– EV ಚಾರ್ಜಿಂಗ್ ಜಾಲ ವಿಸ್ತರಣೆಗೆ ಸರ್ಕಾರದ ಸೂಚನೆ
– ವಿದ್ಯುತ್ ಭದ್ರತೆಗೆ ಕಲ್ಲಿದ್ದಲು ಗಣಿಗಳ ಬಳಕೆ ಹೆಚ್ಚಿಸಿ: ಸಿಎಂ
ಬೆಂಗಳೂರು: ಎಲ್ ನಿನೊ (El Niño) ಪರಿಣಾಮದಿಂದ ಜಲವಿದ್ಯುತ್ ಉತ್ಪಾದನೆ ಕುಸಿಯುವ ಸಾಧ್ಯತೆ ಇರುವುದನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ತುರ್ತು ಕಾರ್ಯಯೋಜನೆ ರೂಪಿಸಬೇಕು. ಜೊತೆಗೆ ವಿದ್ಯುತ್ ಸಂಗ್ರಹಣೆ ಹಾಗೂ ಇತರೆ ಮೂಲಗಳಿಂದ ಉತ್ಪಾದನೆ ಹೆಚ್ಚಿಸಲು ತುರ್ತು ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(CM DK Shivakumar) ಸೂಚನೆ ನೀಡಿದ್ದಾರೆ.
ಮೊದಲ ಬಾರಿಗೆ ಇಂಧನ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಮುಖ್ಯಮಂತ್ರಿ, ಬರಗಾಲದ ಪರಿಸ್ಥಿತಿ ಎದುರಿಸಲು ಇಲಾಖೆ ಯಾವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ಸಾರ್ವಜನಿಕರಿಗೆ ಯಾವುದೇ ರೀತಿಯ ವಿದ್ಯುತ್ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇಂಧನ ಭದ್ರತೆಗಾಗಿ ಸರ್ಕಾರಕ್ಕೆ ಮೀಸಲಾದ ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ರಾಜ್ಯದಲ್ಲಿ ವಿದ್ಯುತ್ ಸಂಗ್ರಹಣೆಯ ಸ್ಥಿತಿ ಉತ್ತಮವಾಗಿದೆ. ಕಳೆದ ಮೂರು ವರ್ಷಗಳಿಂದ ವಿದ್ಯುತ್ ಕಡಿತವಿಲ್ಲದೆ ನಿರ್ವಹಣೆ ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ನವೀಕರಿಸಬಹುದಾದ ಇಂಧನದ ಸಮರ್ಥ ನಿರ್ವಹಣೆಗಾಗಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ (BESS) ಹಾಗೂ ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು (PSPs) ತ್ವರಿತವಾಗಿ ಜಾರಿಗೊಳಿಸಬೇಕು ಎಂದು ಸೂಚಿಸಿದರು.
ನಾವು ಐಟಿ ಕ್ಯಾಪಿಟಲ್ ಆಗಿದ್ದೇವೆ. ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲೂ ರಾಜ್ಯವನ್ನು ಮುಂಚೂಣಿಗೆ ತರಲು ಮುಂದಾಗಿದ್ದೇವೆ. ಹೀಗಾಗಿ ಡೇಟಾ ಸೆಂಟರ್‌ಗಳು, ಎಐ ಮೂಲಸೌಕರ್ಯ ಹಾಗೂ ಡಿಜಿಟಲ್ ಆರ್ಥಿಕತೆಯಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಿಂದ ಯಾವುದೇ ಹೆಚ್ಚುವರಿ ಹೊರೆ ಆಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಪಾವತಿಸಬೇಕಿರುವ 12,631 ಕೋಟಿ ರೂ. ಬಾಕಿಯನ್ನು ಶೀಘ್ರ ಪಾವತಿಸಬೇಕು ಅಥವಾ ಹಣಕಾಸು ಭದ್ರತೆ (Securitisation) ಮೂಲಕ ಪರಿಹರಿಸಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಮುಖ್ಯಮಂತ್ರಿಗೆ ಮನವಿ ಮಾಡಿದರು.
ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ವರ್ಷಕ್ಕೆ 22,000 ಕೋಟಿ ರೂ ಕೃಷಿ ವಿದ್ಯುತ್ ಸಹಾಯಧನ ನೀಡುತ್ತಿದೆ. ಹೀಗಾಗಿ ಫೀಡರ್ ಸೌರೀಕರಣ (Feeder Solarisation), ಇಂಧನ-ದಕ್ಷ ಪಂಪ್‌ಸೆಟ್‌ಗಳ ಬಳಕೆ ಹಾಗೂ ಡಿಮ್ಯಾಂಡ್ ಸೈಡ್ ಮ್ಯಾನೇಜ್‌ಮೆಂಟ್ (Demand Side Management) ಕಾರ್ಯಕ್ರಮಗಳನ್ನು ವೇಗಗೊಳಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
2035ರ ವೇಳೆಗೆ ರಾಜ್ಯದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 38 ಗಿಗಾವ್ಯಾಟ್ (GW) ತಲುಪುವ ನಿರೀಕ್ಷೆಯಿರುವುದರಿಂದ, ಅದಕ್ಕೆ ತಕ್ಕಂತೆ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಯೋಜನೆ ಹಾಗೂ ಅಗತ್ಯ ಹಣಕಾಸು ನಕ್ಷೆ (Financing Roadmap) ಸಿದ್ಧಪಡಿಸಬೇಕು ಎಂದರು.
