ಹಾವೇರಿ: ನಿಮಗೆ ಸ್ವಯಂ ಉದ್ಯೋಗ ಕೊಡುತ್ತೇವೆ. ಮನೆಯಲ್ಲಿ ಕುಳಿತು ಕೆಲಸ ಮಾಡಿದರೆ ಲಾಭ ಮಾಡಿಕೊಡ್ತೀವಿ, ಒಳ್ಳೆಯ ಸಂಬಳ ಇರುವ ಕೆಲಸ ಕೊಡಿಸ್ತೀವಿ ಅಂತ ನಂಬಿಸುವ ಐನಾತಿಗಳು ಈಗೀಗ ಹೆಚ್ಚಾಗಿದ್ದಾರೆ. ಬೆಳಗಾವಿ (Belagavi) ಶಿವಂ ಅಸೋಸಿಯೇಟ್ಸ್ ಮಾದರಿಯಲ್ಲೇ ಹಾವೇರಿಯಲ್ಲಿ (Haveri) ಜೋಡಿಯೊಂದು ಅಮಾಯಕರನ್ನು ನಂಬಿಸಿ 10 ಕೋಟಿ ರೂ. ಪಂಗನಾಮ ಹಾಕಿದ್ದಾರೆ. ಹಣ ಕಳೆದುಕೊಂಡವರು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಹೌದು, ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣವರ ಎಂಬಾತನ ವಂಚನೆ ಪ್ರಕರಣ ಮಾಸುವ ಬೆನ್ನಲ್ಲೇ ಹಾವೇರಿಯಲ್ಲೂ ಅಮಾಯಕರಿಗೆ ವಂಚಿಸಿರೋ ಘಟನೆ ಬೆಳಕಿಗೆ ಬಂದಿದೆ. ಹಾವೇರಿ ನಗರದ ಅಶ್ವಿನಿ ನಗರದಲ್ಲಿ `ಎಸ್‌ಎಲ್‌ವಿ ಮಹಿಳಾ ಮಾರ್ಟ್ ಅಂಡ್ ಮಾರ್ಕೆಟಿಂಗ್’ ಹೆಸರಲ್ಲಿ ಕಚೇರಿ ತೆರೆದು ವರ್ಕ್ ಫ್ರಮ್ ಹೋಮ್ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಸಾವಿರಾರು ಮಹಿಳೆಯರಿಗೆ ವಂಚಿಸಿದ್ದಾರೆ. ಹಣ ಕಳೆದುಕೊಂಡವರು ನ್ಯಾಯಕೊಡಿಸುವಂತೆ ಠಾಣೆ ಮೆಟ್ಟಿಲೇರಿದ್ದಾರೆ. ಕೋಟ್ಯಾಂತರ ರೂಪಾಯಿ ವಂಚಿಸಿದ ವಿನಾಯಕ ಅನ್ವೇರಿ ಹಾಗೂ ರಮ್ಯಾ ಎಂಬುವವರು ಕಚೇರಿಗೆ ಬೀಗ ಹಾಕಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು – ರೌಡಿಶೀಟರ್ ಕಾಲಿಗೆ ಗುಂಡೇಟು
ಇನ್ನೂ ಹಾವೇರಿಯ ಈ ಖತರ್ನಾಕ್ ಜೋಡಿ ಅಗರಬತ್ತಿ, ಮೇಣದ ಬತ್ತಿ, ಕರ್ಪೂರ, ಧೂಪ, ಇತರೆ ಸಾಮಗ್ರಿಗಳನ್ನು ಕೊಡುತ್ತೇವೆ. ನೀವು ಅದನ್ನು ಮನೆಯಲ್ಲೇ ಪ್ಯಾಕಿಂಗ್ ಮಾಡಿಕೊಡಬೇಕು. ರಾಜ್ಯದಲ್ಲಿ ನಮ್ಮದು 9 ಶಾಖೆಗಳಿವೆ, ಕನಿಷ್ಠ 25 ಸಾವಿರ ರೂ.ನಿಂದ 5 ಲಕ್ಷ ರೂ.ವರೆಗೆ ಡೆಪಾಸಿಟ್ ಇಡಬೇಕು. ಒಂದು ಲಕ್ಷಕ್ಕೆ ಪ್ರತಿ ತಿಂಗಳಿಗೆ 26 ಸಾವಿರ ರೂ. ಆದಾಯ ಕೊಡುತ್ತೇವೆ ಎಂದು ನಂಬಿಸಿ ಮೋಸ ಮಾಡಿದ್ದಾರೆ. ಅಂದಾಜು 10 ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ನೊಂದ ಮಹಿಳೆಯರು ಆರೋಪಿಸ್ತಿದ್ದಾರೆ.
ಒಟ್ಟಾರೆ ಸ್ವಯಂ ಉದ್ಯೋಗದ ಕನಸು ಕಂಡಿದ್ದ ನೂರಾರು ಮಹಿಳೆಯರ ಕನಸಿಗೆ ತಣ್ಣೀರೆರೆಚಿ ಆರೋಪಿಗಳು ನಾಪತ್ತೆಯಾಗಿದ್ದಾರೆ. ದಿಕ್ಕು ಕಾಣದ ನೊಂದ ಮಹಿಳೆಯರು ಕಳೆದುಕೊಂಡ ಹಣ ವಾಪಸ್ ಸಿಗುವಂತೆ ಮಾಡಿರೆಂದು ಕಣ್ಣೀರಿಡ್ತಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಿ ಪೊಲೀಸರು ನ್ಯಾಯಕೊಡಿಸುವ ಕೆಲಸ ಮಾಡಬೇಕಿದೆ.ಇದನ್ನೂ ಓದಿ: ಕಸಮುಕ್ತ ನಗರಕ್ಕೆ ಹೊಸ ಪ್ಲ್ಯಾನ್ – ಜಿಬಿಎಯಿಂದ ಇದೀಗ ಪರದೆ ಅಸ್ತ್ರ
