Connect with us

Latest

ಧರಿಸುವ ಬಟ್ಟೆಯಿಂದ ಮಹಿಳೆಯನ್ನು ವ್ಯಾಖ್ಯಾನಿಸಬಾರದು- ಇವಿಎಂ ಹಿಡಿದ ಅಧಿಕಾರಿ ಮಾತು

Published

on

ಭೋಪಾಲ್: ದೇಶದಲ್ಲಿ ಲೋಕಸಭಾ ಚುನಾವಣೆಯ ಬ್ಯುಸಿ ಮಧ್ಯೆಯೂ ಹಳದಿ ಬಣ್ಣದ ಸಾರಿ ಹಾಗೂ ನೀಲಿ ಬಣ್ಣದ ಗೌನ್ ಧರಿಸಿ ಇವಿಎಂ ಮೆಷಿನ್ ಹಿಡಿದುಕೊಂಡು ಹೋಗುತ್ತಿದ್ದ ಮಹಿಳೆಯರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು.

ಒಬ್ಬರು ನೀಲಿ ಬಣ್ಣದ ಗೌನ್ ಧರಿಸಿದರೆ, ಮತ್ತೊಬ್ಬರು ಹಳದಿ ಬಣ್ಣದ ಸೀರೆ ಉಟ್ಟು, ಕೂಲಿಂಗ್ ಗ್ಲಾಸ್ ಹಾಕಿಕೊಂಡು ತಮ್ಮ ಎರಡೂ ಕೈಗಳಲ್ಲೂ ಇವಿಎಂ ಹಿಡಿದುಕೊಂಡ ಇಬ್ಬರು ಮಹಿಳೆಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ನೀಲಿ ಬಣ್ಣದ ಗೌನ್ ಧರಿಸಿರುವ ಮಹಿಳೆಯೇ ಪ್ರತಿಕ್ರಿಯಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ಹೌದು. ಗೌನ್ ಧರಿಸಿದವರ ಹೆಸರು ಯೋಗೇಶ್ವರಿ ಗೋಹೈಟ್ ಆದರೆ, ಮತ್ತೊಬ್ಬರ ಹೆಸರು ರೀನಾ ದ್ವಿವೇದಿ ಎಂಬುದಾಗಿದೆ. ಯೋಗೇಶ್ವರಿಯವರು ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಫೇಸ್ ಬುಕ್ ನಲ್ಲಿ ಸಾವಿರಾರು ಮಂದಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲು ಆರಂಭಿಸಿದ್ದಾರಂತೆ. ಹೀಗಾಗಿ ಅವರು ತನ್ನ ಖಾತೆಯನ್ನು ಮರೆಮಾಚಲು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾರೆ.

ಗೋಹೈಟ್ ಅವರು ಕೆನರಾ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದು, ಭಾನುವಾರ ನಡೆದ ಚುನಾವಣಾ ಸಮಯದಲ್ಲಿ ಅವರನ್ನು ಭೋಪಾಲ್ ನ ಗೋವಿಂದಪುರ ಕ್ಷೇತ್ರದಲ್ಲಿ ಮತಗಟ್ಟೆಯ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಹಾಗೆಯೇ ಅವರು ಮತಗಟ್ಟೆಗೆ ಬರುತ್ತಿದ್ದಂತೆಯೇ ಫೋಟೋಗ್ರಾಫರ್ ಗಳು ಝೂಮ್ ಮಾಡಿ ಫೋಟೋ ತೆಗೆಯಲು ಆರಂಭಿಸಿದ್ದಾರೆ. ಅಧಿಕಾರಿ ನೀಲಿ ಬಣ್ಣದ ಗೌನ್ ಧರಿಸಿ, ಒಂದು ಕೈನಲ್ಲಿ ಟ್ರೆಂಡಿ ಬ್ಯಾಗ್ ಹಾಗೂ ಇನ್ನೊಂದು ಕೈಯಲ್ಲಿ ಬ್ಯಾಲೆಟ್ ಪೇಪರ್ ಹಿಡಿದುಕೊಂಡು ಹೋಗುತ್ತಿದ್ದಾಗ ಸುತ್ತಮುತ್ತ ಇದ್ದವರೆಲ್ಲ ಒಂದು ಬಾರಿ ಕತ್ತೆತ್ತಿ ನೋಡಿದ್ದಾರೆ. ಇದೇ ವೇಳೆ ಫೋಟೋಗ್ರಾಫರ್ ಗಳು ಮುಗಿಬಿದ್ದು ಫೋಟೋ ತೆಗೆಯಲು ಆರಂಭಿಸಿದರು. ಇದನ್ನು ಗಮನಿಸಿದ ಅಧಿಕಾರಿಗೆ ಇರುಸುಮುರುಸು ಉಂಟಾಗಿದ್ದು, ಆದರೂ ಕ್ಯಾಮೆರಾಗಳಿಗೆ ಒಂದು ಸಣ್ಣ ನಗೆ ಬೀರಿ ಅಲ್ಲಿಂದ ಮುಂದೆ ಹೋಗಿದ್ದಾರೆ.