ಮೀಟರ್‌ಗಳು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ನೆರವಿನೊಂದಿಗೆ ಪರಿಷ್ಕೃತ ವಿತರಣಾ ವಲಯ ಯೋಜನೆ (RDSS)ಯನ್ನು ವೇಗವಾಗಿ ಅನುಷ್ಠಾನಗೊಳಿಸಬೇಕು. ಸ್ಮಾರ್ಟ್ ಮೀಟರ್‌ಗಳನ್ನು ಪಾರದರ್ಶಕವಾಗಿ ಹಾಗೂ ನಿಗದಿತ ಸಮಯದಲ್ಲಿ ಅಳವಡಿಸಬೇಕು ಎಂದರು.ಇದನ್ನೂ ಓದಿ: ಒಂದೇ ಒಂದು ಗ್ರಾಂ ಚಿನ್ನ ಧರಿಸದೆ ಮದುವೆಯಾದ ವಧು; ನ್ಯೂ ಟ್ರೆಂಡ್ ವೆಡ್ಡಿಂಗ್‌ಗೆ ನೆಟ್ಟಿಗರು ಜೈ
ರಾಜ್ಯದಲ್ಲಿ ವೇಗವಾಗಿ ಹೆಚ್ಚುತ್ತಿರುವ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಮರ್ಪಕವಾಗಿ ನಿಭಾಯಿಸಲು ವಿದ್ಯುತ್ ಜಾಲದ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಬೇಕು. ವಿದ್ಯುತ್ ಪ್ರಸರಣ ಯೋಜನೆಗಳಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳು, ಭೂಸ್ವಾಧೀನ, ಹಕ್ಕುಮಾರ್ಗ (Right of Way) ಹಾಗೂ ಕಾನೂನುಬದ್ಧ ಅನುಮತಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಯೋಜನೆಗಳನ್ನು ವೇಗಗೊಳಿಸಬೇಕು ಎಂದು ಸೂಚಿಸಿದರು.ಇದನ್ನೂ ಓದಿ: ಮಲೆನಾಡಿನಲ್ಲಿ ಮಳೆಯ ಕೊರತೆ – ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗಿಲ್ಲ ಭದ್ರಾ ಡ್ಯಾಂ ನೀರು!
ಸಭೆಯ ಪ್ರಮುಖ ಅಂಶಗಳು
- ಎಸ್ಕಾಂಗಳ ಆರ್ಥಿಕ ಬಲವರ್ಧನೆಗಾಗಿ ದ್ರವ್ಯತೆ (Liquidity) ಸುಧಾರಣೆ ಹಾಗೂ ಸಾಲ ನಿರ್ವಹಣೆಯ ಮೂಲಕ ಹಣಕಾಸು ಸ್ಥಿರತೆ ಹೆಚ್ಚಿಸಬೇಕು.
- ಪ್ರಸರಣ ಜಾಲವನ್ನು ಬಲಪಡಿಸುವ ಮೂಲಕ ನವೀಕರಿಸಬಹುದಾದ ಇಂಧನದ ಅನಗತ್ಯ ನಿಯಂತ್ರಣ (Curtailment) ಸಮಸ್ಯೆ ನಿವಾರಿಸಬೇಕು.
- ಕಲ್ಲಿದ್ದಲು ಸರಬರಾಜು ಭದ್ರತೆಗಾಗಿ ಮೀಸಲು ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಗಣೆ ಹಾಗೂ ಸಂಗ್ರಹ ವ್ಯವಸ್ಥೆಯನ್ನು ಬಲಪಡಿಸಬೇಕು.
- ರಾಜ್ಯಾದ್ಯಂತ ವಿದ್ಯುತ್ ವಾಹನಗಳ (EV) ಚಾರ್ಜಿಂಗ್ ಮೂಲಸೌಕರ್ಯವನ್ನು ವೇಗವಾಗಿ ವಿಸ್ತರಿಸುವುದರ ಜೊತೆಗೆ, ಅದಕ್ಕೆ ಅಗತ್ಯವಾದ ವಿದ್ಯುತ್ ಜಾಲ ಸುಧಾರಣೆಗಳನ್ನು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.
