-59ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಸೋತರೂ ಜನಾದೇಶ ಒಪ್ಪಿಕೊಳ್ಳದ ಕಾಂಗ್ರೆಸ್
-ರಾಹುಲ್ ಗಾಂಧಿ ನಾಯಕತ್ವ ಬದಲಿಸದಿದ್ದರೆ ಪಕ್ಷಕ್ಕೆ ಭವಿಷ್ಯವಿಲ್ಲ
ಬೆಂಗಳೂರು: ಚುನಾವಣೆಯಲ್ಲಿ ಸೋತಾಗ ಕಾಂಗ್ರೆಸ್ (Congress) ನಾಯಕರಿಗೆ ಇವಿಎಂ (EVM) ಸರಿ ಇಲ್ಲ ಎಂದು ನೆನಪಾಗುತ್ತದೆ. ಗೆದ್ದಾಗ ಎಲ್ಲವೂ ಸರಿ ಇರುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ವ್ಯಂಗ್ಯವಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷವು ದೇಶಾದ್ಯಂತ ಪ್ರಜಾಪ್ರಭುತ್ವದ ರಕ್ಷಣೆ, ಸಂವಿಧಾನದ ಆಶಯಗಳ ಪಾಲನೆ ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದಾಗ ಪ್ರಜಾಪ್ರಭುತ್ವಕ್ಕೆ ಯಾವುದೇ ಅಪಾಯವಿರುವುದಿಲ್ಲ, ಸೋತಾಗ ಮಾತ್ರ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬಿಂಬಿಸುವ ದ್ವಂದ್ವ ನೀತಿ ಅನುಸರಿಸುತ್ತಿದೆ. 2014ರಿಂದ 2025ರವರೆಗೆ 59ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಸೋತಿರುವ ಕಾಂಗ್ರೆಸ್ಗೆ ಜನರ ತೀರ್ಪನ್ನು ಒಪ್ಪಿಕೊಳ್ಳುವ ಮನಸ್ಥಿತಿಯೇ ಇಲ್ಲ. ಚುನಾವಣೆಯಲ್ಲಿ ಸೋಲಲು ಚುನಾವಣಾ ಆಯೋಗವಾಗಲಿ, ಮತದಾರರ ಪಟ್ಟಿಯಾಗಲಿ ಕಾರಣವಲ್ಲ. ರಾಹುಲ್ ಗಾಂಧಿಯವರ ನಾಯಕತ್ವದ ಮೇಲಿನ ಜನರ ವಿಶ್ವಾಸದ ಕೊರತೆಯೇ ಪ್ರಮುಖ ಕಾರಣ ಎಂದು ಹೇಳಿದರು. ಇದನ್ನೂ ಓದಿ: 56ನೇ ವಯಸ್ಸಿನಲ್ಲಿ 2ನೇ ಮದ್ವೆ – ಹೊಸ ಜೀವನಕ್ಕೆ ಕಾಲಿಟ್ಟ ಜಮ್ಮು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ!
