ನವದೆಹಲಿ: ಭಾರತದ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಹೆಚ್ಚಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (DAC) ಮಹತ್ವದ ಹೆಜ್ಜೆಯನ್ನಿಟ್ಟಿದೆ. ಮಾನವರಹಿತ ವೈಮಾನಿಕ ವಾಹನಗಳಾದ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ ʻಆಕಾಶ್ ತರಂಗ್ʼ ಸೇರಿ 52,000 ಕೋಟಿ ರೂ. ಮೊತ್ತದ ರಕ್ಷಣಾ ಸಾಮಗ್ರಿಗಳ ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ.
ಇಂದು ದೆಹಲಿಯಲ್ಲಿ ನಡೆದ ಸಭೆಯಲ್ಲಿ ರಕ್ಷಣಾ ಸ್ವಾಧೀನ ಮಂಡಳಿ (DAC) ಹೊಸ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸೇನಾ ಮುಖ್ಯಸ್ಥ ಜನರಲ್ ಧೀರಜ್ ಸೇಠ್, ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
3 ತಿಂಗಳ ಬಳಿಕ ಸಭೆ ನಡೆಸಿದ ಡಿಎಸಿ ಈ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಈ ವರ್ಷದ ಮಾರ್ಚ್‌ನಲ್ಲಿ ಕೊನೇ ಬಾರಿಗೆ ಸಭೆ ನಡೆದಿತ್ತು. ಆಗ ಡಿಎಸಿ ರಷ್ಯಾದಿಂದ 5 ಹೆಚ್ಚುವರಿ S-400 ರಕ್ಷಣಾ ವ್ಯವಸ್ಥೆಯನ್ನ ಖರೀದಿಸುವ ಮಹತ್ವದ ಪ್ರಸ್ತಾವನೆಗೆ ಅನುಮೋದನೆ ನೀಡಿತ್ತು. ಇದನ್ನೂ ಓದಿ: 40 ವರ್ಷಗಳ ಬಳಿಕ ಭಾರತೀಯ ಪ್ರಧಾನಿ ಐತಿಹಾಸಿಕ ಭೇಟಿ – ಮುಂದಿನ ವಾರ ನ್ಯೂಜಿಲೆಂಡ್‌ಗೆ ಮೋದಿ ಪ್ರವಾಸ

ಏನೇನು ಖರೀದಿಗೆ ಅನುಮೋದನೆ?
ʻಆಕಾಶ್ ತರಂಗ್ʼ ಹೆಸರಿನ ಮಾನವರಹಿತ ವೈಮಾನಿಕ ವಾಹನಗಳ (UAV) ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆ, ಮಧ್ಯಮ ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿ (MRSAM) ಶಸ್ತ್ರಾಸ್ತ್ರ ವ್ಯವಸ್ಥೆ, ಅತ್ಯಂತ ಕಡಿಮೆ ಶ್ರೇಣಿಯ ವಾಯು ರಕ್ಷಣಾ ವ್ಯವಸ್ಥೆ (VSHORADS), ಜೆಟ್-ಆಧಾರಿತ ಕಾಮಿಕೇಜ್ ಡ್ರೋನ್ (ಆತ್ಮಹತ್ಯಾ ಡ್ರೋನ್) ವ್ಯವಸ್ಥೆ, ನೌಕಾಪಡೆಗಾಗಿ ಮಾನವರಹಿತ ವೈಮಾನಿಕ ವ್ಯವಸ್ಥೆ (NSUAS) ಹಾಗೂ ಭಾರತೀಯ ವಾಯುಪಡೆಗೆ ಹೈ ಆಲ್ಟಿಟ್ಯೂಡ್ ಸ್ಯೂಡೋ ಸ್ಯಾಟಲೈಟ್ (FW-HAPS) ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಇದರೊಂದಿಗೆ ಮ್ಯಾನ್ ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ (MPATGM) ವ್ಯವಸ್ಥೆಗಳು ಮತ್ತು ಟ್ಯಾಂಕರ್‌ಗಳಿಗಾಗಿ ಸಕ್ರಿಯ ರಕ್ಷಣಾ ವ್ಯವಸ್ಥೆಗಳನ್ನು ಖರೀದಿಸುವ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಸ್ನೇಹಿತೆಯೊಂದಿಗೆ ವಿಡಿಯೋನಲ್ಲಿ ಮಾತನಾಡುತ್ತಲೇ ಮಹಿಳೆ ಆತ್ಮಹತ್ಯೆ – ಕರಾಳರಾತ್ರಿಯಲ್ಲಿ ಆಗಿದ್ದೇನು?
ಮ್ಯಾನ್-ಪೋರ್ಟಬಲ್ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಅಂದ್ರೆ ಒಬ್ಬನೇ ಸೈನಿಕ ಸುಲಭವಾಗಿ ಹೊತ್ತುಕೊಂಡು ಹೋಗಿ, ಭುಜದಿಂದ ಅಥವಾ ಟ್ರೈಪಾಡ್ ಮೂಲಕ ಶತ್ರುಗಳ ಟ್ಯಾಂಕ್‌ಗಳನ್ನ ನಾಶಪಡಿಸಬಹುದಾದ ಅತ್ಯಾಧುನಿಕ ಮತ್ತು ಹಗುರವಾದ ಕ್ಷಿಪಣಿ ವ್ಯವಸ್ಥೆಯಾಗಿದೆ.
ಮೂಲಗಳ ಪ್ರಕಾರ, ಆಕಾಶ್ ತರಂಗ್, ಭಾರತೀಯ ಸೇನೆಗೆ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಲಿದೆ. ಶಸ್ತ್ರಸಜ್ಜಿತ ವಾಹನಗಳು ಮತ್ತು ಸ್ವಯಂಚಾಲಿತ ತಂತ್ರಜ್ಞಾನಗಳ ಬಳಕೆಯಿಂದ ಎದುರಾಗುವ ಗಂಭೀರ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಇನ್ನೂ ಮಧ್ಯಮ ಶ್ರೇಣಿಯ MRSAM ಕ್ಷಿಪಣಿ ವ್ಯವಸ್ಥೆಯು ವಾಯು ರಕ್ಷಣೆ ಒದಗಿಸುತ್ತದೆ.
