ಬೆಂಗಳೂರು: ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದೇನೆ. ಮುಂದಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D.K.Shivakumar) ಎಂದು ಬ್ರೇಕ್‌ಫಾಸ್ಟ್ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ಘೋಷಿಸಿದರು.
ಸಿಎಂ ಸ್ಥಾನಕ್ಕೆ ರಾಜೀನಾಮೆಗೂ ಮುನ್ನ ಸಚಿವರ ಜೊತೆ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಸಿದರು. ಸಭೆಯಲ್ಲಿ ಸಿದ್ದರಾಮಯ್ಯ ರಾಜೀನಾಮೆ ಘೋಷಿಸುತ್ತಿದ್ದಂತೆ ಆಪ್ತ ಸಚಿವರು ಭಾವುಕರಾದರು. ಇದನ್ನೂ ಓದಿ: ಅಂದು, ಇಂದು, ಎಂದೆಂದೂ ಒಗ್ಗಟ್ಟೇ ನಮ್ಮ ಶಕ್ತಿ: ಕಾಂಗ್ರೆಸ್ ಟ್ವೀಟ್
ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಇಲ್ಲೇ ಇರಬೇಕು ಅಂದ್ಕೊಂಡು ಇದ್ದೀನಿ. ರಾಷ್ಟ್ರ ರಾಜಕಾರಣ ನನಗೆ ಇಷ್ಟ ಇಲ್ಲ, ನಾನು ಬೇಡ ಅಂದಿದ್ದೇನೆ. ರಾಜ್ಯಸಭೆ ಅಂತೇಳ್ತಿದ್ದಾರೆ, ಬೇಡ ಅಂದಿದ್ದೇನೆ. ಇಲ್ಲೇ ಇದ್ದುಕೊಂಡು ಸಹಕಾರ ಕೊಡ್ತೀನಿ. ಮುಂದೆ ಅಧಿಕಾರಕ್ಕೆ ತರಬೇಕು, ಗ್ಯಾರಂಟಿಗಳನ್ನ ಕಷ್ಟಪಟ್ಟು ಅನುಷ್ಠಾನ ಮಾಡಿದ್ದೀವಿ, ಮುಂದುವರಿಸೋಣ ಎಂದು ಸಚಿವರಿಗೆ ಸಲಹೆ ನೀಡಿದರು.

ಗ್ಯಾರಂಟಿ ಯೋಜನೆ ಉಳಿಸಿಕೊಂಡು ಆರ್ಥಿಕ ಶಿಸ್ತು ಕಾಪಾಡಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತಗೆದುಕೊಂಡು ಮುಂದುವರಿಯಿರಿ ಎಂದು ಸಂಪುಟ ಸಹೋದ್ಯೋಗಿಗಳಿಗೆ ಸಿಎಂ ಕಿವಿಮಾತು ಹೇಳಿದರು.
ಮುಂದಿನ ಸಿಎಂ ಡಿ.ಕೆ.ಶಿವಕುಮಾರ್. ಅವರಿಗೆ ಸಹಕಾರ ಕೊಡಿ. ಹೈಕಮಾಂಡ್ ಹೇಳಿದಂತೆ ನಡೆಯುತ್ತಿದ್ದೇನೆ. ನಾನು ರಾಜೀನಾಮೆಯನ್ನ ಕೊಡುತ್ತಿದ್ದೇನೆ. ಡಿಕೆಶಿ ಮುಖ್ಯಮಂತ್ರಿ ಅಂತ ಹೈಕಮಾಂಡ್ ಅವರು ಹೇಳಿ ಕಳಿಸಿದ್ದಾರೆ. ಹಾಗಾಗಿ ಎಲ್ಲರೂ ಡಿಕೆಶಿಗೆ ಸಹಕಾರ ನೀಡಿ. ಇನ್ನೂ ಎರಡು ವರ್ಷ ಸರ್ಕಾರ ಇರಲಿದೆ. ಎಲ್ಲರ ಸಹಕಾರದಿಂದ ಮತ್ತೆ ಅಧಿಕಾರಕ್ಕೆ ತರೋಣ. ಯಾರು ಅನ್ಯತಾ ಭಾವಿಸಬೇಡಿ. ನಾನು ನನ್ನ ನಿರ್ಧಾರವನ್ನ ತಿಳಿಸಿದ್ದೇನೆ. ಹೈಕಮಾಂಡ್ ಹೇಳಿದ್ದಕ್ಕೆ ನಾನು ಬದ್ಧನಾಗಿದ್ದೇನೆ. ಅವರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡುತ್ತಿದ್ದೇನೆ. ಯಾರು ಬೇರೆ ರೀತಿ ಅಪಾರ್ಥ ಮಾಡುವುದು ಬೇಡ. ಪಕ್ಷಕ್ಕಾಗಿ ಎಲ್ಲರ ಸಹಕಾರ ಇರಲಿ ಎಂದು ಸಚಿವರ ಮುಂದೆ ಸಿಎಂ ಮುಕ್ತ ಮನಸ್ಸಿನ ಮಾತುಗಳನ್ನಾಡಿದರು. ಇದನ್ನೂ ಓದಿ: ರಾಜೀನಾಮೆ ಬೆಂಗಳೂರಿನಲ್ಲಿ – ನೋವು ಕೇಳಿಸಿದ್ದು ಸಿದ್ದರಾಮನಹುಂಡಿಯಲ್ಲಿ!
ಸಿದ್ದರಾಮಯ್ಯ ಘೋಷಣೆಯಿಂದ ಹಲವು ಸಚಿವರ ಕಣ್ಣೀರಿಟ್ಟರು. ಕಣ್ಣೀರು ಹಾಕುತ್ತಲೇ ಕಾವೇರಿಯಿಂದ ನಾಲ್ಕೈದು ಸಚಿವರು ತೆರಳಿದರು.
ರಾಜ್ಯಸಭೆಗೆ ಸಿದ್ದರಾಮಯ್ಯ ಹೋಗಲ್ಲ
ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕುರಿತು ಮಾಧ್ಯಮದವರಿಗೆ ಸ್ಪಷ್ಟನೆ ನೀಡಿದ ಸಚಿವ ಹೆಚ್.ಕೆ.ಪಾಟೀಲ್, ಹೈಕಮಾಂಡ್ ನಿರ್ದೇಶನದಂತೆ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಮುಂದಿನ ಸಿಎಂ ಡಿ.ಕೆ.ಶಿವಕುಮಾರ್ ಅಂತ ಹೈಕಮಾಂಡ್ ಹೇಳಿದೆ. ಅದಕ್ಕೆ ಸಿದ್ದರಾಮಯ್ಯ ಅವರೂ ಒಪ್ಪಿಗೆ ಸೂಚಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ರಾಜಭವನಕ್ಕೆ ತೆರಳಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು. ಅಲ್ಲದೇ, ಸಿದ್ದರಾಮಯ್ಯ ಅವರು ರಾಜ್ಯಸಭೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
