ಬೆಂಗಳೂರು: ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳು 2027ರ ಜನವರಿ ಮೊದಲ ಅಥವಾ 2ನೇ ವಾರ ನಡೆಯಲಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಖಂಡ್ರೆ (Eshwar Khandre) ತಿಳಿಸಿದರು.
ಬೆಂಗಳೂರಿನಲ್ಲಿ (Bengaluru) ಮಾತಾಡಿದ ಈಶ್ವರ್ ಖಂಡ್ರೆ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕರಡು ಮೀಸಲು ಅಧಿಸೂಚನೆ ಹೊರಡಿಸಿದೆ. ಬರುವ ಜನವರಿಯೊಳಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳು ನಡೆದೇ ನಡೆಯುತ್ತವೆ ಎಂದರು.
ಅ.19ರ ವರೆಗೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು 2 ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿದ್ದು, ಅಧಿಕಾರಿಗಳು ನಿಯಮಾನುಸಾರ ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದರು.
ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ತರುವಾಯ ರಾಜ್ಯ ಚುನಾವಣೆ ಆಯೋಗ, ಕೇಂದ್ರ ಚುನಾವಣೆ ಆಯೋಗದಿಂದ ಮತದಾರರ ಪಟ್ಟಿ ಪಡೆದು ಅಥವಾ ತನ್ನಲ್ಲಿರುವ ಮತದಾರರ ಪಟ್ಟಿಯನ್ನೇ ಪರಿಷ್ಕರಿಸಿ ಚುನಾವಣೆ ನಡೆಸುವ ಕುರಿತಂತೆ ಕ್ರಮ ವಹಿಸಲಿದೆ. ಬಹುತೇಕ ಜನವರಿ ಮೊದಲ ಅಥವಾ 2ನೇ ವಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳು ನಡೆಯುತ್ತವೆ. ಈ ಚುನಾವಣೆಗಳ ತರುವಾಯ ಗ್ರಾಮ ಪಂಚಾಯತಿ ಚುನಾವಣೆಗಳು ನಡೆಯಲಿವೆ ಎಂದು ಮಾಹಿತಿ ನೀಡಿದರು.

