Districts

ಮಕ್ಕಳಿಗೆ ದಿನಾಲೂ ಪಾಠ – ಕೊಪ್ಪಳದ ಯುವಕರ ಶಿಕ್ಷಣ ಪ್ರೇಮ

Published

on

Share this

ಕೊಪ್ಪಳ: ಕೊರೊನಾದಿಂದಾಗಿ ಶಾಲೆಗಳು ಬಂದ್ ಆಗಿವೆ. ಹೀಗಾಗಿ ಓಣಿಯಲ್ಲಿ ಆಟವಾಡುತ್ತಾ ಕಾಲಹರಣ ಮಾಡುವ ಮಕ್ಕಳಿಗೆ ನಿರಂತರ ಶಿಕ್ಷಣ ನೀಡುತ್ತಿರುವ ಕೊಪ್ಪಳ ಯುವಕರಿಬ್ಬರು ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕಳೆದ ಎರಡು ವರ್ಷಗಳಿಂದ ಕೊರನಾದಿಂದಾಗಿ ಪ್ರಾಥಮಿಕ ಶಾಲೆಗಳಂತೂ ಆರಂಭವಾಗಿಲ್ಲ. ಪ್ರೌಢ ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ನೀಡುತ್ತಿದ್ದಾರೆ. ಈ ವರ್ಷ ಒಂದನೆಯ ತರಗತಿಯಿಂದಲೇ ಆನ್‍ಲೈನ್ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಆದರೆ ಬಡವರ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ಪಡೆಯಲು ಸಾಧ್ಯವಿಲ್ಲ, ಶಾಲೆಯಿಂದ ದೂರವಾದ ಮಕ್ಕಳು ಓದು ಬರಹವನ್ನು ಮರೆಯುತ್ತಿದ್ದಾರೆ. ಆದರೆ ಕೊಪ್ಪಳದಲ್ಲಿರುವ ಯುವಕರು ಬಡ ಮಕ್ಕಳಿಗಾಗಿ ನಿರಂತರ ಶಿಕ್ಷಣ ನೀಡುತ್ತಿದ್ದಾರೆ.

ಕೊಪ್ಪಳ ನಗರದಲ್ಲಿರುವ ಕಾಳಿದಾಸ ನಗರ, ಹಮಾಲರ ಕಾಲೋನಿ, ಬೇಲ್ದಾರ ಕಾಲೋನಿಗಳೆಂದರೆ ಬಹುತೇಕ ಬಡವರೇ ವಾಸವಾಗಿರುವ ಬಡಾವಣೆಗಳಾಗಿವೆ. ಮಕ್ಕಳಿಗೆ ಈಗ ಶಾಲೆ ಇಲ್ಲದೆ ಇರುವದರಿಂದ ಕೆಲವರು ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆ. ಶಾಲೆಗಳು ಬಂದ್ ಆಗಿದ್ದರಿಂದ ಶಿಕ್ಷಣದಿಂದ ದೂರವಾಗಿದ್ದರು, ಇಂಥ ಮಕ್ಕಳಿಗೆ ಯಾಕೆ ತಮಗೆ ತಿಳಿದಷ್ಟು ಶಿಕ್ಷಣ ನೀಡಬಾರದು ಎಂದುಕೊಂಡು ಬಡಾವಣೆಯ ವಿಠ್ಠಲ್ ಗೊಂದಳಿ ಹಾಗೂ ಮಲ್ಲೇಶ್ ನಿತ್ಯ ಎರಡು ಹೊತ್ತು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

