ನವದೆಹಲಿ: ಇಲ್ಲಿನ ರಾಮಲೀಲಾ ಮೈದಾನದಲ್ಲಿ ಇಂಡಿ ಒಕ್ಕೂಟ (INDIA) ಹಮ್ಮಿಕೊಂಡಿರುವ ‘ವೋಟ್ ಬಚಾವೋ, ದೇಶ್ ಬಚಾವೋ’ (ಮತ ಉಳಿಸಿ, ದೇಶ ಉಳಿಸಿ) ರ್ಯಾಲಿ ಹಿನ್ನೆಲೆ ದೆಹಲಿ ಪೊಲೀಸರು (Delhi Police) ಭಾರೀ ಭದ್ರತೆಯನ್ನ ನಿಯೋಜಿಸಿದ್ದಾರೆ.
ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಅಕ್ರಮ, ವೋಟ್ ಚೋರಿ ಹಾಗೂ ಸಿಇಸಿ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ವಿಪಕ್ಷಗಳ ಒಕ್ಕೂಟ ರ್ಯಾಲಿಯನ್ನ (INDIA Bloc Rally) ಹಮ್ಮಿಕೊಂಡಿದೆ.
ಇಂಡಿ ಒಕ್ಕೂಟದ ಎಲ್ಲಾ ವಿಪಕ್ಷ ನಾಯಕರು, ಲಕ್ಷಾಂತರ ಬೆಂಬಲಿಗರು ಬೃಹತ್ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆ ದೆಹಲಿ ಪೊಲೀಸರು ಭಾರೀ ಭದ್ರತೆಯನ್ನ ನಿಯೋಜಿಸಿದ್ದಾರೆ. ಪ್ರತಿಭಟನಾ ರ್ಯಾಲಿ ನಡೆಯುವ ಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಅರೆಸೇನಾ ಪಡೆ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ.
ವಾಹನ ನಿಲುಗಡೆಗೆ (ಪಾರ್ಕಿಂಗ್) ಮೀಸಲಿಟ್ಟ ಜಾಗವನ್ನೂ ಒಳಗೊಂಡಂತೆ, ಮೈದಾನದಲ್ಲಿ ಸುಮಾರು 1 ರಿಂದ 1.5 ಲಕ್ಷ ಜನರು ಸೇರಲು ಅವಕಾಶವಿದೆ. ಆದರೆ, ರ್ಯಾಲಿಯಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿಕೊಂಡಿರುವುದರಿಂದ, ಜನಸಂದಣಿ ನಿರ್ವಹಿಸುವ ಬಗ್ಗೆ ಅಧಿಕಾರಿಗಳು ಹೆಚ್ಚಿನ ನಿಗಾ ವಹಿಸಿದ್ದಾರೆ.
ಕಾರ್ಯಕ್ರಮದ ಸ್ಥಳದಲ್ಲಿ 2 ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯ ವೇದಿಕೆಯಲ್ಲಿ ವಿಪಕ್ಷದ ಹಿರಿಯ ನಾಯಕರು ಭಾಷಣ ಮಾಡಲಿದ್ದು, 2ನೇ ವೇದಿಕೆಯನ್ನು ಇತರ ನಾಯಕರಿಗಾಗಿ ಸಿದ್ಧಪಡಿಸಲಾಗಿದೆ. ವಿಐಪಿ (VIP) ನಾಯಕರು 1ನೇ ಗೇಟ್ ಮೂಲಕ ಪ್ರವೇಶಿಸಲಿದ್ದು, ಸಾರ್ವಜನಿಕರಿಗಾಗಿ ಇನ್ನೂ 5 ಪ್ರವೇಶ ದ್ವಾರಗಳನ್ನ ಕಲ್ಪಿಸಲಾಗಿದೆ.
ಭದ್ರತಾ ವ್ಯವಸ್ಥೆಯ ಭಾಗವಾಗಿ, ಇಡೀ ಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇರಿಸಲಾಗಿದೆ. ದೆಹಲಿ ಪೊಲೀಸರು ಸುಮಾರು 200 ಸಿಸಿಟಿವಿ ಕ್ಯಾಮೆರಾಗಳನ್ನ ಅಳವಡಿಸಿದ್ದು, ಮೈದಾನದ ಒಳಗೆ ಪ್ರತ್ಯೇಕ ಕಂಟ್ರೋಲ್ ರೂಮ್ ಅನ್ನು ಸ್ಥಾಪಿಸಿದ್ದಾರೆ. ಇದರ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳದಾದ್ಯಂತದ ಚಟುವಟಿಕೆಗಳನ್ನ ಮೇಲ್ವಿಚಾರಣೆ ಮಾಡಲಾಗುತ್ತದೆ. ಜೊತೆಗೆ ಎಐ ಆಧಾರಿತ ನಿಗಾ ವ್ಯವಸ್ಥೆ ಮತ್ತು ಮುಖ ಗುರುತಿಸುವ ತಂತ್ರಜ್ಞಾನವನ್ನೂ (facial recognition software) ಬಳಸಲಾಗುತ್ತಿದೆ. ಭದ್ರತಾ ಸಿಬ್ಬಂದಿ ಜನಸಂದಣಿಯ ಚಲನವಲನ, ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಹಾಗೂ ಇತರ ಸೂಕ್ಷ್ಮ ಪ್ರದೇಶಗಳ ಮೇಲೆ ತೀವ್ರ ನಿಗಾ ಇರಿಸಲಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನ ಕಾಪಾಡಲು, ಸೆಂಟ್ರಲ್ ಡಿಸ್ಟ್ರಿಕ್ಟ್ ಪೊಲೀಸ್ ಮತ್ತು ಇತರ ಜಿಲ್ಲಾ ಘಟಕಗಳ ಸಿಬ್ಬಂದಿಯೊಂದಿಗೆ ಅರೆಸೇನಾ ಪಡೆಗಳನ್ನು ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸುತ್ತಮುತ್ತ ನಿಯೋಜಿಸಲಾಗುವುದು. ಇಕ್ಕೂ ಮುನ್ನ ಹಿರಿಯ ಪೊಲೀಸ್ ಅಧಿಕಾರಿಗಳು ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಖರ್ಗೆ ಅವರ ನಿವಾಸದಲ್ಲಿ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

