ಮುಂಬೈ: ಭಾವಿ ಪತಿ ಕೇತನ್‌ನನ್ನು ಲೋಹಗಡ ಕೋಟೆಯಿಂದ (Lohagad Fort) ತಳ್ಳಿ ಕೊಲೆ ಮಾಡಿರುವ ಆರೋಪ ಎದುರಿಸುತ್ತಿರುವ ಸಿಯಾ (Siya Goyal) ಹಾಗೂ ಆಕೆಯ ಪ್ರಿಯಕರ ಇಬ್ಬರೂ ಕೋಡ್ ವರ್ಡ್ ಬಳಸಿ ಚಾಟಿಂಗ್ ಮಾಡಿದ್ದರು ಎಂಬ ವಿಚಾರ ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಆರೋಪಿಗಳು ಬಳಸಿದ ಕೋಡ್ ವರ್ಡ್‌ಗಳ ಬಗ್ಗೆ ಮಾಹಿತಿ ಕಲೆಹಾಕಲು ಸಿಯಾಳ ಇನ್ನೊಂದು ಮೊಬೈಲ್‌ನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಕೇತಗಳ ಅರ್ಥ ಹಾಗೂ ಉದ್ದೇಶದ ಬಗ್ಗೆ ತಿಳಿದು ಬಂದಿಲ್ಲ. ಈ ಬಗ್ಗೆ ಹೆಚ್ಚಿನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿ ಮನೋಜ್ ಪವಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಶಿವಾಜಿ ಮಹಾರಾಜರ ಶೌರ್ಯಕ್ಕೆ ಸಾಕ್ಷಿಯಾದ ಕೋಟೆಗೆ ʻಸಿಯಾ ಪಾಯಿಂಟ್ʼ ಹೆಸರು ಕಳಂಕ – ಸ್ಥಳೀಯರ ಆಕ್ರೋಶ

ಜೂನ್ 18 ರಂದು ಸಿಯಾ ಹಾಗೂ ಆಕೆಯ ಪ್ರಿಯಕರ ಚೇತನ್ ಸೇರಿ ಪುಣೆ ಬಳಿಯ ಲೋಹಗಡ ಕೋಟೆಯಿಂದ ಕೇತನ್‌ರನ್ನು ತಳ್ಳಿ ಕೊಲೆಗೈದಿದ್ದರು. ಈ ಘಟನೆ ಆಕಸ್ಮಿಕ ಎಂಬಂತೆ ಬಿಂಬಿಸಿದ್ದರು. ಪೊಲೀಸರ ತನಿಖೆಯಲ್ಲಿ ಆರೋಪಿಗಳ ಪಾತ್ರ ದೃಢಪಟ್ಟಿದೆ. ಇನ್ನೂ ಈ ಹತ್ಯೆಗೂ ಮುನ್ನ ಹಾಗೂ ಹತ್ಯೆಯ ಬಳಿಕ ಕೋಡ್ ವರ್ಡ್ ಬಳಸಿ ಆರೋಪಿಗಳು ಚಾಟ್ ಮಾಡಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇಬ್ಬರು ಆರೋಪಿಗಳಲ್ಲಿ ಯಾರು ಕೋಟೆಯಿಂದ ಕೇತನ್‌ನನ್ನು ತಳ್ಳಿದ್ದು ಎಂಬುದು ಇನ್ನೂ ಪೊಲೀಸರಿಗೆ ಕಗ್ಗಂಟಾಗಿದೆ. ಈ ಬಗ್ಗೆ ಸಿಯಾ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಇದರಿಂದ ಆಕೆಗೆ ಸುಳ್ಳು ಪತ್ತೆ ಪರೀಕ್ಷೆ ಹಾಗೂ ಮಂಪರು ಪರೀಕ್ಷೆ ನಡೆಸಲು ಪೊಲೀಸರು ನ್ಯಾಯಾಲಯದ ಅನುಮತಿಗಾಗಿ ಕಾಯುತ್ತಿದ್ದಾರೆ. ಇನ್ನೂ ಸುಳ್ಳು ಪತ್ತೆ ಪರೀಕ್ಷೆಗೆ ಸಿಯಾ ಒಪ್ಪಿಕೊಂಡಿದ್ದಾಳೆ.
ಸಿಯಾ ಮತ್ತು ಚೇತನ್ ಇಬ್ಬರನ್ನೂ ಜುಲೈ 16 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದನ್ನೂ ಓದಿ: ಇಬ್ಬರಲ್ಲಿ ಕೋಟೆಯಿಂದ ತಳ್ಳಿದವರ‍್ಯಾರು? – ಸುಳ್ಳು ಪತ್ತೆ ಪರೀಕ್ಷೆಗೆ ಒಪ್ಪಿದ ಸಿಯಾ
