Tuesday, 15th October 2019

Recent News

ಗ್ರಾಮ ವಾಸ್ತವ್ಯಕ್ಕಾಗಿ ಸಿಎಂ ರೈಲು, ಕೆಎಸ್‌ಆರ್‌ಟಿಸಿ ಯಾನ – ಸಿಎಂ ಸ್ವಾಗತಕ್ಕೆ ಸಜ್ಜಾಗಿದೆ ಚಂಡರಕಿ ಗ್ರಾಮ

ಬೆಂಗಳೂರು: ಲೋಕಸಭೆ ಚುನಾವಣಾ ಪ್ರಚಾರ, ಆಪರೇಷನ್ ಕಮಲ ರಗಳೆ ಹಾಗೂ ಮೈತ್ರಿ ಪಕ್ಷದ ಜೊತೆಗಿನ ರಾಜಕೀಯದಿಂದ ಹೊರ ಬಂದಂತೆ ಇರುವ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಯಾದಗಿರಿಗೆ ರೈಲು ಹತ್ತಿ ಪ್ರಯಾಣ ಆರಂಭಿಸಿದ್ದಾರೆ.

ಕಳೆದ ಗ್ರಾಮ ವಾಸ್ತವ್ಯಕ್ಕಿಂತಲೂ ಭಿನ್ನವಾಗಿ ಈ ಬಾರಿಯ ಕಾರ್ಯಕ್ರಮ ಇರುತ್ತೆ ಎಂದಿರುವ ಮುಖ್ಯಮಂತ್ರಿಗಳು, ಸಮಸ್ಯೆಗೆ ಕಿವಿಗೊಟ್ಟು, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡುವ ಯತ್ನಕ್ಕೆ ಮುಂದಾಗಿದ್ದಾರೆ.

ಪಬ್ಲಿಕ್ ಟಿವಿವೊಂದಿಗೆ ತಮ್ಮ ಗ್ರಾಮ ವಾಸ್ತವ್ಯದ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಅವರು, ಕಳೆದ ಬಾರಿಗಿಂತ ಈ ಬಾರಿಯ ಗ್ರಾಮ ವಾಸ್ತವ್ಯ ಭಿನ್ನವಾಗಿರುತ್ತದೆ. ಏಕೆಂದರೆ ಕಳೆದ ಬಾರಿ ಮುಖ್ಯಮಂತ್ರಿಯಾಗಿದ್ದ ವೇಳೆ ನನಗೆ ಹೆಚ್ಚಿನ ಸಮಯ ಲಭಿಸಲಿಲ್ಲ. ಅಲ್ಲದೇ ಈ ಬಾರಿ ನನಗೆ ಸುಮಾರು ವರ್ಷದ ಅನುಭವವಿದ್ದು, ಯಶಸ್ವಿಯಾಗಿ ಈ ಬಾರಿ ಕಾರ್ಯಕ್ರಮ ನಡೆಯಲಿದೆ ಎಂದರು.

ಇದೇ ವೇಳೆ ಪಬ್ಲಿಕ್ ಟಿವಿ ಗ್ರಾಮವಾಸ್ತವ್ಯದ ಬಗ್ಗೆ ಮಾಡಿರುವ ಸರಣಿ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿ, ಗ್ರಾಮ ವಾಸ್ತವ್ಯದ ಬಗ್ಗೆ ನಿಮ್ಮ  ವರದಿಗಳ ಅಂಶಗಳನ್ನು ನಾನು ಪರಿಗಣಿಸಿದ್ದೇನೆ. ಆ ಮೂಲಕ ಮುಂದಿನ ಯೋಜನೆಯಲ್ಲಿ ಅವುಗಳನ್ನು ಅಳವಡಿಕೊಂಡಿದ್ದೇನೆ ಎಂದರು.

ತಡವಾಗಿ ಕಾರ್ಯಕ್ರಮ ಆರಂಭವಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ 2ನೇ ಬಾರಿಗೆ ಶಸ್ತ್ರ ಚಿಕಿತ್ಸೆ ನಡೆದ ಬಳಿಕ ವಿಶ್ರಾಂತಿ ಪಡೆಯುವ ಅವಕಾಶ ಲಭಿಸಲಿಲ್ಲ. ಚುನಾವಣೆ, ಮೈತ್ರಿ ಸರ್ಕಾರ ಕಾರ್ಯಕ್ರಮದಲ್ಲಿ ವಿಶ್ರಾಂತಿ ಪಡೆಯುವ ಸಮಯ ಸಿಗಲಿಲ್ಲ. ಆದ್ದರಿಂದ ತಜ್ಞ ವೈದ್ಯರು ನನಗೆ ವಿಶ್ರಾಂತಿ ಪಡೆಯಲು ಸೂಚಿಸಿದ್ದರು. ಈಗ ಈ ಯೋಜನೆಗೆ ಜಾರಿಯಾಗಿದೆ ಮುಂದಿನ 4 ವರ್ಷಗಳ ಕಾಲ ಮುಂದುವರಿಯಲಿದೆ ಎಂದರು.