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಹಾಗೂ ಇತರ ರಾಜ್ಯಗಳಲ್ಲಿ ಚುನಾವಣೆ ನ್ಯಾಯಯುತವಾಗಿ ನಡೆದಿರುತ್ತದೆ. ಅಲ್ಲಿ ಜನಾದೇಶವನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಬೇರೆ ರಾಜ್ಯಗಳಲ್ಲಿ ಸೋತಾಗ ಮಾತ್ರ ಚುನಾವಣಾ ಪ್ರಕ್ರಿಯೆ, ಮತದಾರರ ಪಟ್ಟಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಆರೋಪ ಮಾಡುತ್ತಾರೆ. ಎಸ್ಐಆರ್ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನವೇ ಕಾಂಗ್ರೆಸ್ 59ಕ್ಕೂ ಹೆಚ್ಚು ವಿಧಾನಸಭಾ ಚುನಾವಣೆಗಳಲ್ಲಿ ಸೋತಿದೆ. ಎಸ್ಐಆರ್ ಬಂದ ನಂತರ ಸೋಲಿಗೆ ಅದನ್ನು ಕಾರಣವನ್ನಾಗಿ ಮಾಡುವುದು ಹಾಸ್ಯಾಸ್ಪದ. ಜನರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಮುಖ ನೋಡಿಕೊಂಡು ಮತ ಹಾಕುವ ಪರಿಸ್ಥಿತಿಯಲ್ಲಿ ಇಂದು ಜನರಿಲ್ಲ. ನಾಯಕತ್ವ ಬದಲಾವಣೆ ಮಾಡದಿದ್ದರೆ ಕಾಂಗ್ರೆಸ್ಗೆ ಗೆಲುವು ಸಾಧ್ಯವಿಲ್ಲ ಎಂದರು.ಇದನ್ನೂ ಓದಿ: 2027ರ ಜನವರಿ ಮೊದಲೆರಡು ವಾರಗಳಲ್ಲಿ ಜಿಪಂ, ತಾಪಂ ಚುನಾವಣೆ – ಈಶ್ವರ್ ಖಂಡ್ರೆ
ಎಸ್ಐಆರ್ ವಿರುದ್ಧ ಕಾಂಗ್ರೆಸ್ನ ಸುಳ್ಳು ಆರೋಪ:
ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಎಷ್ಟು ಮತಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿದೆ ಎಂಬುದಕ್ಕೆ ಯಾವುದೇ ಸ್ಪಷ್ಟ ಅಂಕಿ-ಅಂಶಗಳಿಲ್ಲ. ಕರ್ನಾಟಕದಲ್ಲಿ ನನ್ನ ಮತದಾನದ ಹಕ್ಕು ಕಳೆದುಹೋಗಿದೆ ಎಂದು ಎಷ್ಟು ಮಂದಿ ಅಧಿಕೃತವಾಗಿ ಮೇಲ್ಮನವಿ ಸಲ್ಲಿಸಿದ್ದಾರೆ? ಅಂತಹ ದೂರು ನೀಡಿದವರು ಯಾರು? ಮತದಾರರ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದ್ದರೆ ಅಥವಾ ಯಾವುದೇ ತಿದ್ದುಪಡಿ ಅಗತ್ಯವಿದ್ದರೆ ಮೇಲ್ಮನವಿ ಸಲ್ಲಿಸಲು ಈಗಲೂ ಅವಕಾಶವಿದೆ. ಆದರೆ ಕಾಂಗ್ರೆಸ್ ಪಕ್ಷ ಯಾವುದೇ ಆಧಾರವಿಲ್ಲದೆ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದರು.
ಎಸ್ಐಆರ್ ಪ್ರಕ್ರಿಯೆ ಮೂಲಕ ಮೃತ ಮತದಾರರು, ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಅವರೂ ಮತದಾರರ ಪಟ್ಟಿಯಲ್ಲಿರುವ ಇಂತಹ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ದೇಶದಲ್ಲಿ ಮೃತಪಟ್ಟವರ ಸಂಖ್ಯೆ ದೊಡ್ಡದಿದೆ. ಇಂತಹ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವುದು ಸಹಜ ಪ್ರಕ್ರಿಯೆ. ನಕಲಿ ಹಾಗೂ ದ್ವಿಮತದಾರರನ್ನು ಗುರುತಿಸಿ ತೆಗೆದುಹಾಕುವುದರಲ್ಲಿ ತಪ್ಪೇನಿದೆ? ಸತ್ತವರ ಹೆಸರುಗಳನ್ನು ಪಟ್ಟಿಯಲ್ಲಿ ಹಾಗೆಯೇ ಉಳಿಸಬೇಕೇ? ನಕಲಿ ಮತದಾರರಿಗೆ ಅವಕಾಶ ನೀಡಬೇಕೇ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ನ.1ರ ಇಂಡಿ ಒಕ್ಕೂಟದ ರ್ಯಾಲಿಗೆ ಬಿಗಿ ಭದ್ರತೆ – 200 ಸಿಸಿಟಿವಿ, ಕಂಟ್ರೋಲ್ ರೂಮ್, ಅರೆಸೇನಾಪಡೆಗಳ ನಿಯೋಜನೆ
ಕರ್ನಾಟಕದಲ್ಲಿಯೂ ಸುಮಾರು 24.17 ಲಕ್ಷ ಮೃತಪಟ್ಟ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಸುಮಾರು 7.14 ಲಕ್ಷ ನಕಲಿ ಮತದಾರರ ನೋಂದಣಿಗಳನ್ನು ಪತ್ತೆಹಚ್ಚಿ ತೆಗೆದುಹಾಕಲಾಗಿದೆ. ಇಂತಹ ಕ್ರಮಗಳನ್ನು ಸ್ವಾಗತಿಸಬೇಕೇ ಹೊರತು ವಿರೋಧಿಸುವುದಲ್ಲ. ಭಾರತದ ರಾಷ್ಟ್ರಪತಿಗೂ ಒಂದು ಮತ, ಸಾಮಾನ್ಯ ಪ್ರಜೆಗೂ ಒಂದು ಮತ ಎಂಬುದು ಸಂವಿಧಾನದ ಆಶಯ. ಒಬ್ಬ ವ್ಯಕ್ತಿಗೆ ಎರಡು ಕಡೆ ಮತದಾನದ ಹಕ್ಕು ಇರಬಾರದು. ಈ ಅಕ್ರಮಗಳನ್ನು ತಡೆಯುವುದಕ್ಕಾಗಿಯೇ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ ಎಂದರು.
ಬೆಂಗಳೂರಿನ ಮತದಾರರ ಪಟ್ಟಿಯಲ್ಲಿ ಸಮಸ್ಯೆ:
ಬೆಂಗಳೂರು ನಗರದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಮತದಾನದ ಪ್ರಮಾಣ ಸರಾಸರಿ ಶೇ.45ರಿಂದ 48ರ ಗಡಿಯನ್ನು ದಾಟಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಶೇ.80ರಿಂದ 90ರಷ್ಟು ಮತದಾನವಾಗುತ್ತದೆ. ಬೆಂಗಳೂರಿನಲ್ಲಿ ಮತದಾನದ ಪ್ರಮಾಣ ಕಡಿಮೆ ಇರುವುದಕ್ಕೆ ಹಲವು ಕಾರಣಗಳಿವೆ ಎಂದು ಈ ಹಿಂದೆ ಹೇಳಲಾಗುತ್ತಿತ್ತು. ಈಗ ಮತದಾರರ ಪಟ್ಟಿಯಲ್ಲಿದ್ದ ಲೋಪಗಳೂ ಬೆಳಕಿಗೆ ಬರುತ್ತಿವೆ. ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಮತದಾರರ ಪಟ್ಟಿಯಲ್ಲಿ ಸುಮಾರು ಒಂದು ಲಕ್ಷ ಮತದಾರರಿದ್ದಾರೆ. ಬೆಂಗಳೂರಿನಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದು ನೆಲೆಸಿರುವ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಅನೇಕರು ತಮ್ಮ ಸ್ವಂತ ಊರುಗಳಲ್ಲಿ ಮತದಾನದ ಹಕ್ಕನ್ನು ಉಳಿಸಿಕೊಂಡು, ಬೆಂಗಳೂರಿನಲ್ಲಿಯೂ ಹೆಸರು ಹೊಂದಿರುವ ಸಾಧ್ಯತೆಯಿದೆ. ಕೆಲವರು ತಮ್ಮ ಸ್ವಂತ ಊರನ್ನೇ ಮತದಾನದ ಕೇಂದ್ರವಾಗಿ ಆಯ್ಕೆ ಮಾಡಿಕೊಂಡಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನಗತ್ಯ ಹೆಸರುಗಳನ್ನು ತೆಗೆದುಹಾಕುವುದು ತಪ್ಪೇ? ಒಬ್ಬ ವ್ಯಕ್ತಿಗೆ ಒಂದೇ ಮತ ಇರಬೇಕು ಎಂಬ ಸಂವಿಧಾನದ ಆಶಯವನ್ನು ಜಾರಿಗೊಳಿಸುವುದು ಚುನಾವಣಾ ಆಯೋಗದ ಕರ್ತವ್ಯ ಎಂದರು.ಇದನ್ನೂ ಓದಿ: ಕುಮಾರಸ್ವಾಮಿ ಊಸರವಳ್ಳಿ ರಾಜಕಾರಣ ಬಿಡಲಿ: ಹೆಚ್ಡಿಕೆಗೆ ಬಾಲಕೃಷ್ಣ ಟಾಂಗ್
ಬ್ಯಾಲೆಟ್ ಚುನಾವಣೆಯಲ್ಲೂ ಕಾಂಗ್ರೆಸ್ಗೆ ಸೋಲು:
ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಗಳಲ್ಲಿ ಎನ್ಡಿಎ ನಾಲ್ಕೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಚುನಾವಣೆಗಳು ಬ್ಯಾಲೆಟ್ ಪೇಪರ್ ಮೂಲಕ ನಡೆದಿವೆ. ಒಂದು ವೇಳೆ ಕಾಂಗ್ರೆಸ್ ಹೇಳುವಂತೆ ಇವಿಎಂನಲ್ಲಿ ಅಕ್ರಮಗಳಾಗುತ್ತಿದ್ದರೆ, ಬ್ಯಾಲೆಟ್ ಮೂಲಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಬೇಕಿತ್ತಲ್ಲವೇ? ಈ ಚುನಾವಣೆಗಳಲ್ಲಿ ಎರಡು ಸ್ಥಾನಗಳನ್ನು ನಾವು ಗೆಲ್ಲುತ್ತೇವೆ, ಉಳಿದ ಎರಡು ಸ್ಥಾನಗಳನ್ನು ಬಿಜೆಪಿಯವರು ಗೆಲ್ಲಲಿ ಎಂದು ಕಾಂಗ್ರೆಸ್ ನಾಯಕರೇ ಮೊದಲೇ ಹೇಳಿದ್ದರು. ಈಗ ಫಲಿತಾಂಶ ಬಂದ ಮೇಲೆ ಏನು ಹೇಳುತ್ತಾರೆ? ಬ್ಯಾಲೆಟ್ ಪೇಪರ್ನಲ್ಲಿಯೂ ಕಾಂಗ್ರೆಸ್ಗೆ ಸೋಲಾಗಿದೆ. ಕಾಂಗ್ರೆಸ್ಗೆ ಈಗ ಬ್ಯಾಲೆಟ್ನಲ್ಲೇ ಬಲವಾದ ಏಟು ಬಿದ್ದಿದೆ ಎಂದು ವ್ಯಂಗ್ಯವಾಡಿದರು.
ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂ ಸರಿಯಿಲ್ಲ, ಎಸ್ಐಆರ್ ಸರಿಯಿಲ್ಲ, ಮತದಾರರ ಪಟ್ಟಿ ಸರಿಯಿಲ್ಲ ಎಂಬ ಆರೋಪ ಮಾಡುವುದು ಕಾಂಗ್ರೆಸ್ನ ಚಾಳಿಯಾಗಿದೆ. ಗೆದ್ದಾಗ ಎಲ್ಲವೂ ಸರಿಯಾಗಿರುತ್ತದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸುವಂತೆ ಸಲಹೆ ನೀಡುತ್ತಿದ್ದಾರೆ. ನಮಗೆ ಸಲಹೆ ನೀಡುವ ಮೊದಲು ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ವಿಧಾನಸಭೆಗಳನ್ನು ವಿಸರ್ಜಿಸಿ ಚುನಾವಣೆ ಎದುರಿಸಲಿ. ಅಲ್ಲಿ ಗೆದ್ದು ತೋರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣೆ ನಡೆಸುವಂತೆ ಸಲಹೆ ನೀಡಲಿ. ಗೆದ್ದಾಗ ಚುನಾವಣೆ ಬೇಡ, ಸೋತಾಗ ಮಾತ್ರ ಚುನಾವಣಾ ವ್ಯವಸ್ಥೆ ಸರಿಯಿಲ್ಲ ಎನ್ನುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.ಇದನ್ನೂ ಓದಿ: ಪಂಜಾಬ್ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ AAP – ಸಿಎಂ ಭಗವಂತ್ ಮನ್ಗೆ ಧುರಿಯಿಂದ ಟಿಕೆಟ್
ಅರಾಜಕತೆ ಸೃಷ್ಟಿಸುವ ಬೆದರಿಕೆಗಳಿಗೆ ಭಾರತದಲ್ಲಿ ಅವಕಾಶವಿಲ್ಲ:
ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ನಡೆಸುವುದು ಪ್ರತಿಯೊಬ್ಬರ ಹಕ್ಕು. ಬಿಜೆಪಿ ಕೂಡ ಹೋರಾಟಗಳನ್ನು ನಡೆಸಿದೆ. ಕಾಂಗ್ರೆಸ್ ಕೂಡ ಹೋರಾಟ ಮಾಡಬಹುದು. ಆದರೆ ನೇಪಾಳ ಮತ್ತು ಬಾಂಗ್ಲಾದೇಶದ ಮಾದರಿಯಲ್ಲಿ ದೊಂಬಿ, ಗಲಭೆಗಳನ್ನು ಸೃಷ್ಟಿಸುತ್ತೇವೆ ಎಂದು ಬೆದರಿಕೆ ಹಾಕುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿದೆ. ಇಂತಹ ಅರಾಜಕತೆಯ ಪ್ರಯತ್ನಗಳಿಗೆ ದೇಶದ ಜನರು ಎಂದಿಗೂ ಬೆಂಬಲ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಇಂದು ತನ್ನದೇ ಆದ ರಾಜಕೀಯ ಅಜೆಂಡಾ ಮತ್ತು ಸ್ವಂತಿಕೆ ಉಳಿದಿಲ್ಲ. ಅಮೆರಿಕದ ಫಂಡಿಂಗ್ ಸೇರಿದಂತೆ ಹೊರಗಿನ ಶಕ್ತಿಗಳ ಪ್ರಭಾವದ ಕುರಿತು ಹಲವು ಆರೋಪಗಳು ಕೇಳಿಬರುತ್ತಿವೆ. 120 ವರ್ಷಗಳ ಇತಿಹಾಸವಿದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಇಂದು ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಆದರೆ ಇಂದು ಕಾಂಗ್ರೆಸ್ ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ದೇಶದ ಜನರೇ ನೋಡುತ್ತಿದ್ದಾರೆ ಎಂದರು.ಇದನ್ನೂ ಓದಿ: Kalaburagi | ಬೀದಿ ನಾಯಿ ದಾಳಿಗೆ 4 ವರ್ಷದ ಬಾಲಕ ಬಲಿ
ಪ್ರಧಾನಮಂತ್ರಿ ವಿರುದ್ಧ ವೈಯಕ್ತಿಕ ಟೀಕೆ:
ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ಕಾಂಗ್ರೆಸ್ ನಾಯಕರು ವೈಯಕ್ತಿಕ ನಿಂದನೆಗೆ ಇಳಿದಿದ್ದಾರೆ. ಹಿಂದೆ ಮೋದಿಯವರನ್ನು ಚಾಯ್ವಾಲಾ ಎಂದು ಹೀಯಾಳಿಸಿದರು, ಪಕೋಡಾ ವಿಚಾರದಲ್ಲಿ ಟೀಕಿಸಿದರು. ಈಗ ಅವರ ತಂದೆಯವರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರ ಹತಾಶ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಧಾನಮಂತ್ರಿಯವರನ್ನು ಆಯ್ಕೆ ಮಾಡಿರುವುದು ಕಾಂಗ್ರೆಸ್ ಪಕ್ಷವಲ್ಲ, ದೇಶದ ಜನರು ತಮ್ಮ ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ. ಅದೇ ರೀತಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರೂ ಜನರ ಮತಗಳಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ಜನರ ಮತದಿಂದ ಆಯ್ಕೆಯಾದ ಪ್ರಧಾನಮಂತ್ರಿಯವರಿಗೂ ಗೌರವ ನೀಡಬೇಕು. ರಾಜಕೀಯ ವಿರೋಧದ ಹೆಸರಿನಲ್ಲಿ ವೈಯಕ್ತಿಕ ನಿಂದನೆ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸಾಂವಿಧಾನಿಕ ಸಂಸ್ಥೆಗಳ ಮೇಲೆ ಕಾಂಗ್ರೆಸ್ಗೆ ನಂಬಿಕೆಯಿಲ್ಲ:
ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ನವೆಂಬರ್ 1ರಂದು ಪ್ರತಿಭಟನೆ ನಡೆಸುವ ವಿಚಾರದಲ್ಲಿಯೂ ವಿವಿಧ ಸಂಘಟನೆಗಳು ಹಾಗೂ ಸಮುದಾಯಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ನಿರ್ದಿಷ್ಟ ದಿನಾಂಕದಂದು ಪ್ರತಿಭಟನೆ ನಡೆಸಬೇಡಿ ಎಂದು ಮನವಿ ಮಾಡಿದರೂ ಕಾಂಗ್ರೆಸ್ ಹಠಮಾರಿತನ ಪ್ರದರ್ಶಿಸುತ್ತಿದೆ. ಇದರಿಂದ ಪ್ರಜಾಪ್ರಭುತ್ವದ ಮೇಲೆ ಕಾಂಗ್ರೆಸ್ಗೆ ನಂಬಿಕೆ ಕಳೆದುಹೋಗಿರುವುದು ಸ್ಪಷ್ಟವಾಗುತ್ತದೆ. ದೇಶದಲ್ಲಿ ಯಾವುದೇ ಸಮಸ್ಯೆ ಎದುರಾದರೆ ಅದಕ್ಕೆ ಪರಿಹಾರ ಕಂಡುಕೊಳ್ಳಲು ನ್ಯಾಯಾಲಯಗಳಿವೆ. ಆದರೆ ಕಾಂಗ್ರೆಸ್ಗೆ ಆದಾಯ ತೆರಿಗೆ ಇಲಾಖೆ ಸರಿಯಿಲ್ಲ, ಜಾರಿ ನಿರ್ದೇಶನಾಲಯ ಸರಿಯಿಲ್ಲ, ಸಿಬಿಐ ಸರಿಯಿಲ್ಲ, ಚುನಾವಣಾ ಆಯೋಗ ಸರಿಯಿಲ್ಲ, ಕೊನೆಗೆ ನ್ಯಾಯಾಲಯಗಳೂ ಸರಿಯಿಲ್ಲ. ಹಾಗಾದರೆ ಈ ದೇಶದ ಯಾವ ಸಾಂವಿಧಾನಿಕ ಸಂಸ್ಥೆಗಳು ಕಾಂಗ್ರೆಸ್ ದೃಷ್ಟಿಯಲ್ಲಿ ಸರಿಯಾಗಿವೆ? ತಮ್ಮ ಸೋಲಿಗೆ ಪ್ರತಿಯೊಂದು ಸಂಸ್ಥೆಯನ್ನೂ ಹೊಣೆ ಮಾಡುವ ಬದಲು ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಲಿ ಎಂದು ಕಿಡಿಕಾರಿದರು.