ಹಾವೇರಿ: ರಾಜ್ಯದಲ್ಲೀಗ ಎಲ್ಲೆಲ್ಲೂ ಬರಗಾಲದ ಛಾಯೆ ಆವರಿಸಿದೆ. ರೈತರ ಜಮೀನಿನಲ್ಲಿ ಬಿತ್ತನೆ ಮಾಡಿದ ಬೀಜ ಮಳೆರಾಯನ ಅವಕೃಪೆಯಿಂದ ಮೊಳಕೆ ಒಡೆಯುತ್ತಿಲ್ಲ. ಕೆಲವೆಡೆ ಮೊಳಕೆಯೊಡೆದ ಬೀಜ ಇನ್ನೇನೂ ಚಿಗುರಬೇಕು ಎನ್ನುವಾಗಲೇ ಒಣಗಿ ಹೋಗ್ತಿದೆ. ರೈತರು ಮಳೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇದೀಗ ರೈತರ ಸಮಸ್ಯೆ ಬಗೆಹರಿಸಲು ಹಾವೇರಿಯ (Haveri) ವಿವಿಧ ಕ್ಷೇತ್ರಗಳ ಶಾಸಕರು ಮುಂದಾಗಿದ್ದಾರೆ. ಮಂಗಳವಾರದಿಂದಲೇ ಮೋಡ ಬಿತ್ತನೆ (Cloud Seeding) ನಡೆಯಲಿದೆ.
ಹಾವೇರಿ ಜಿಲ್ಲೆ ಕೃಷಿ ಪ್ರಧಾನವಾದ ಜಿಲ್ಲೆ. ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಕೃಷಿಯೇ ಪ್ರಧಾನವಾಗಿದೆ. ಜಿಲ್ಲೆಯ ಬಹುತೇಕ ರೈತರಿಗೆ ಕೃಷಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಪ್ರಸಕ್ತ ವರ್ಷ ಜಿಲ್ಲೆಯ ರೈತರು ಮತ್ತೊಂದು ಬರಗಾಲ ಎದುರಾಗುತ್ತದೆ ಎನ್ನುವ ಭಯದಲ್ಲಿದ್ದಾರೆ. ಮುಂಗಾರು ಆರಂಭದ ದಿನದಲ್ಲಿ ಒಂದು ಮಳೆ ಆಗಿದ್ದು ಬಿಟ್ಟರೆ ನಂತರ ಮಳೆ ಬರಲೇ ಇಲ್ಲ. ಸಾಕಷ್ಟು ಹಣ ಖರ್ಚು ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಇದನ್ನೂ ಓದಿ: ಕೈಕೊಟ್ಟ ಮಳೆ – ಪೂರ್ವ ಮುಂಗಾರು ನಂಬಿ ಬಿತ್ತನೆ ಮಾಡಿದ್ದ ಬೆಳೆ ಉಳಿಸಿಕೊಳ್ಳಲು ರೈತರ ಪರದಾಟ
ಕೆಲವೆಡೆ ಬಿತ್ತನೆ ಮಾಡಿದ ಬೀಜ ಮೊಳಕೆಯೊಡೆದಿಲ್ಲ. ಮತ್ತೆ ಕೆಲವೆಡೆ ಮೊಳಕೆಯೊಡೆದು ಚಿಗುರಲು ತೇವಾಂಶವಿಲ್ಲದೆ ಬೆಳೆ ಒಣಗಿ ಹೋಗುತ್ತಿವೆ. ಬ್ಯಾಡಗಿ, ಹಾನಗಲ್ ತಾಲೂಕುಗಳಲ್ಲಿನ ಕೆಲವು ರೈತರು ಬಿತ್ತನೆ ಮಾಡಿದ ಬೀಜ ಮೊಳಕೆ ಒಡೆಯದೇ ಇರುವುದಕ್ಕೆ ಬೆಳೆಯನ್ನೇ ನಾಶ ಮಾಡಿದ್ದಾರೆ. ನೆರವಿಗೆ ಸರ್ಕಾರ ಮೋಡ ಬಿತ್ತನೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದರು.

ಹಲವೆಡೆ ರೈತರು ಮಳೆಗಾಗಿ ಊರ ದೇವರಿಗೆ ಪೂಜೆ, ಕಪ್ಪೆ ಮದುವೆ, ಗುರ್ಜಿ ಪೂಜೆ ಮೊರೆ ಹೋಗಿದ್ದಾರೆ. ಆದ್ರೂ ಮಳೆರಾಯ ಹನಿಯೊಡೆದು ಕೆಳಗೆ ಇಳಿಯುತ್ತಿಲ್ಲ. ರೈತರ ಈ ಸಂಕಷ್ಟವನ್ನು ಕಣ್ಣಾರೆ ಕಂಡಿರುವ ಶಾಸಕರು ಮೋಡಬಿತ್ತನೆ ಮಾಡಲು ಮುಂದಾಗಿದ್ದಾರೆ. ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ (Prakash Koliwad) ನೇತೃತ್ವದಲ್ಲಿ ಮಂಗಳವಾರದಿಂದಲೇ ಮೋಡ ಬಿತ್ತನೆ ನಡೆಯಲಿದೆ.
ಪ್ರಕಾಶ್ ಕೋಳಿವಾಡ ಅವರು ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಇವತ್ತು ಪ್ರಕಾಶ್ ಕೋಳಿವಾಡರಿಗೆ ಮೋಡ ಬಿತ್ತನೆ ಮಾಡಲು ಅನುಮತಿ ಸಿಕ್ಕಿದೆ. ಹೀಗಾಗಿ ಜಿಲ್ಲೆಯ ಆರೂ ಶಾಸಕರು ಸೇರಿಕೊಂಡು ಮೋಡ ಬಿತ್ತನೆ ಮಾಡಲು ಸಜ್ಜಾಗಿದ್ದಾರೆ. ಪ್ರಕಾಶ್ ಕೋಳಿವಾಡರದ್ದೇ ಸ್ವಂತ ವಿಮಾನ ಇರುವುದರಿಂದ ಅದರಿಂದಲೇ ಮೋಡ ಬಿತ್ತನೆ ಮಾಡಲು ಸಿದ್ದರಾಗಿದ್ದಾರೆ. ಮೋಡ ಬಿತ್ತನೆಗೆ ಪ್ರತಿ ಗಂಟೆಗೆ 15 ಲಕ್ಷ ರೂ. ಹಣ ಖರ್ಚಾಗುತ್ತದೆ. ಅದನ್ನು ಜಿಲ್ಲೆಯ ಆರೂ ಕ್ಷೇತ್ರಗಳ ಶಾಸಕರು ತಮ್ಮ ತಮ್ಮ ಸ್ವಂತ ಖರ್ಚಿನಿಂದ ಭರಿಸಲು ಮುಂದೆ ಬಂದಿದ್ದಾರೆ.
2033ರಲ್ಲೂ ಬರಗಾಲದ ಛಾಯೇ ಆವರಿಸಿದ್ದಾಗ ಪ್ರಕಾಶ್ ಕೋಳಿವಾಡ ಅವರು ಸರ್ಕಾರದಿಂದ ಅನುಮತಿ ಪಡೆದು ಮೋಡ ಬಿತ್ತನೆ ಮಾಡಿಸಿದ್ದರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆ – ಕೃಷ್ಣಾ, ದೂದಗಂಗಾ ನದಿಗಳಿಗೆ ಬಂತು ಜೀವಕಳೆ