ಮುಂದಿನ ದಿನಗಳಲ್ಲಿ ತಿಂಗಳಿಗೆ 4 ದಿನಗಳ ಕಾಲ ಅಂದರೆ ವಾರಕ್ಕೆ 1 ದಿನ ಗ್ರಾಮ ವಾಸ್ತವ್ಯ ನಡೆಸುವ ಉದ್ದೇಶವಿದೆ. ಈ ಬಗ್ಗೆ ನನ್ನ ಹಿರಿಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಾರೆ. ವಾರದಲ್ಲಿ 1 ದಿನ ಮಾತ್ರ ವಿಶ್ರಾಂತಿ ಪಡೆದು, ಉಳಿದ ದಿನಗಳಲ್ಲಿ ಕಾರ್ಯ ನಿರ್ವಹಿಸುವ ಉದ್ದೇಶವಿದೆ ಎಂದರು. ಅಲ್ಲದೇ ನನಗೆ ಈ ಕಾರ್ಯಕ್ರಮ ಜನ ಸಾಮಾನ್ಯರ ಜೀವನ ತಿಳಿಯಲು ಸಹಕಾರಿ ಆಗಿತ್ತು. ಕಳೆದ ಗ್ರಾಮ ವಾಸ್ತವ್ಯದಲ್ಲೂ ನಾನು ಗ್ರಾಮಸ್ಥರ ನಿರೀಕ್ಷೆಯನ್ನು ಈಡೇಸಿದ್ದು, 20 ತಿಂಗಳು ಮಾತ್ರ ಅಧಿಕಾರದಲ್ಲಿ ಇದ್ದ ಕಾರಣ ಕೆಲ ಯೋಜನೆಗಳನ್ನು ಅನುಷ್ಟಾನ ತರಲು ಸಾಧ್ಯವಾಗಿಲ್ಲ. ಈ ಬಾರಿ ನನಗೆ ಆಡಳಿತ ಅನುಭವ ಜೊತೆಯಾಗಿದ್ದು, ಜನರ ನಿರೀಕ್ಷೆಗಳನ್ನು ಈಡೇರಿಸುವ ಕಾರ್ಯ ನಡೆಯಲಿದೆ ಎಂದರು.

ಇತ್ತ ಬೆಂಗಳೂರು ರೈಲು ನಿಲ್ದಾಣದಿಂದ ಕರ್ನಾಟಕ ಎಕ್ಸ್ ಪ್ರೆಸ್‍ನಲ್ಲಿ ಯಾದಗಿರಿಗೆ ಪಯಣಿಸಿರುವ ಸಿಎಂ ಅವರು, ಶುಕ್ರವಾರ ನಸುಕಿನ ಜಾವ 4 ಗಂಟೆಗೆ ತಲುಪಲಿದ್ದಾರೆ. ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಿಂದ ಹೊರಟ ರೈಲು ಹಿಂದೂಪುರ, ಪೆನಕೊಂಡ ಜಂಕ್ಷನ್, ಪುಟ್ಟಪರ್ತಿ, ಅನಂತಪುರ, ಗುಂತ್ಕಲ್ ಜಂಕ್ಷನ್, ಮಂತ್ರಾಲಯ. ರಾಯಚೂರು ಜಂಕ್ಷನ್ ಮಾರ್ಗವಾಗಿ ಯಾದಗಿರಿ ತಲುಪಲಿದೆ. ಯಾದಗಿರಿಯಿಂದ ಸಿಎಂ ಅವರು ಕೆಎಸ್‍ಆರ್ ಟಿಸಿ ಬಸ್‍ನಲ್ಲಿ ಅಲ್ಲಿಂದ ಗುರುಮಿಠಕಲ್‍ನ ಚಂಡರಕಿ ಗ್ರಾಮಕ್ಕೆ ಮುಖ್ಯಮಂತ್ರಿಗಳು ತೆರಳಲಿದ್ದಾರೆ.

ಚಂಡರಕಿ ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಜನತಾದರ್ಶನ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಬೇಕಾದ ಸಿದ್ಧತೆಗಳನ್ನು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜನತಾದರ್ಶನ ಮುಗಿದ ಬಳಿಕ ಸಂಜೆಯೇ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಶಾಲಾ ಶಿಕ್ಷಕರು, ಮಕ್ಕಳ ಜೊತೆ ಊಟ ಮಾಡಿ, ಶಾಲೆಯ ಕಾರ್ಯಾಲಯ ಕೊಠಡಿಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

Leave a Reply

Your email address will not be published. Required fields are marked *