ನವದೆಹಲಿ: ಪಂಚರಾಜಗಳ ವಿಧಾನಸಭೆ ಚುನಾವಣೆಯ (Assembly Election) ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಐದೂ ರಾಜ್ಯಗಳಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಅಭ್ಯರ್ಥಿಗಳಲ್ಲಿ ಬಹುತೇಕರು ಮುಸ್ಲಿಮರು ಎಂಬ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ.
ಅಸ್ಸಾಂನ (Assam) 126 ಶಾಸಕ ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆದ್ದಿದೆ. ಈ 19 ಮಂದಿಯಲ್ಲಿ 18 ಜನ ಮುಸ್ಲಿಂ ಅಭ್ಯರ್ಥಿಗಳು ಎಂಬುದು ಗಮನಾರ್ಹ. ಪಕ್ಷವು ಒಟ್ಟು 20 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಇಬ್ಬರು ಮಾತ್ರ ಪರಾಜಿತರಾಗಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ಪಕ್ಷವು ಕಣಕ್ಕಿಳಿಸಿದ 79 ಮುಸ್ಲಿಮೇತರ ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್‌ನ (Congress) ಮಿತ್ರಪಕ್ಷ ರೈಜೋರ್ ದಳ 2 ಸ್ಥಾನಗಳನ್ನು ಗೆದ್ದಿದೆ. ಆ ಪೈಕಿ ವಿಜೇತ ಅಭ್ಯರ್ಥಿಗಳಲ್ಲಿ ಒಬ್ಬರು ಮುಸ್ಲಿಂ ಎಂದು ತಿಳಿದುಬಂದಿದೆ. ಇದನ್ನೂ ಓದಿ:ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ದಳಪತಿಗೆ ಕಾಂಗ್ರೆಸ್ ಬೆಂಬಲ
ಕೇರಳದ (Kerala) 140 ಸ್ಥಾನಗಳ ಪೈಕಿ 35 ಮುಸ್ಲಿಂ ಅಭ್ಯರ್ಥಿಗಳು ವಿಜಯಶಾಲಿಗಳಾಗಿದ್ದಾರೆ. ಇವರಲ್ಲಿ 30 ಜನ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ನಿಂದ ಸ್ಪರ್ಧಿಸಿದ್ದರು. ಈ ಮಿತ್ರಕೂಟದಲ್ಲಿ 8 ಕಾಂಗ್ರೆಸ್ ಶಾಸಕರು ಮುಸ್ಲಿಮರು, ಉಳಿದ 22 ಶಾಸಕರು ಯುಡಿಎಫ್‌ನ ಮುಖ್ಯ ಮಿತ್ರಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ಗೆ ಸೇರಿದವರು.
ಬಂಗಾಳದ (West Bengal) ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್, ಮಾಲ್ಟಾ, ಉತ್ತರ ದಿನಾಜ್‌ಪುರನಲ್ಲಿ ಬಿಜೆಪಿ ಭರ್ಜರಿ ಪ್ರದರ್ಶನ ತೋರಿದೆ. 2021ರಲ್ಲಿ 3 ಜಿಲ್ಲೆಯ 43 ಕ್ಷೇತ್ರಗಳಲ್ಲಿ 8 ಸ್ಥಾನ ಗೆದ್ದಿದ್ದ ಬಿಜೆಪಿ ಬಲ ಈಗ 19ಕ್ಕೆ ಏರಿದೆ. 35 ಸ್ಥಾನ ಹೊಂದಿದ್ದ ಟಿಎಂಸಿ ಬಲ 22ಕ್ಕೆ ಕುಸಿದಿದೆ. ಮುಸ್ಲಿಂ ಮತಗಳ ವಿಭಜನೆ ಬಿಜೆಪಿಗೆ ನೆರವಾಗಿದೆ. ಇಲ್ಲಿ ಕಾಂಗ್ರೆಸ್ 2 ಸ್ಥಾನಗಳನ್ನು ಗೆದ್ದಿದೆ. ಇವರಿಬ್ಬರೂ ಮುಸ್ಲಿಮರಾಗಿದ್ದು, ಮುಸ್ಲಿಂ ಬಹುಸಂಖ್ಯಾತ ಕ್ಷೇತ್ರಗಳಿಂದಲೇ ಗೆದ್ದಿದ್ದಾರೆ. ಪಕ್ಷವು ರಾಜ್ಯದಲ್ಲಿ 63 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಟಿಎಂಸಿಗಿಂತ 47 ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.
ತಮಿಳುನಾಡಿನಲ್ಲಿ (Tamilnadu) ಕಾಂಗ್ರೆಸ್ ಇಬ್ಬರು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇವರಲ್ಲಿ ಒಬ್ಬರು ಗೆಲುವು ಸಾಧಿಸಿದ್ದಾರೆ. ಅಸ್ಸಾಂ ಮತ್ತು ಕೇರಳದಾದ್ಯಂತ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಿಂದ ಕಣಕ್ಕಿಳಿಸಲಾದ ಮುಸ್ಲಿಂ ಅಭ್ಯರ್ಥಿಗಳು ಶೇ.80ಕ್ಕಿಂತ ಹೆಚ್ಚಿನ ಗೆಲುವಿನ ದರ ದಾಖಲಿಸಿದ್ದಾರೆ.ಇದನ್ನೂ ಓದಿ: ವಿಜಯ್ ಜನಪ್ರಿಯತೆ ವೋಟ್ ಆಗಿ ಪರಿವರ್ತನೆ ಆಗುತ್ತೆ ಅಂದುಕೊಂಡಿರಲಿಲ್ಲ: ಪರಮೇಶ್ವರ್