ಆದರೆ ಮಧ್ಯಾಹ್ನದ ಬಳಿಕ ಅಧಿಕಾರಿ ಫೋಟೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಮಹಿಳೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದಾರೆ. ಆದರೆ ಕರ್ತವ್ಯದಲ್ಲಿದ್ದ ಕಾರಣ ಅವರು ಮಾತನಾಡಲು ನಿರಾಕರಿಸಿದ್ದಾರೆ.  ಕರ್ತವ್ಯ ಮಗಿದ ಬಳಿಕವೂ ಅಧಿಕಾರಿ ಪತ್ರಕರ್ತರ ಜೊತೆ ಮಾತನಾಡಲು ನಿರಾಕರಿಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಮತದಾನದ ಮರುದಿನ ಅಂದರೆ ಸೋಮವಾರ ಮಾಧ್ಯಮದ ಜೊತೆ ಮಾತನಾಡಿದ ಅಧಿಕಾರಿ, ಎಲ್ಲರೂ ನನ್ನ ಕಡೆಯೇ ಗಮನ ಹರಿಸಿದ್ದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯ್ತು. ನನ್ನಷ್ಟದಂತೆ ನಾನು ಡ್ರೆಸ್ ಮಾಡಿಕೊಂಡಿದ್ದೇನೆ. ನಾನು ಯಾವುದೇ ಮಾಡೆಲ್ ಅಲ್ಲ. ಅಲ್ಲದೆ ಯಾವುದೇ ಫ್ಯಾಶನ್ ಮಾಡಿಕೊಂಡು ಮತಗಟ್ಟೆಗೆ ಬಂದಿಲ್ಲ. ಹೀಗಾಗಿ ನಾವು ಧರಿಸುವ ಬಟ್ಟೆಯಿಂದ ನಮ್ಮನ್ನು ವ್ಯಾಖ್ಯಾನ ಮಾಡಬೇಡಿ. ಇದು ನಮ್ಮ ವೃತ್ತಿಯಾಗಿದೆ. ಇಲ್ಲಿನ ನೀತಿ ನಿಯಮಗಳಷ್ಟೇ ನಮಗೆ ಮುಖ್ಯವಾಗುತ್ತದೆ ಎಂದು ಖಾರವಾಗಿಯೇ ಪ್ರತಿಕ್ರಿಯಸಿದ್ದಾರೆ.

ಅಧಿಕಾರಿ ಸೋಮವಾರ ಕರ್ತವ್ಯದಿಂದ ತೆರಳಿದ್ದಾರೆ. ಆ ಬಳಿಕ ಮಾಧ್ಯಮದವರು ಭೋಪಾಲ್ ನಲ್ಲಿರುವ ಅವರ ಮನೆ ವಿಳಾಸವನ್ನು ಕಂಡು ಹಿಡಿದು ಅಲ್ಲಿಗೆ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲರೂ ಮಹಿಳಾ ಅಧಿಕಾರಿಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

2011ರ ಜವರಿಯಲ್ಲಿ ಗೋಹೈಟ್ ಕೆನರಾ ಬ್ಯಾಂಕ್ ಉದ್ಯೋಗಿಯಾಗಿ ಸೇರಿಕೊಂಡಿದ್ದಾರೆ. 7 ವರ್ಷದ ಹಿಂದೆ ದೆವೆನ್ ಓಂಕಾರ್ ಎಂಬವರನ್ನು ವರಿಸಿರುವ ಅಧಿಕಾರಿ, ಪ್ರಜಾಪ್ರಭುತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ನನ್ನದು ಒಂದು ಪುಟ್ಟ ಪಾತ್ರವಿರುವುದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದ್ದಾರೆ.