ಇದನ್ನೂ ಓದಿ: IAF ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ಇತಿಹಾಸ ಕಾಂಗ್ರೆಸ್ ಪಕ್ಷಕ್ಕಿದೆ. ವಿರೋಧ ಪಕ್ಷದ ನಾಯಕರು, ನ್ಯಾಯಾಧೀಶರು ಮತ್ತು ಪತ್ರಕರ್ತರನ್ನು ಜೈಲಿಗೆ ಹಾಕಿದ ಇತಿಹಾಸ ನಿಮ್ಮದಾಗಿದೆ. ಅಂತಹ ಹಿನ್ನೆಲೆಯುಳ್ಳ ಕಾಂಗ್ರೆಸ್ನಿಂದ ನಾವು ಇಂದು ಪ್ರಜಾಪ್ರಭುತ್ವದ ಪಾಠ ಕಲಿಯಬೇಕೇ? 1975ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನೂ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಜೈಲು ವಾಸ ಅನುಭವಿಸಿದ್ದೇನೆ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದಾಗ ಜನರು ಅನುಭವಿಸುವ ನೋವು ಮತ್ತು ಸಂಕಷ್ಟಗಳ ಬಗ್ಗೆ ನನಗೆ ನೇರ ಅನುಭವವಿದೆ ಎಂದು ಹೇಳಿದರು.
ಇಂದು ದೇಶದ ಮುಂದೆ ಇರುವ ಪ್ರಮುಖ ಸಂಕಲ್ಪವೆಂದರೆ ಸಂವಿಧಾನವನ್ನು ರಕ್ಷಿಸುವುದು, ಜನರ ತೀರ್ಪಿಗೆ ಗೌರವ ನೀಡುವುದು, ಪ್ರಜಾಪ್ರಭುತ್ವವನ್ನು ಉಳಿಸುವುದು ಹಾಗೂ ದೇಶದ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವುದು. ಇದೇ ಉದ್ದೇಶದಿಂದ ಬಿಜೆಪಿ ದೇಶಾದ್ಯಂತ ಹಾಗೂ ಕರ್ನಾಟಕದಲ್ಲಿಯೂ ಜನಜಾಗೃತಿ ಅಭಿಯಾನ ನಡೆಸುತ್ತಿದೆ. ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕಲ್ಲ, ತನ್ನ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ನಡೆಯುತ್ತಿರುವ ಹೋರಾಟವಾಗಿದೆ. ಕಾಂಗ್ರೆಸ್ ಪಕ್ಷ ಇಂದು ಐಸಿಯುನಲ್ಲಿದೆ. ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎದೆ ಬಡಿದುಕೊಂಡು ಹೋರಾಟ ನಡೆಸುವ ಪರಿಸ್ಥಿತಿ ಬಂದಿದೆ. ಜನರ ವಿಶ್ವಾಸ ಕಳೆದುಕೊಂಡಿರುವ ಕಾಂಗ್ರೆಸ್ ಇಂತಹ ಪ್ರತಿಭಟನೆಗಳಿಂದ ತನ್ನ ರಾಜಕೀಯ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಎಲ್ಲಾ ವಿಚಾರಗಳನ್ನು ಇಂದು ರಾಜ್ಯದ ಜನತೆಯ ಮುಂದಿಡುತ್ತಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಐದೇ ದಿನಗಳಲ್ಲಿ ATM ದರೋಡೆ ಖದೀಮರು ಅರೆಸ್ಟ್ – ಸಿಸಿಟಿವಿ ದೃಶ್ಯಗಳ ಮೂಲಕ ಹೆಡೆಮುರಿ ಕಟ್ಟಿದ ಬೀದರ್ ಪೊಲೀಸರು
