ ರೆಸಾರ್ಟ್ ಗೆ ತೆರಳಿದ್ದಾರೆ. ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಶಾಸಕರಾದ ನಾಗೇಂದ್ರ ಹಾಗೂ ಮಹೇಶ್ ಕುಮಟಳ್ಳಿ ಗುಂಪನ್ನು ಬಿಸಿ ಪಾಟೀಲ್ ಸೇರಿದ್ದಾರೆ ಎಂದು ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬಿ.ಸಿ.ಪಾಟೀಲ್ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಸಚಿವ ಸಂಪುಟ ವಿಸ್ತರಣೆಗೂ ಮುನ್ನ ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪ್, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಂತ್ರಿ ಸ್ಥಾನದ ಆಕಾಂಕ್ಷೆಯನ್ನು ಬಿಚ್ಚಿಟ್ಟಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ಕೈತಪ್ಪಿತ್ತು. ಹೀಗಾಗಿ ಮದುವೆ ನೆಪ ಹೇಳಿ ಕಾಂಗ್ರೆಸ್ ನಾಯಕರಿಂದ ದೂರ ಉಳಿದಿದ್ದರು.

ಕಳೆದ ಬಾರಿಯ ಸಿಎಲ್‍ಪಿ ಸಭೆಗೆ ಬಂದಿದ್ದ ಬಿ.ಸಿ.ಪಾಟೀಲ್ ಅವರು, ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ. ಅಸಮಾಧಾನ ಇತ್ತು. ಆದರೆ ಈಗಿಲ್ಲ ಎಂದು ಹೇಳಿದ್ದರು. ಈಗ ಅವರು ದಿಢೀರ್ ಆಗಿ ಅತೃಪ್ತ ಶಾಸಕರನ್ನು ಸೇರಿದ್ದು, ಕಾಂಗ್ರೆಸ್ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಬಾರಿ ವಿಪ್ ಜಾರಿ ಮಾಡಿದರೂ ಅತೃಪ್ತ ಶಾಸಕರು ಕೈಗೆ ಸಿಗುತ್ತಿಲ್ಲ. ಶಾಸಕರು ಮಾತ್ರ ಹೊಸ ಹೊಸ ಕಾರಣ ಹೇಳುತ್ತಲೇ ಮೈತ್ರಿ ನಾಯಕರಿಂದ ದೂರ ಉಳಿಯುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *