ಚಿಕ್ಕಮಗಳೂರು: ಕಾಡಾನೆಗಳನ್ನು (Elephant) ಹಾಸನ (Hassan) ಜಿಲ್ಲೆಯ ಬೇಲೂರು ಭಾಗದಿಂದ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಭಾಗಗಳಿಗೆ ಅಟ್ಟಿದ್ದಕ್ಕೆ ಶಾಸಕಿ ನಯನಾ ಮೋಟಮ್ಮ ಅವರು ತಮ್ಮದೇ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜೀನಾಮೆ ನೀಡಲು ವಿಧಾನಸೌಧದ ಸ್ಪೀಕರ್ ಕಚೇರಿಗೆ ಅವರು ಆಗಮಿಸಿದ್ದಾರೆ.
ನಾನು ಸ್ಪೀಕರ್ ಜೊತೆ ಮಾತನಾಡಿದ್ದೇನೆ ಎಂದು ರಾಜೀನಾಮೆ ಪತ್ರವನ್ನು ಸ್ಪೀಕರ್ ಆಪ್ತ ಕಾರ್ಯದರ್ಶಿ ಅಶೋಕ್ ಮಿರ್ಜಿಯವರಿಗೆ ಕೊಟ್ಟು ತೆರಳಲು ಅವರು ಮುಂದಾಗಿದ್ದಾರೆ. ಇದಕ್ಕೆ ಅಶೋಕ್ ಮಿರ್ಜಿಯವರು ನನ್ನ ಬಳಿ ಕೊಟ್ಟರೆ ಆಗಲ್ಲ. ಸ್ಪೀಕರ್ ಅವರ ನಿರ್ದೆಶನದಂತೆ ನಾನು ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಗೆ ಕಾಡಾನೆಗಳನ್ನು ಅಟ್ಟಿದ್ದಕ್ಕೆ ಆಕ್ರೋಶ – ಮೂವರು ಶಾಸಕರಿಂದ ರಾಜೀನಾಮೆ ಎಚ್ಚರಿಕೆ
ಈ ವೇಳೆ ಸ್ಪೀಕರ್ ಆಪ್ತ ಕಾರ್ಯದರ್ಶಿಯವರ ಕಚೇರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ಪೊನ್ನಣ್ಣ ಅವರು ಆಗಮಿಸಿ, ರಾಜೀನಾಮೆ ನೀಡದಂತೆ ಶಾಸಕಿಯ ಬಳಿ ಮನವಿ ಮಾಡಿದ್ದಾರೆ. ಪೊನ್ನಣ್ಣ ಅವರ ಮನವೊಲಿಕೆಗೂ ಶಾಸಕಿ ನಯನಾ ಮೋಟಮ್ಮ ಅವರು ನಿರ್ಧಾರ ಬದಲಿಸದೇ ಕುಳಿತಿದ್ದಾರೆ.
ಸ್ಪೀಕರ್ ಬಂದರೆ ಅವರ ಕೈಗೆ ರಾಜೀನಾಮೆ ಕೊಡುತ್ತೇನೆ ಎಂದು ಸ್ಪೀಕರ್ ಆಪ್ತ ಕಾರ್ಯದರ್ಶಿ ಬಳಿ ಹೇಳಿ ಕಚೇರಿಯಲ್ಲೇ ಕುಳಿತಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ಭಾಗದಿಂದ ಕಾಡಾನೆಗಳನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗಕ್ಕೆ ಅಟ್ಟಿದ್ದಕ್ಕೆ ನ.22 ರಂದು ಸರ್ಕಾರದ ವಿರುದ್ಧ ಸ್ಥಳೀಯ ಶಾಸಕರು ಅಸಮಾಧಾನ ಹೊರಹಾಕಿದ್ದರು. ಕಾಂಗ್ರೆಸ್ನ ಮೂವರು ಶಾಸಕರು ರಾಜೀನಾಮೆ ನೀಡುವುದಾಗಿ ಸಹ ಎಚ್ಚರಿಕೆ ನೀಡಿದ್ದರು.
ಚಿಕ್ಕಮಗಳೂರು ಶಾಸಕ ತಮ್ಮಯ್ಯ, ಮೂಡಿಗೆರೆ ಶಾಸಕಿ ನಯನ ಮೋಟಮ್ಮ, ಶೃಂಗೇರಿ ಶಾಸಕ ರಾಜೇಗೌಡ ಅವರು ರಾಜೀನಾಮೆ ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಬೇಲೂರಿನಿಂದ ಮೂಡಿಗೆರೆಯತ್ತ ಕಾಡಾನೆಗಳ ಸಂಚಾರ; ಸುತ್ತಮುತ್ತಲಿನ ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

