ಚಂಡೀಗಢ: ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ (Aam Aadmi Party) ತನ್ನ ಮೊದಲ 40 ಅಭ್ಯರ್ಥಿಗಳ ಪಟ್ಟಿಯನ್ನು ಇಂದು (ಅ.31) ಬಿಡುಗಡೆ ಮಾಡಿದೆ.
ಮುಖ್ಯಮಂತ್ರಿ ಭಗವಂತ್ ಮನ್ (Bhagwant Mann) ಅವರನ್ನು ಅವರ ಈಗಿನ ಧೂರಿ ಕ್ಷೇತ್ರದಿಂದಲೇ ಕಣಕ್ಕಿಳಿಸಲಾಗಿದೆ. ಇನ್ನು ಜೈಲಿನಲ್ಲಿರುವ ಪಕ್ಷದ ನಾಯಕ ಸಂಜೀವ್ ಅರೋರಾ (Sanjeev Arora) ಅವರಿಗೆ ಲುಧಿಯಾನ ಪಶ್ಚಿಮ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. ಜಾರಿ ನಿರ್ದೇಶನಾಲಯದ (ಇಆ) ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಂಜೀವ್ ಅರೋರಾ ಅವರು ಪ್ರಸ್ತುತ ಗುರುಗ್ರಾಮದ ಭೋಂಡ್ಸಿ ಜೈಲಿನಲ್ಲಿದ್ದಾರೆ. ಇದನ್ನೂ ಓದಿ: IAF ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್
ಮೊದಲ ಪಟ್ಟಿಯಲ್ಲಿ ಘೋಷಿಸಲಾದ ಪ್ರಮುಖ ಅಭ್ಯರ್ಥಿಗಳಲ್ಲಿ ಕುಲ್ತಾರ್ ಸಿಂಗ್ ಸಂಧ್ವಾನ್ ಅವರನ್ನು ಕೋಟ್ಕಪುರ, ಕುಲ್ದೀಪ್ ಸಿಂಗ್ ಧಾಲಿವಾಲ್ ಅವರನ್ನು ಅಜ್ನಾಲಾ, ಬಲ್ಜಿಂದರ್ ಕೌರ್ ಅವರನ್ನು ತಲ್ವಂಡಿ ಸಾಬೊ, ಅಮನ್ಶೇರ್ ಸಿಂಗ್ ಶೇರಿ ಕಲ್ಸಿ ಅವರನ್ನು ಬಟಾಲಾ ಮತ್ತು ಲಾಭ್ ಸಿಂಗ್ ಉಗೋಕೆ ಅವರನ್ನು ಭದೌರ್ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
The Aam Aadmi Party hereby announces the following candidates for the Punjab Legislative Assembly Elections, 2027. https://t.co/dsbqLTNwLa
— AAP (@AamAadmiParty) October 31, 2026
ಮೊದಲ ಪಟ್ಟಿ ಬಿಡುಗಡೆಗೂ ಮುನ್ನ ಶುಕ್ರವಾರ (ಅ.30) ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಮುಖ್ಯಮಂತ್ರಿ ಭಗವಂತ್ ಮನ್ ಮತ್ತು ಪಂಜಾಬ್ ಉಸ್ತುವಾರಿ ಮನೀಶ್ ಸಿಸೋಡಿಯಾ ಭಾಗವಹಿಸಿದ್ದರು. ರಾಜ್ಯ ಘಟಕದ ಮುಖ್ಯಸ್ಥ ಅಮಾನ್ ಅರೋರಾ ಹಾಗೂ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ವರ್ಚುವಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಂಜಾಬ್ನ 117 ಸದಸ್ಯ ಬಲದ ವಿಧಾನಸಭೆಯ ಐದು ವರ್ಷಗಳ ಅಧಿಕಾರಾವಧಿಯು 2027ರ ಮಾರ್ಚ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ 2027ರ ಆರಂಭದಲ್ಲಿ, ಅಂದರೆ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದ್ದು, ಚುನಾವಣಾ ಆಯೋಗವು ಇನ್ನೂ ಅಧಿಕೃತ ದಿನಾಂಕಗಳನ್ನು ಪ್ರಕಟಿಸಿಲ್ಲ. ಸದ್ಯ ಈ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ ಒಟ್ಟು 95 ಶಾಸಕರನ್ನು ಹೊಂದಿದೆ.ಇದನ್ನೂ ಓದಿ: 6 ವರ್ಷದ ಮಗನೊಂದಿಗೆ 18ನೇ ಮಹಡಿಯಿಂದ ಜಿಗಿದು ಮಹಿಳೆ ಆತ್ಮಹತ್ಯೆ – ಪತಿಗೆ ಮರುಮದುವೆಯಾಗುವಂತೆ ಪತ್ರ