ವಿಠ್ಠಲ್ ಖಾಸಗಿ ಬ್ಯಾಂಕ್‍ವೊಂದರಲ್ಲಿ ಕೆಲಸ ಮಡುತ್ತಾರೆ. ಮಲ್ಲೇಶ್ ಕಾರ್ಖಾನೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ಗುತ್ತಿಗೆದಾರರಾಗಿದ್ದಾರೆ. ವಿಠ್ಠಲ ಎಂಕಾಂ ಪದವಿಧರ, ಮಲ್ಲೇಶ ಪಿಯುಸಿ ಮುಗಿಸಿದ್ದಾರೆ. ತಮ್ಮ ಬಡಾವಣೆಯ ಮಕ್ಕಳಿಗೆ ಶಿಕ್ಷಣದಿಂದ ದೂರವಾಗಿ ಮುಂದೆ ಶಾಲೆ ಆರಂಭವಾದರೂ ಅವರಿಗೆ ಪಾಠಗಳು ಅರ್ಥವಾಗುವುದು ಕಷ್ಟ ಎಂದುಕೊಂಡು ಈ ಬಡಾವಣೆಯ ಮಕ್ಕಳಿಗೆ ಮುಂಜಾನೆ 6 ರಿಂದ 9 ಹಾಗೂ ಸಂಜೆ 5 ರಿಂದ 7 ಗಂಟೆಯವರೆಗೂ ಪಾಠ ಮಾಡುತ್ತಾರೆ.

ಬಡಾವಣೆಯ ಸುಮಾರು 80 ಮಕ್ಕಳು ಪಾಠ ಕೇಳಲು ಬರುತ್ತಿದ್ದು, ಬಂದವರು ಮುಂಜಾನೆ ವ್ಯಾಯಮ ಮಾಡಿ ನಂತರದಲ್ಲಿ ಪಾಠವನ್ನು ಕಲಿಯುತ್ತಿದ್ದಾರೆ. ಈ ಮೊದಲು ಎರಡರ ಮಗ್ಗಿಯನ್ನು ಸಹ ಹೇಳಲು ಬಾರದವರು ಈಗ 30 ರವರೆಗೆ ಮಗ್ಗಿ ಹೇಳುತ್ತಿದ್ದಾರೆ. ತಮ್ಮ ತರಗತಿಯ ಪಾಠಗಳನ್ನು ಓದುತ್ತಿದ್ದು, ಅರ್ಥವಾಗದೇ ಇರುವದನ್ನು ಪ್ರಶ್ನಿಸಿ ಅರ್ಥಮಾಡಿಕೊಳ್ಳುತ್ತಿದ್ದಾರೆ.

ಮುಂಜಾನೆ ಮಕ್ಕಳಿಗೆ ಪಾಠ ಮಾಡಿ ನಂತರ ತಮ್ಮ ಕೆಲಸಕ್ಕೆ ಹೋಗಿ ಮತ್ತೆ ಸಂಜೆ ವಾಪಸ್ಸಾಗಿ ಬಂದ ನಂತರ ಮತ್ತೆ ಪಾಠ ಮಾಡುವ ಈ ಇಬ್ಬರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳನ್ನು ಸಮಾಜಿಕ ಅಂತರದಲ್ಲಿ ಕುಳ್ಳಿರಿಸಿ ಅವರಿಗೆ ಪಾಠ ಮಾಡುತ್ತಿದ್ದಾರೆ. ಲಾಕ್‍ಡೌನ್ ನಿಂದಾಗಿ ಶಾಲಾ ವ್ಯವಸ್ಥೆಯೇ ಬದಲಾಗಿರುವಾಗ ಈ ಯುವಕರ ತಮ್ಮ ಬಡಾವಣೆಯ ಮಕ್ಕಳಿಗಾಗಿ ಪಾಠ ಮಾಡುತ್ತಿರುವುದು ವಿಶೇಷವಾಗಿದೆ. ಶಾಲೆಗಳು ಯಾವಾಗ ಆರಂಭವಾಗುತ್ತವೊ ಗೊತ್ತಿಲ್ಲ, ಆದರೆ ಈ ಬಡಾವಣೆಯ ಮಕ್ಕಳಿಗೆ ಶಿಕ್ಷಣವಂತೂ ನಿರಂತರವಾಗಿ ದೊರೆಯುತ್ತಿದೆ.

Click to comment

Leave a Reply

Your email address will not be published. Required fields are marked *

Advertisement
Advertisement